ಅಂಬೇಡ್ಕರ್‌ ಪುತ್ಥಳಿಗೆ ಅಪಮಾನ: ಕಲಬುರಗಿ ಉದ್ವಿಗ್ನ

| Published : Jan 24 2024, 02:01 AM IST

ಸಾರಾಂಶ

ಕಲಬುರಗಿ ನಗರದ ಹೊಲ ವಲಯ- ಜೇವರ್ಗಿ ರಸ್ತೆಯಲ್ಲಿರುವ ಕೋಟನೂರ್‌ (ಡಿ) ಲುಂಬಿಣಿ ಉದ್ಯಾನವನದಲ್ಲಿರುವ ಡಾ. ಬಿಆರ್‌ ಅಂಬೇಡ್ಕರ್‌ ಪುತ್ಥಳಿಗೆ ಅಪಮಾನ ಮಾಡಿರೋದನ್ನು ಖಂಡಿಸಿ ಕಲಬುರಗಿ ನಗರಾದ್ಯಂತ ಅಂಬೇಡ್ಕರ್‌ ಅಭಿಮಾನಿಗಳು, ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ, ಕಲಬುರಗಿ.

ಕಲಬುರಗಿ ನಗರದ ಹೊಲ ವಲಯ- ಜೇವರ್ಗಿ ರಸ್ತೆಯಲ್ಲಿರುವ ಕೋಟನೂರ್‌ (ಡಿ) ಲುಂಬಿಣಿ ಉದ್ಯಾನವನದಲ್ಲಿರುವ ಡಾ. ಬಿಆರ್‌ ಅಂಬೇಡ್ಕರ್‌ ಪುತ್ಥಳಿಗೆ ಅಪಮಾನ ಮಾಡಿರೋದನ್ನು ಖಂಡಿಸಿ ಕಲಬುರಗಿ ನಗರಾದ್ಯಂತ ಅಂಬೇಡ್ಕರ್‌ ಅಭಿಮಾನಿಗಳು, ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಏಕಾಏಕಿ ಬೆಳಗಿನ ಹೊತ್ತು ಶುರುವಾದ ಪ್ರತಿಭಟನೆ, ಪ್ರಮುಖ ವೃತ್ತ, ರಸ್ತೆಗಳಲ್ಲಿನ ಪ್ರತಿಭಟನೆ, ಸಂಚಾರ ದಟ್ಟಣೆಯಿಂದಾಗಿ 3 ಗಂಟೆಗೂ ಹೆಚ್ಚುಕಾಲ ಹ್ದೆದಾರಿ ಹಾಗೂ ನಗರದಲ್ಲಿನ ವಾಹನ ಸವಾರರು ದಿಕ್ಕು ತೋಚದಂತೆ ಪರದಾಡಬೇಕಾಯ್ತು.

ಪ್ರತಿಭಟನಾಕಾರರು ಬೆಳಗಿನ 8.30 ಗಂಟೆಯಿಂದಲೇ ರಾಮ ಮಂದಿರ ವೃತ್ತ, ನಾಗನಹಳ್ಳಿ ವೃತ್ತ, ಲುಂಬಿಣಿ ಉದ್ಯಾನವನ, ಶಹಾಬಾದ್‌ ಕ್ರಾಸ್‌, ಹೀರಾಪೂರ ಕ್ರಾಸ್‌ ಸೇರಿದಂತೆ ಪ್ರಮುಖ ರಸ್ತೆ, ವೃತ್ತಗಳಲ್ಲಿ ಜಮಾಯಿಸಿ ನ್ಯಾಯ ಕೊಡಿ ಎಂದು ಕೂಗುತ್ತ ರಸ್ತೆಗಳಿಗೆ ದೊಡ್ಡ ಕಲ್ಲುಗಳನ್ನು ಇಟ್ಟು, ಬೈಕ್‌ ಅಡ್ಡಾದಿಡ್ಡಿ ನಿಲ್ಲಿಸಿ, ಕಾರ್‌ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸುತ್ತ ರಸ್ತೆತಡೆ ಶುರು ಮಾಡಿದರು.

ಬೆ.8.30ರಿಂದ 9 ಗಂಟೆ ಅವಧಿಯಲ್ಲಿ ಶುರುವಾದ ರಸ್ತೆತಡೆ ಪ್ರತಿಭಟನೆ ಮಧ್ಯಾಹ್ನ 12 ಗಂಟೆಯವರೆಗೂ ಮುಂದುವರಿಯ್ತು. ಇದರಿಂದಾಗಿ ಜೇವರ್ಗಿ, ವಿಜಯಪೂರ ಹೆದ್ದಾರಿಗುಂಟ ಸಾಗುವ ಭಾರಿ ವಾಹನಗಳು. ಶಹಾಬದ್‌ ರಸ್ತೆಗುಂಡ ಸಾಗುವ ದೊಡ್ಡ ವಾಹನಗಳು ಸಾವಿರಾರು ರಸ್ತೆಯಲ್ಲೇ ಠಳಾಯಿಸಿದಾಗ ವಿಪರೀತ ಸಂಚಾರ ಸಮಸ್ಯೆ ಉಂಟಾಗಿತ್ತು.

