ಸಾರಾಂಶ
ಶಿವಕುಮಾರ ಕುಷ್ಟಗಿ ಗದಗ
ಏಷ್ಯಾ ಖಂಡದಲ್ಲಿ ಅತ್ಯಂತ ವೇಗವಾಗಿ ಗಾಳಿ ಬೀಸುವ ಪ್ರದೇಶ ಎಂದು ಗುರುತಿಸಿರುವ ಗದಗ ಜಿಲ್ಲೆಯಲ್ಲಿ ನಿತ್ಯವೂ ಹೊಸ ಹೊಸ ಗಾಳಿ ವಿದ್ಯುತ್ ಉತ್ಪಾದನಾ ಯಂತ್ರಗಳ ಅಳವಡಿಕೆ ಜೋರಾಗಿಯೇ ನಡೆಯುತ್ತಿದ್ದು, ಗದಗ ಜಿಲ್ಲೆ ಈಗ ಗಾಳಿ ವಿದ್ಯುತ್ ಉತ್ಪಾದನಾ ಹಬ್ ಆಗಿ ಪರಿವರ್ತನೆಯಾಗುತ್ತಿದೆ.ಆದರೆ ಗಾಳಿಯಂತ್ರ ಅಳವಡಿಸುವ ಕಂಪನಿಗಳು ಮಾತ್ರ ರೈತರನ್ನು ಇನ್ನಿಲ್ಲದಂತೆ ಶೋಷಣೆ ಮಾಡುತ್ತಿದ್ದು, ಇದರಿಂದ ರೈತರು ರೋಸಿ ಹೋಗಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದರೂ ಅವರ ಅಳಲು ಕೇಳುವವರೇ ಇಲ್ಲದಂತಾಗಿದೆ. ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಗಳು ನೀಡುವ ಎಂಜಲು ಕಾಸಿಗೆ ಕೈ ಚಾಚಿರುವ ಜನಪ್ರತಿನಿಧಿಗಳು, ಅಧಿಕಾರಿಗಳ ಜಾಣ ಕುರುಡತನ ರೈತರ ಬದುಕನ್ನೇ ಬೀದಿಗೆ ತಂದು ನಿಲ್ಲಿಸಿದೆ.
ಅನಧಿಕೃತ ಸೇತುವೆ ನಿರ್ಮಾಣ: ಜಿಲ್ಲೆಯ ನರೇಗಲ್ಲ ಹೋಬಳಿ ವ್ಯಾಪ್ತಿಯ ಜಕ್ಕಲಿ ಗ್ರಾಮದಿಂದ ರೋಣ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಮಾರ್ಗದ ಅಕ್ಕಪಕ್ಕದ ಹೊಲಗಳಲ್ಲಿ ಎರಡು ಪ್ರಸಿದ್ಧ ಕಂಪನಿಗಳು ಗಾಳಿಯಂತ್ರ ಅಳವಡಿಸುತ್ತಿವೆ. ಜಕ್ಕಲಿ ಗ್ರಾಮಕ್ಕೆ ಹೊಂದಿಕೊಂಡೇ ಹರಿಯುವ ಅಗಸನ ಹಳ್ಳಕ್ಕೆ ಸೇತುವೆಯೇ ಇಲ್ಲ, (ಪರ್ಸಿ, ಕೆಳಸೇತುವೆ ಇದೆ) ಅಲ್ಲಿ ಬೃಹತ್ ಗಾತ್ರದ ಗಾಳಿ ಯಂತ್ರದ ಸಾಮಗ್ರಿ ಸಾಗಿಸಲು ಸಾಧ್ಯವಿಲ್ಲ, ಅದಕ್ಕಾಗಿ ಸರ್ಕಾರದ ಯಾವುದೇ ಅನುಮತಿ ಪಡೆಯದೇ ಹಳ್ಳದಲ್ಲಿಯೇ ಅನಧಿಕೃತವಾಗಿ ರಸ್ತೆ ನಿರ್ಮಿಸಿದ್ದಾರೆ.ಸಂಚಾರವೇ ಬಂದ್: ರೋಣದಿಂದ ಜಕ್ಕಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಪಕ್ಕದಲ್ಲಿ ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಗಳು ಸಿಮೆಂಟ್ ಪೈಪ್ ಅಳವಡಿಸಿ ರಸ್ತೆ ನಿರ್ಮಿಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಹಳ್ಳದಲ್ಲಿ ಸರಾಗವಾಗಿ ನೀರು ಹರಿದು ಹೋಗದೇ ನಾಲ್ಕೈದು ತಾಸು ರಸ್ತೆ ಸಂಚಾರವೇ ಸ್ಥಗಿತಗೊಂಡಿತ್ತು. ಹಳ್ಳದಲ್ಲಿ ಪ್ರವಾಹ ಕಡಿಮೆಯಾದ ನಂತರ ಗ್ರಾಮಸ್ಥರು ಮರಳಿ ಮನೆಗೆ ತಲುಪಿದ್ದಾರೆ. ಇದಕ್ಕೆಲ್ಲ ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಗಳ ಬೇಕಾಬಿಟ್ಟಿ ಕೆಲಸವೇ ಕಾರಣ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.
