ಕೆಲ ಲಿಂಗಾಯತ ನಾಯಕರಿಂದಲೇ ಅನ್ಯಾಯ: ಬಸನಗೌಡ ಯತ್ನಾಳ

| Published : Mar 12 2024, 02:01 AM IST

ಕೆಲ ಲಿಂಗಾಯತ ನಾಯಕರಿಂದಲೇ ಅನ್ಯಾಯ: ಬಸನಗೌಡ ಯತ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದ ನಾಯಕರೆಂದು ನಂಬಿದ್ದೇವೆಯೋ ಅವರಿಂದಲೇ ಮೋಸ. ಅವರೆಲ್ಲ ತಮ್ಮ ಬೆಳಗವಣಿಗೆಗೆ, ತಮ್ಮ ಮಕ್ಕಳ, ಸಂಬಂಧಿಕರ ಶ್ರೇಯೋಭಿವೃದ್ಧಿಗಾಗಿ ಸಮಾಜ ಬಲಿ ಕೊಡುತ್ತಿದ್ದಾರೆ ಎಂದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮುದಗಲ್

ರಾಜ್ಯದಲ್ಲಿ ಲಿಂಗಾಯತ ಸಮಾಜದ ನಾಯಕರೆಂದೆ ನಂಬಿಕೊಂಡಿರುವ ಯಡಿಯೂರಪ್ಪ, ಶಾಮನೂರು, ಖಂಡ್ರೆ ಇವರಿಂದಲೇ ಸಮಾಜಕ್ಕೆ ಅನ್ಯಾಯವಾಗುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನೇರವಾಗಿ ಆರೋಪಿಸಿದರು.

ಪಟ್ಟಣದ ಸಮೀಪವಿರುವ ಬುದ್ದಿನ್ನಿ ಗ್ರಾಮದಲ್ಲಿ ಪಂಚಮಸಾಲಿ ಸಮುದಾಯದವರು ಹಮ್ಮಿಕೊಂಡ ವೀರರಾಣಿ ಕಿತ್ತೂರ ಚೆನ್ನಮ್ಮ ಮೂರ್ತಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲ ಜಾಗೃತರಾಗಬೇಕು ಸಂಘಟಿತರಾಗಬೇಕು. ನಾವು ನಮ್ಮ ಸಮಾಜದ ನಾಯಕರೆಂದು ನಂಬಿದ್ದೇವೆಯೋ ಅವರಿಂದಲೇ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಅವರೆಲ್ಲ ತಮ್ಮ ಬೆಳಗವಣಿಗೆಗೆ, ತಮ್ಮ ಮಕ್ಕಳ, ಸಂಬಂಧಿಕರ ಶ್ರೇಯೋಭಿವೃದ್ಧಿಗಾಗಿ ಸಮಾಜ ಬಲಿ ಕೊಡುತ್ತಿದ್ದಾರೆ ಎಂದು ದೂರಿದರು.

ಜಾತಿ ಗಣತಿಯಲ್ಲಿ ಕೂಡ ಸಮಾಜಕ್ಕೆ ಅನ್ಯಾಯವಾಗಿದೆ. ಎಲ್ಲೋ ಕುಳಿತು ಗಣತಿ ಮಾಡಿ ತಪ್ಪು ಕಂಡಿದ್ದರೂ ವೀರಶೈವ ಸಮಾಜ ಕಣ್ಣು ಮುಚ್ಚಿ ಕುಳಿತಿದೆ. ಡಾವಣಗೆರೆಯಲ್ಲಿ, ಬಸವಕಲ್ಯಾಣದಲ್ಲಿ ಸಮಾವೇಶ ಮಾಡುವ ಮೂಲಕ ಸಚಿವ ಸ್ಥಾನ ಕೊಡಲು, ನಿಗಮ ಮಂಡಲಿ ಅದ್ಯಕ್ಷ ಸ್ಥಾನ ನೀಡಲು ಮುಖಂಡರಿಗೆ ಬೇಡಿಕೆ ಸಲ್ಲಿಸಲು ತಮ್ಮ ಸಮುದಾಯದ ಸಂಖ್ಯೆ ತೋರಿಸಲು ಮುಂದಾಗುತ್ತಿರುವವರೇ ನಮ್ಮ ಲಿಂಗಾಯತ ಸಮಾಜ ನಾಯಕರು ಎಂದು ಕಿಡಿ ಕಾರಿದರು.

ಪಂಚಮಸಾಲಿ ಸಮುದಾಯದ ಮೀಸಲಾತಿಗಾಗಿ ಹಿಂದಿನ ಸರ್ಕಾರದಲ್ಲಿ ಹೋರಾಟವನ್ನು ಸಮಾಜದ ಬಸವಲಿಂಗ ಮಹಾಸ್ವಾಮಿಗಳ ಮೂಲಕ ಕೈಗೊಂಡಿತ್ತು. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ, ಬಾಗಲಕೋಟ ಕ್ಷೇತ್ರಕ್ಕೆ ಬರಲು ಒತ್ತಡ ಹಾಕಲಾಗುತ್ತಿದೆ. ಆದರೆ, ನಾನು ಮೇಲಿನವರಿಗೆ ಹೇಳಿದ್ದೇನೆ. ನಾನು ಎಲ್ಲಿಯೂ ಬರುವುದಿಲ್ಲ. ವಿಜಯಪುರ ವಿಧಾನಸಭಾ ಕ್ಷೇತ್ರವನ್ನು ಬಿಟ್ಟು ಬರಲಾರೆನು, ಬಿಟ್ಟರೇ ವಿಜಯಪುರ ಕ್ಷೇತ್ರ ಪಾಕಿಸ್ತಾನವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಮರೇಶ ಕರಡಿ, ಶಾಸಕರು ವಿಜಯಾನಂದ ಕಾಶಪ್ಪನವರ, ಹಾಗೂ ಮಹಾಂತೇಶ ಪಾಟೀಲ್ ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಕೂಡಲಸಂಗಮದ ಪಂಚಮಸಾಲಿ ಪೀಠಧ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳು ವಹಿಸಿದ್ದರು. ಚಂದ್ರಮೌನೇಶ ತಾತನವರು, ಅಮರಯ್ಯ ಸ್ವಾಮಿ ಹಿರೇಮಠ ಸೇರಿದಂತೆ ಮುಂತಾದವರಿದ್ದರು.