ಕೆಟ್ಟು ಹೋದ 630 ಕೆಜಿ ಬೆಲ್ಲ ಎಡೆಯೂರು ಶ್ರೀಸಿದ್ದಲಿಂಗೇಶ್ವರ ದೇಗುಲಕ್ಕೆ ದಾನ..!

| Published : Sep 30 2024, 01:16 AM IST

ಕೆಟ್ಟು ಹೋದ 630 ಕೆಜಿ ಬೆಲ್ಲ ಎಡೆಯೂರು ಶ್ರೀಸಿದ್ದಲಿಂಗೇಶ್ವರ ದೇಗುಲಕ್ಕೆ ದಾನ..!
Share this Article
  • FB
  • TW
  • Linkdin
  • Email

ಸಾರಾಂಶ

ತಿರುಪತಿ ದೇಗುಲದ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು ಸೇರಿರುವ ವರದಿ ಬಹಿರಂಗವಾದ ಬಳಿಕ ದೇಶದ ವಿವಿಧ ಪುರಾಣ ಪ್ರಸಿದ್ಧ ದೇವಾಲಯಗಳ ಪ್ರಸಾದವನ್ನು ಪರಿಶೀಲಿಸಲಾಗುತ್ತಿದೆ. ಇದರ ಜೊತೆಯಲ್ಲೇ ರಾಜ್ಯದ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ಕೆಟ್ಟು ಹೋಗಿರುವ 630 ಕೆಜಿ ಬೆಲ್ಲವನ್ನು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಶ್ರೀ ಮುಳುಕಟ್ಟಮ್ಮ ದೇಗುಲದಿಂದ ದಾನವಾಗಿ ನೀಡಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಗಮಂಗಲ ತಹಸೀಲ್ದಾರ್‌ ಆಗಿದ್ದ ಎನ್‌.ಎ.ಕುಂಞ ಅಹಮದ್‌ ಅವರು ವಾಸನೆ ಬರುತ್ತಿದ್ದ ಹಾಗೂ ಬಳಸಲು ಯೋಗ್ಯವಾಗಿಲ್ಲದ ಬೆಲ್ಲವನ್ನು ಪಾಂಡವಪುರ ಉಪ ವಿಭಾಗಾಧಿಕಾರಿಗಳ ಮೌಖಿಕ ನಿರ್ದೇಶನದ ಮೇರೆಗೆ ಎಡೆಯೂರಿನ ಶ್ರೀಸಿದ್ದಲಿಂಗಸ್ವಾಮಿ ಕ್ಷೇತ್ರಕ್ಕೆ ದಾನವಾಗಿ ನೀಡಿ ಸ್ವೀಕೃತಿಯನ್ನು ಸಲ್ಲಿಸುವಂತೆ ಸೂಚಿಸಿದ್ದರ ಮೇರೆಗೆ ಅಲ್ಲಿಗೆ ರವಾನಿಸಲಾಗಿತ್ತು ಎಂದು ದಾಖಲೆಗಳಿಂದ ಬೆಳಕಿಗೆ ಬಂದಿದೆ.

ಶ್ರೀಸಿದ್ದಲಿಂಗೇಶ್ವರಸ್ವಾಮಿ ಕ್ಷೇತ್ರದವರು ಈ ಯೋಗ್ಯವಲ್ಲದ ಬೆಲ್ಲವನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ ಎಂಬ ಬಗ್ಗೆ ತನಿಖೆ ಆಗಬೇಕು ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್‌.ರವೀಂದ್ರ ಅವರು ಜಿಲ್ಲಾಧಿಕಾರಿಗೆ ದೂರು ನೀಡಿ ಒತ್ತಾಯಿಸಿದ್ದಾರೆ.