ಅಂಬೇಡ್ಕರ್‌ ಪುತ್ಥಳಿಗೆ ಅಪಮಾನ ಮಾಡಿರುವ ಸುದ್ದಿ ಹರಡುತ್ತಿದ್ದಂತೆಯೇ ರಾಮ ಮಂದಿರ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಅಭಿಮಾನಿಗಳು ಸೇರಿ ಘೋಷಣೆ ಕೂಗಲಾರಂಭಿಸಿದರು. ಮಹಾನ್‌ ನಾಯಕನ ಪುತ್ಥಳಿದೆ ಅಪಮಾನ ಮಾಡಿ ಗಂಟೆಗಳೇ ಉರುಳಿದರೂ ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ಜನ ಕೆಲಸ ಬೊಗಸೆ ಬಿಟ್ಟು ರಸ್ತೆಯಲ್ಲಿ ಕುಳಿತಿದ್ದಾರೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ನಮ್ಮ ಮನವಿ ಆಲಿಸಬೇಕು. ತಕ್ಷಣ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಅಂಬೇಡ್ಕರ್‌ ಪುತ್ಥಳಿಗೆ ಅಪಮಾನ ಮಾಡಿರುವ ಕಿಡಿಗೇಡಿಗಳು ತಡರಾತ್ರಿಯೇ ಪಟಾಕಿ ಸಹ ಸಿಡಿಸಿ ಕೇಕೆ ಹಾಕಿದ್ದಾರೆ. ಅವರನ್ನು ಪತ್ತೆಹಚ್ಚಿ ನೇರಾನೇರ ಎನ್‌ಕೌಂಟರ್‌ ಮಾಡಿರಿ, ಇಲ್ಲವೆ ನಮಗೆ ತಂದೊಪ್ಪಿಸಿ ನಾವು ನೋಡಿಕೊಳ್ಳುತ್ತೇವೆಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಪ್ರತಿಭಟನೆ ಹಾಗೇ ಮುಂದುವರಿದಾಗ ಹೆಚ್ಚುವರಿ ಡಿಸಿ ಹುಣಸಗಿ ರಾಯಪ್ಪ ಕೋಟನೂರ್‌ ಲುಂಬಿಣಿ ಉದ್ಯಾವನಕ್ಕೆ ಬಂದು ಪ್ರತಿಭಟನಾ ಕಾರರಂದಿಗೆ ಮಾತುಕತೆ ನಡೆಸಿ ಪೊಲೀಸರು ಈಗಾಗಲೇ ಆರೋಪಿಗಳ ಪತ್ತೆಗೆ ಕಾರ್ಯಪ್ರವೃತ್ತರಾಗಿದ್ದಾರೆ. ಶೀಘ್ರ ಪತ್ತೆ ಹಚ್ಚಿ ಶಿಕ್ಷಿಸುತ್ತೇವೆಂದರು.

ಇದಾದ ಬೆನ್ನಲ್ಲೇ ಡಿಸಿ ಫೌಜಿಯಾ ತರನ್ನುಮ್‌ ಕೂಡಾ ಕೋಟನೂರ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿದರಲ್ಲದೆ ಪ್ರತಿಭಟನೆ ನಿರತರ ಮನವಿ ಆಲಿಸಿದರು. ನಂತರ ಅಂಬೇಡ್ಕರ್‌ ಪ್ರತಿಮೆ ಶುದ್ದೀಕರಣ ಮಾಡಿ ಹೂವಿನ ಹಾರ ಹಾಕಿ ಪುಷ್ಪ ನಮನ ಸಲ್ಲಿಸಿದರು.

ಹೋರಾಟ ನಿರತರನ್ನು ಉದ್ದೇಶಿಸಿ ಮಾತನಾಡಿದ ಡಿಸಿ ಫೌಜಿಯಾ ತರನ್ನುಮ್‌ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತದೆ. ಪ್ರಕರಣದ ತನಿಖೆ ಮುಗಿದ ಬಳಿಕ ಎಲ್ಲರ ಬೇಡಿಕೆಯಂತೆ ಹೊಸ ಪುತ್ಥಳಿಯನ್ನು ಜಿಲ್ಲಾಡಳಿತದ ವತಿಯಿಂದ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದ ನಂತರವಷ್ಟೇ ಪ್ರತಿಭಟನೆ ಕೈಬಿಡಲಾಯ್ತು, ನಗರವನ್ನಾವರಿಸಿದ್ದ ಉದ್ವಿಗ್ನತೆ ನಿಧಾನಕ್ಕೆ ತಿಳಿಯಾಗೋ ಹೊತ್ತಿಗೆ ಮಧ್ಯಾಹ್ನ 2 ಗಂಟೆಯಾಗಿತ್ತು. ಇಷ್ಟೊತ್ತಿಗಾಗಲೇ ರಿಂಗ್‌ ರಸ್ತೆ, ವೃತ್ತಗಳಲ್ಲೆಲ್ಲಾ ಪ್ರತಿಭಟನಾಕಾರರು ಟೈರ್‌ ಸುಟ್ಟು ಹೋರಾಟ ಶುರುಮಾಡಿದ್ದರಿಂದ ಇಡೀ ದಿನ ನಗರಾದ್ಯಂತ ಉದ್ವಿಗ್ನತೆ ಕಾಡಿತ್ತು.

