ವಿರೂಪಾಕ್ಷೇಶ್ವರ ದೇಗುಲದ ಕಂಬಗಳಿಗೆ ಮೊಳೆ ಪ್ರಕರಣ: ಹಂಪಿ ಪ್ರಾಧಿಕಾರದ ಆಯುಕ್ತ ಪರಿಶೀಲನೆ

| Published : Nov 17 2023, 06:45 PM IST

ವಿರೂಪಾಕ್ಷೇಶ್ವರ ದೇಗುಲದ ಕಂಬಗಳಿಗೆ ಮೊಳೆ ಪ್ರಕರಣ: ಹಂಪಿ ಪ್ರಾಧಿಕಾರದ ಆಯುಕ್ತ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಪ್ರಕರಣ ಗಂಭೀರ ಸ್ವರೂಪ ಪಡೆದಿರುವ ಹಿನ್ನೆಲೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿರುವ ಹಂಪಿ ನಿರ್ವಹಣಾ ಪ್ರಾಧಿಕಾರದ ಆಯುಕ್ತರು, ಈ ಕುರಿತು ಮುಜರಾಯಿ ಇಲಾಖೆಯ ಇಒ ಹನುಮಂತಪ್ಪ ಹಾಗೂ ಭಾರತೀಯ ಪುರಾತತ್ವ ಇಲಾಖೆಯ ರವೀಂದ್ರ ಹತ್ತಿಕಾಳ ಅವರಿಂದ ಮಾಹಿತಿ ಕೂಡ ಪಡೆದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಹಂಪಿಯ ವಿರೂಪಾಕ್ಷೇಶ್ವರ ದೇವಾಲಯದ ಗರ್ಭಗುಡಿಯ ಉತ್ತರ ದಿಕ್ಕಿನ ದ್ವಾರದ ಎರಡು ಕಂಬಗಳಲ್ಲಿ ಗೇಟ್‌ ಕೂರಿಸಲು ಧಾರ್ಮಿಕ ದತ್ತಿ ಇಲಾಖೆ ಡ್ರಿಲ್‌ ಮಾಡಿ ಮೊಳೆ ಹೊಡೆದಿರುವ ಹಿನ್ನೆಲೆ ಹಂಪಿ ನಿರ್ವಹಣಾ ಪ್ರಾಧಿಕಾರದ ಆಯುಕ್ತ ನೋಂಗ್ಜಾಯ್‌ ಮೊಹಮ್ಮದ್ ಅಲಿ ಅಕ್ರಂ ಶಾ ಅವರು ಗುರುವಾರ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಪ್ರಕರಣ ಗಂಭೀರ ಸ್ವರೂಪ ಪಡೆದಿರುವ ಹಿನ್ನೆಲೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿರುವ ಹಂಪಿ ನಿರ್ವಹಣಾ ಪ್ರಾಧಿಕಾರದ ಆಯುಕ್ತರು, ಈ ಕುರಿತು ಮುಜರಾಯಿ ಇಲಾಖೆಯ ಇಒ ಹನುಮಂತಪ್ಪ ಹಾಗೂ ಭಾರತೀಯ ಪುರಾತತ್ವ ಇಲಾಖೆಯ ರವೀಂದ್ರ ಹತ್ತಿಕಾಳ ಅವರಿಂದ ಮಾಹಿತಿ ಕೂಡ ಪಡೆದರು.

ಏತನ್ಮಧ್ಯೆ, ವಿರೂಪಾಕ್ಷೇಶ್ವರ ದೇವಾಲಯದ ಕಂಬಗಳಿಗೆ ಡ್ರಿಲ್‌ ಮಾಡಿ ಮೊಳೆ ಹೊಡೆದಿರುವುದನ್ನು ಆಕ್ಷೇಪಿಸಿ ಭಾರತೀಯ ಪುರಾತತ್ವ ಇಲಾಖೆ ಬರೆದಿದ್ದ ಆಕ್ಷೇಪಣಾ ಪತ್ರಕ್ಕೆ ವಿರೂಪಾಕ್ಷೇಶ್ವರ ದೇಗುಲದ ಇಒ ಹನುಮಂತಪ್ಪ ಉತ್ತರಿಸಿ ಪತ್ರ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ದೇಗುಲದ ಇಒ ಹನುಮಂತಪ್ಪ ಪುರಾತತ್ವ ಇಲಾಖೆಗೆ ಪತ್ರ ಬರೆದಿದ್ದಾರೆ. ಅದರಲ್ಲಿನ ಅಂಶಗಳನ್ನು ಈ ಹಂತದಲ್ಲಿ ಬಹಿರಂಗಪಡಿಸಲು ಆಗುವುದಿಲ್ಲ ಎಂದು ಪುರಾತತ್ವ ಇಲಾಖೆಯ ಮೂಲಗಳು ತಿಳಿಸಿವೆ.