ರೈತರಿಗೆ ಅಪಾರ ಹಾನಿ: ಅಗಸನ ಹಳ್ಳದಲ್ಲಿ ಅನಧಿಕೃತವಾಗಿ ರಸ್ತೆ ನಿರ್ಮಿಸಿಕೊಂಡು ಬಳಸಿಕೊಳ್ಳುತ್ತಿರುವ ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಳ್ಳಕ್ಕೆ ಪ್ರವಾಹ ಉಂಟಾಗಿದೆ. ಈ ವೇಳೆ ಹಳ್ಳದಲ್ಲಿನ ನೀರು ಸರಾಗವಾಗಿ ಹರಿದು ಹೋಗಲು ಆಗದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಹೊಲಗಳಿಗೆ ನುಗ್ಗಿದ್ದು, ರೈತರ ಜಮೀನುಗಳಲ್ಲಿನ ಅಪಾರ ಪ್ರಮಾಣ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಇನ್ನೊಂದೆಡೆ ಹಳ್ಳದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯಗಳೆಲ್ಲ ಬೆಳೆದ ಬೆಳೆಗಳಲ್ಲಿ ಸಿಕ್ಕಿ ಹಾಕಿಕೊಂಡು ರೈತರ ಬೆಳೆ ಸಂಪೂರ್ಣ ನಾಶವಾಗಿದೆ.ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಗಳು ರೈತರಲ್ಲಿಯೇ ಒಡಕು ಮೂಡಿಸಿ ಗ್ರಾಮಸ್ಥರಲ್ಲಿನ ಕೆಲ ಪ್ರಭಾವಿಗಳನ್ನು ಬಳಸಿಕೊಂಡು ರೈತರಿಗೆ ಮಾಡುತ್ತಿರುವ ಅನ್ಯಾಯ ಪ್ರಶ್ನೆ ಮಾಡಿದರೆ ಅವರಿಗೆ ಧಮ್ಕಿ ಹಾಕಿಸುವುದು, ಹೆದರಿಸುವ ಕಾರ್ಯ ನಿರಂತವಾಗಿ ಮಾಡುತ್ತಿದೆ. ಇದರಿಂದ ರೋಸಿ ಹೋಗಿದ್ದ ಕೆಲ ರೈತರು ಪೊಲೀಸ್ ಠಾಣೆಗೆ ದೂರು ನೀಡಿದರೆ ಪೊಲೀಸರು ರೈತರ ಸಹಾಯಕ್ಕೆ ಬರುವ ಬದಲು ಕಂಪನಿಯ ಸಹಾಯಕ್ಕೆ ಬರುತ್ತಾರೆ ಎನ್ನುವುದು ಕೂಡಾ ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ ನಡೆಯುತ್ತಿದೆ ಎಂದು ಹೆಸರು ಹೇಳಲು ಇಚ್ಚಿಸದ ರೈತರು ಮಾಧ್ಯಮದ ಮುಂದೆ ತಮ್ಮ ಅಳಲು ತೋಡಿಕೊಂಡರು.
ನಮ್ಮ ಗ್ರಾಮದ ಸಮೀಪದಲ್ಲಿರುವ ಅಗಸನ ಹಳ್ಳಕ್ಕೆ ಶಾಶ್ವತ ಸೇತುವೆ ನಿರ್ಮಾಣ ಮಾಡಬೇಕು, ಗಾಳಿ ಯಂತ್ರ ಕಂಪನಿಯವರು ತಮ್ಮ ಅನುಕೂಲಕ್ಕಾಗಿ ಹಳ್ಳದಲ್ಲಿಯೇ ಪೈಪ್ ಹಾಕಿ ರಸ್ತೆ ಮಾಡಿದ್ದಾರೆ. ಇದರಿಂದ ರೈತರಿಗೆ ತೀವ್ರ ತೊಂದರೆಯಾಗಿದೆ.ಇದರಿಂದ ರೈತರಿಗೆ ಅಪಾರ ಹಾನಿಯಾಗಿದೆ. ಹಾನಿಗೊಳಗಾದ ರೈತರಿಗೆ ಕಂಪನಿಗಳು ತಕ್ಷಣವೇ ಪರಿಹಾರ ನೀಡಬೇಕು. ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕು ಎಂದು ಜಕ್ಕಲಿ ಗ್ರಾಮದ ರೈತರಾದ ಶೇಖರಪ್ಪ ಮೇಟಿ, ಮಲ್ಲಪ್ಪ ಪಲ್ಲೇದ, ಶೇಖಪ್ಪ ಮಸಲವಾಡ, ಮುತ್ತಪ್ಪ ಸಿರಗುಂಪಿ, ವೀರೇಶ ಹಿರೇಮಠ, ಫಕೀರಗೌಡ್ರ ರಂಗಣ್ಣವರ, ಮುತ್ತಪ್ಪ ಶ್ಯಾಶೆಟ್ಟಿ, ರಾಜಶೇಖರ ಮೇಟಿ, ವೀರಪ್ಪ ಮೆಣಸಗಿ, ಶಿವಲಿಂಗಪ್ಪ ಗಾಣಿಗೇರ, ಮಹಾದೇವಪ್ಪ ಬಡಿಗೇರ, ಮುತ್ತು ಬಳಗೇರ ಹೇಳಿದರು.