ರಾಮ ಮಂದಿರ ರಸ್ತೆತಡೆ ಕೈಬಿಟ್ಟು ಇನ್ನೇನು ಪ್ರತಿಭಟನೆ ಇಲ್ಲಿಗೇ ತೀರಿತು ಎನ್ನುತ್ತಿದ್ದಂತೆಯೇ ಯುವಕರ ಗುಂಪು ಬೈಕ್‌ ಮೂಲಕ ಸೂಪರ್‌ ಮಾರ್ಕೆಟ್‌, ಡಿಸಿ ಕಚೇರಿ, ಪಟೇಲ್‌ ವೃತ್ತ ಇಲ್ಲೆಲ್ಲಾ ಗುಂಪಾಗಿ ರಸ್ತೆತಡೆ ನಡೆಸಿತು ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ, ಶಾಲಾ ಕಾಲೇಜುಗಳಿಂದ ಮನೆಗೆ ಮರಳುವವರಿಗೆ ಭಾರಿ ತೊಂದರೆ ಕಾಡಿತ್ತು.ಮಳಿಗೆಗಳ ಮೇಲೆ ಕಲ್ಲು ತೂರಾಟ:

ಪ್ರತಿಮೆ ಅಪಮಾನ ಖಂಡಿಸಿ ನಡೆದ ಮಿಂಚಿನ ಪ್ರತಿಭಟನೆಯಲ್ಲಿ ಕಿಡಿಗೇಡಿಗಳು ಕೆಲವರು ಗುಂಪಾಗಿ ಬೈಕ್‌ ಹತ್ತಿ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಓಡಾಡಿದ್ದು ಕಂಡುಬಂತು. ತಿಮ್ಮಾಪುರ ವೃತ್ತದ ಬಾಟಾ ಚಪ್ಪಲ್ ಅಂಗಡಿ ಮೇಲೆ‌ ಪ್ರತಿಭಟನಾಕಾರ ದಾಳಿ ಗಾಜು ಪುಡಿ ಪುಡಿಯಾಯ್ತು, ಹುಮನಾಬಾದ್ ಬೇಸ್ ನಲ್ಲೂ ಪ್ರತಿಭಟನಾಕಾರರಿಂದ ಅಂಗಡಿ‌ ಮಾಲಿಕರ ಮತ್ತು‌ ಕೆಲಸಗಾರರ ಮೇಲೆ ದಾಳಿ ನಡೆಯಿತು. ಇದರಿಂದಾಗಿ ಭಯದ ವಾತಾವರಣ ಮೂಡಿದ್ದರಿಂದ ಮಳಿಗೆ ಮಾಲೀಕರು ತಾವೇ ಖುದ್ದಾಗಿ ಮಳಿಗೆ- ಮುಂಗಟ್ಟುಗಳನ್ನು ಮುಚ್ಚಿದರು.

ರಾಮ ಮಂದಿರವರೆಗೆ ಡಿಸಿ ಕಾಲ್ನಡಿಗೆ:

ಅಂಬೇಡ್ಕರ್‌ ಪ್ರತಿಮೆ ಅಪಮಾನ ಖಂಡಿಸಿ ನಡೆದ ಹೋರಾಟದ ಸ್ಥಳಕ್ಕೆ ಭೇಟಿ ನೀಡಲು ಖುದ್ದು ಡಿಸಿ ಫೌಜಿಯಾ ತರನ್ನುಮ್‌ ಅವರು ಲುಂಬಿಣಿ ವನದಿಂದ ರಾಮ ಮಂದಿರ ವೃತ್ತದವರೆಗೂ ಉರಿ ಬಿಸಿಲಲ್ಲಿ ನಡೆದುಕೊಂಡೇ ಬಂದು ಗಮನ ಸೆಳೆದರು. ಸ್ಟೇಷನ್‌ ಬಜಾರ್‌ ಪಿಐ ಸಖೀಲ್‌ ಅಂಗಡಿ ಹಾಗೂ ಪೊಲೀಸ್‌ ಭದ್ರತೆಯೊಂದಿಗೆ ಬಂದ ಡಿಸಿ ಫೌಜಿಯಾ ಹೋರಾಟಗರೊಂದಿಗೆ ಮಾತುಕತೆ ನಡೆಸಿ ಪ್ರತಿಮೆ ಶುದ್ದೀಕರಣ, ಹೊಸ ಪ್ರತಿಮೆ ವಿಚಾರಗಳನ್ನು ಚರ್ಚಿಸಿ ಹೋರಾಟ ಕೈಬಿಡುವಂತೆ ಮನವಿ ಮಾಡಿದರು.