ಮುಳುಕಟ್ಟಮ್ಮ ದೇಗುಲದಲ್ಲಿ 23 ಅಕ್ಟೋಬರ್‌ 2021ರಂದು ದೇವಸ್ಥಾನಕ್ಕೆ ಭಕ್ತಾಧಿಗಳು ನೀಡಿರುವ ಪದಾರ್ಥಗಳನ್ನು ಸ್ವಚ್ಛಗೊಳಿಸಿ ವಿಂಗಡಣೆ ಮಾಡಿದ ವೇಳೆ 1262 ಕೆಜಿ ಸ್ವಚ್ಛವಾಗಿರುವ ಅಕ್ಕಿ, 1262 ಕೆಜಿ ಸಾಧಾರಣ ಅಕ್ಕಿ, 3489 ಕೆಜಿ ಕೆಟ್ಟು ಹೋಗಿರುವ ಅಕ್ಕಿ, 630 ಕೆಜಿ ಪೂರ್ಣ ಕೆಟ್ಟುಹೋಗಿರುವ ಬೆಲ್ಲ, 1680 ಸೀರೆಗಳಿರುವುದನ್ನು ತಹಸೀಲ್ವಾರ್‌ ಮೇಲ್ವಿಚಾರಣೆಯಲ್ಲಿ ರಾಜಸ್ವ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರು ವರದಿ ನೀಡಿದ್ದರು.

ರಾಜಸ್ವ ನಿರೀಕ್ಷಕರು ಶ್ರೀಮುಳುಕಟ್ಟಮ್ಮ ದೇವಸ್ಥಾನಕ್ಕೆ ಭಕ್ತಾದಿಗಳು ನೀಡಿದ್ದ ಬೆಲ್ಲ ಸಂಪೂರ್ಣವಾಗಿ ಕೆಟ್ಟುಹೋಗಿ ಇದನ್ನು ದೇವಸ್ಥಾನದಲ್ಲಿ ಬಳಸಲು, ಸಂಗ್ರಹಿಸುವುದಕ್ಕೆ ಯೋಗ್ಯವಲ್ಲವೆಂದು ತಿಳಿಸಿದ್ದರೂ ಪಾಂಡವಪುರ ಉಪವಿಭಾಗಾಧಿಕಾರಿ ಮೌಖಿಕ ನಿರ್ದೇಶನದ ಮೇರೆಗೆ ಶ್ರೀ ಎಡೆಯೂರು ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದಾನವಾಗಿ ನೀಡಿ ಸ್ವೀಕೃತಿಯನ್ನು ಕಚೇರಿಗೆ ಸಲ್ಲಿಸುವಂತೆ ಸೂಚಿಸಿದ್ದರು.

ಈ ಕಳಪೆ ಬೆಲ್ಲವನ್ನು ಪ್ರಸಾದಕ್ಕೆ ಬಳಸಲಾಗಿದೆಯೋ, ಅಡುಗೆಗೆ ಬಳಸಲಾಗಿದೆಯೋ ಅಥವಾ ಇನ್ಯಾವ ಉದ್ದೇಶಕ್ಕೆ ಬಳಸಲಾಗಿದೆ ಎನ್ನುವುದು ಸಂಪೂರ್ಣವಾಗಿ ತನಿಖೆ ಆಗಬೇಕಿದೆ.

ಶ್ರೀಮುಳುಕಟ್ಟಮ್ಮ ದೇವಸ್ಥಾನಕ್ಕೆ ಭಕ್ತರು ನೀಡಿದ್ದ ಅಕ್ಕಿ ಮತ್ತು ಬೆಲ್ಲ ಕೆಡುವುದಕ್ಕೆ ತಹಸೀಲ್ದಾರ್‌ ಮತ್ತು ಅಧೀನ ಸಿಬ್ಬಂದಿ ಹೊಣೆಗಾರರಾಗಿದ್ದಾರೆ. ಜೊತೆಗೆ ಅಕ್ಕಿ ಹಾಗೂ 1680 ಸೀರೆಗಳು ಹರಾಜು ಮಾಡಿರುವ ಬಗ್ಗೆ ಅನುಮಾನವಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮಕ್ಕೆ ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿದ್ದಾರೆ.