ಸಾರಾಂಶ
ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಕೊಡುಗೆಗಳು ಅತ್ಯಮೂಲ್ಯವಾದದ್ದು, ಅವರು ನಮ್ಮ ದೇಶಕ್ಕೆ ನೀಡಿರುವ ಸಂವಿಧಾನವು ಜಗತ್ತಿನ ಎಲ್ಲ ಸಂವಿಧಾನಗಳಲ್ಲಿ ಸರ್ವಶ್ರೇಷ್ಠವಾಗಿದೆ.
ಶಿರಸಿ: ನಗರದ ಅಂಬೇಡ್ಕರ್ ಭವನದಲ್ಲಿ ಭೀಮಘರ್ಜನೆ ಸಂಘಟನೆಯ ವತಿಯಿಂದ ೧೩೩ನೆ ಅಂಬೇಡ್ಕರ್ ಜಯಂತಿ ಹಾಗೂ ಜಿಲ್ಲಾ ಸಮಾವೇಶ ಅತ್ಯಂತ ವಿಜೃಂಭಣೆಯಿಂದ ಜರುಗಿತು.ಭಾನುವಾರ ಅಂಬೇಡ್ಕರ್ ಜಯಂತಿ ಪ್ರಯುಕ್ತ ಭೀಮಘರ್ಜನೆ ಸಂಘಟನೆಯ ನೇತೃತ್ವದಲ್ಲಿ ರಥ ಸಿದ್ಧಪಡಿಸಿ ಅದರಲ್ಲಿ ಅಂಬೇಡ್ಕರ್ ಭಾವಚಿತ್ರ ಇರಿಸಿ ನಗರಾದ್ಯಂತ ಮೆರವಣಿಗೆ ನಡೆಸಲಾಯಿತು.
ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್, ಭೀಮಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷ ಅರ್ಜುನ್ ಮಿಂಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ್ ಬೋರ್ಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್, ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆ, ಸಿದ್ಧಾಂತ, ಅವರು ಹಾಕಿಕೊಟ್ಟ ಮಾರ್ಗ ಹಾಗೂ ಅವರ ದೂರದೃಷ್ಟಿ ನೋಡಿದಾಗ ಅವರನ್ನು ಆಧುನಿಕ ಭಾರತದ ನಿರ್ಮಾತೃ ಎಂದು ಕರೆಯಲಾಗುತ್ತದೆ. ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಕೊಡುಗೆಗಳು ಅತ್ಯಮೂಲ್ಯವಾದದ್ದು, ಅವರು ನಮ್ಮ ದೇಶಕ್ಕೆ ನೀಡಿರುವ ಸಂವಿಧಾನವು ಜಗತ್ತಿನ ಎಲ್ಲ ಸಂವಿಧಾನಗಳಲ್ಲಿ ಸರ್ವಶ್ರೇಷ್ಠವಾಗಿದೆ ಎಂದರು.ಭೀಮಘರ್ಜನೆ ಜಿಲ್ಲಾಧ್ಯಕ್ಷ ಅರ್ಜುನ್ ಮಿಂಟಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಅಪಾರ ಜ್ಞಾನ ಸಂಪತ್ತನ್ನು ಹೊಂದಿದ್ದರು. 32ಕ್ಕೂ ಅಧಿಕ ಪದವಿಗಳನ್ನು ಪಡೆದ ಜಗತ್ತಿನ ಏಕೈಕ ವ್ಯಕ್ತಿ ಅಂಬೇಡ್ಕರ್. ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ, ಅರ್ಥಶಾಸ್ತಜ್ಞ, ನ್ಯಾಯಶಾಸ್ತಜ್ಞ ಹಾಗೂ ಸಮಾಜ ಸುಧಾರಕರಾಗಿದ್ದರು ಎಂದರು.
ಸಂಘಟನೆಯ ಸಲಹೆಗಾರ ರಾಜೇಶ್ ದೇಶಭಾಗ್ ಮಾತನಾಡಿದರು. ಅಂಬೇಡ್ಕರ್ ಭವನದಿಂದ ಹೊರಟ ಮೆರವಣಿಗೆಯು ಅಶ್ವಿನಿ ಸರ್ಕಲ್, ದೇವಿಕೆರೆ, ನಟರಾಜ ರಸ್ತೆ, ಬಿಡ್ಕಿ ಸರ್ಕಲ್ ಮೂಲಕ ಶಿವಾಜಿ ಚೌಕ್ ತಲುಪಿ, ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಅಲ್ಲಿಂದ ಹೊರಟು ಅಂಬೇಡ್ಕರ್ ಸರ್ಕಲ್‌ನಲ್ಲಿ ಸಂಪನ್ನಕೊಂಡಿತು.ಭೀಮಘರ್ಜನೆ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜಯ್ ಮಡಗಾವಂಕರ್, ಉಪಾಧ್ಯಕ್ಷ ತಿಲಕ್ ಹುಬ್ಬಳ್ಳಿ, ಸಂಘಟನಾ ಕಾರ್ಯದರ್ಶಿ ಅಮಿತ್ ಜೋಗಳೇಕರ್, ಖಚಾಂಜಿ ಕುಮಾರ್ ಹುಬ್ಬಳ್ಳಿ, ರಾಘು ಮಿಂಟಿ, ತಾಲೂಕು ಅಧ್ಯಕ್ಷ ಪುನೀತ್ ಮರಾಠೆ, ಉಪಾಧ್ಯಕ್ಷ ಶ್ಯಾಮ್ ದೇಶಭಾಗ್, ಕಾರ್ಯದರ್ಶಿ ನವೀನ ಕಾನಡೆ, ಭಾರ್ಗವ ಕಾನಡೆ, ಗೌತಮ ನೇತ್ರೇಕರ್, ಪಿಂಟು ಬಾಪೂಜಿನಗರ, ಗುರುರಾಜ್ ಮಿಂಟಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಸಂಘಟನೆಯ ಪದಾಧಿಕಾರಿಗಳು ಹಾಗೂ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.