ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಬರುವವರ ಸಂಖ್ಯೆ ಹೆಚ್ಚಿರುವುರಿಂದ ಜ್ವರ, ಶೀತ, ಕೆಮ್ಮುಗಳ ಚಿಕಿತ್ಸೆಗೆ ದೊಡ್ಡ ಆಸ್ಪತ್ರೆಗಳಲ್ಲಿ ಕಾಯಬೇಕಾಗುತ್ತದೆ ಆದರೆ ನಮ್ಮ ಕ್ಲಿನಿಕ್ ನಲ್ಲಿ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆದು ಕೆಲಸ ಕಾರ್ಯಗಳಿಗೆ ತೆರಳಬಹುದು ಇದು ದುಡಿಯುವ ವರ್ಗದವರಿಗೆ ವರದಾನ ಎಂದು ಶಾಸಕ ಡಿ.ಜಿ.ಶಾಂತನಗೌಡ ಅಭಿಪ್ರಾಯಪಟ್ಟರು.ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರ(ಪಿಎಂ-ಅಭಿಮ್) ನಿಮ್ಮ ಆರೋಗ್ಯ ನಮ್ಮ ಬದ್ಧತೆ ಕಾರ್ಯಕ್ರಮದಡಿ ಬಿಎಸ್ಎನ್ಎಲ್ ಕಚೇರಿ ಮುಂಭಾಗದ ರಸ್ತೆಯಲ್ಲಿ ಆರಂಭಗೊಂಡ ನಮ್ಮ ಕ್ಲಿನಿಕ್ ಗೆ ಚಾಲನೆಗೊಳಿಸಿ ಮಾತನಾಡಿ ನಮ್ಮ ಕ್ಲಿನಿಕ್ ನಲ್ಲಿ ಗಂಭೀರವಲ್ಲದ ಕಾಯಿಲೆಗಳಿಗೆ ಕೂಡಲೇ ವೈದ್ಯಕೀಯ ಚಿಕಿತ್ಸೆ ಪಡೆಯಬಹುದು, ದಿನ ನಿತ್ಯ ಕೆಲಸಗಳಿಗೆ ಹೋಗುವವರು ದೊಡ್ಡ ಆಸ್ಪತ್ರೆಗಳಲ್ಲಿ ವೈದ್ಯರಿಗಾಗಿ ಕಾಯದೇ ಈ ಕ್ಲಿನಿಕ್ ನಲ್ಲಿ ವೈದ್ಯರಿಂದ ಚಿಕಿತ್ಸೆ ಅಥವಾ ಸಲಹೆ ಪಡೆಯಬಹುದು ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ ಮಾತನಾಡಿ, ಜಿಲ್ಲೆಯ ಆವರಗೆರೆಯಲ್ಲಿ ಈಗಾಗಲೇ ನಮ್ಮ ಕ್ಲಿನಿಕ್ ಘಟಕವಿದ್ದು ಈ ವರ್ಷ ಹೊನ್ನಾಳಿ, ಚನ್ನಗಿರಿ ಹಾಗೂ ಜಗಳೂರುಗಳಲ್ಲೂ ಘಟಕಗಳ ತೆರೆಯಲಾಗಿದೆ. ನಮ್ಮ ಕ್ಲಿನಿಕ್ ಘಟಕದಲ್ಲಿ ವೈದ್ಯರು, ಒಬ್ಬ ಪ್ರಯೋಗಾಲಯ ಸಹಾಯಕ, ನರ್ಸ್ ಇರುತ್ತಾರೆ. ಇಲ್ಲಿ ಬಿಪಿ, ಶುಗರ್ ಸೇರಿ ಜ್ವರ, ಶೀತ, ಕೆಮ್ಮು ಗಳಿಗೆ ತುರ್ತಾಗಿ ಚಿಕಿತ್ಸೆ ಪಡೆಯಬಹುದು. ಒಂದು ರೀತಿ ಖಾಸಗಿ ಕ್ಲಿನಿಕ್ ಮಾದರಿಯಲ್ಲಿ ಕೆಲಸ ನಿರ್ವಹಿಸಲಿದೆ ಎಂದು ವಿವರಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ರೇಣುಕಾರಾಧ್ಯ, ತಾಲೂಕು ಆರೋಗ್ಯಾಧಿಕಾರಿ ಡಾ.ಕೆಂಚಪ್ಪ ಬಂತಿ, ಉಪವಿಭಾಗಾಧಿಕಾರಿ ಅಭಿಷೇಕ್, ತಹಸೀಲ್ದಾರ್ ಫಿರೋಜ್ ಷಾ, ಮುಖಂಡರಾದ ಆರ್.ನಾಗಪ್ಪ, ಸಣ್ಣಕ್ಕಿ ಬಸವನಗೌಡ ಸೇರಿ ಅನೇಕ ಮುಖಂಡರಿದ್ದರು. ಈ ವೇಳೆ ಶಾಸಕ ಡಿ.ಜಿ.ಶಾಂತನಗೌಡ ಆರೋಗ್ಯ ಸಿಬ್ಬಂದಿಯಿಂದ ರಕ್ತದೊತ್ತಡ, ತೂಕ ಪರೀಕ್ಷಿಸಿಕೊಂಡರು.