ಸಾರಾಂಶ
ಮಾಜಿ ಸಚಿವ ಬಿ. ಶ್ರೀರಾಮುಲ ಅವರ ಬಗ್ಗೆ ನಿಂದನೆ ಮಾಡಿ ಅವಮಾನ ಮಾಡಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿ ತಕ್ಷಣ ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ವಾಲ್ಮಿಕಿ ನಾಯಕ ಸಮಾಜದ ಗಂಗಾವತಿ ತಾಲೂಕು ಘಟಕದ ಪದಾಧಿಕಾರಿಗಳು ಒತ್ತಾಯಿಸಿದರು.
ಗಂಗಾವತಿ: ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಬಗ್ಗೆ ನಿಂದನೆ ಮಾಡಿ ಅವಮಾನ ಮಾಡಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿ ತಕ್ಷಣ ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ವಾಲ್ಮಿಕಿ ನಾಯಕ ಸಮಾಜದ ಗಂಗಾವತಿ ತಾಲೂಕು ಘಟಕದ ಪದಾಧಿಕಾರಿಗಳು ಒತ್ತಾಯಿಸಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಜನಾರ್ದನ ರೆಡ್ಡಿ ವಿರುದ್ಧ ನಾಯಕ ಸಮಾಜ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಸಮಾಜದ ತಾಲೂಕು ಅಧ್ಯಕ್ಷ ವೀರಭದ್ರಪ್ಪ ನಾಯಕ ಮಾತನಾಡಿ, ರಾಜ್ಯದಲ್ಲಿ ಬಿ. ಶ್ರೀರಾಮುಲು ಮತ್ತು ಸತೀಶ ಜಾರಕಿಹೊಳಿ ನಾಯಕ ಸಮಾಜಕ್ಕೆ ಎರಡು ಕಣ್ಣುಗಳಿದ್ದಂತೆ. ಅವರನ್ನು ಅವಮಾನ ಮಾಡಿದರೆ ಸಮಾಜ ಸಹಿಸುವುದಿಲ್ಲ. ಬಿ. ಶ್ರೀರಾಮುಲು ಕರ್ನಾಟಕದಲ್ಲಿ ಬಿಜೆಪಿ ದೊಡ್ಡ ಶಕ್ತಿಯಾಗಿದ್ದಾರೆ. ಸ್ವಂತ ವರ್ಚಸ್ಸಿನಿಂದ ರಾಜಕೀಯ ನಾಯಕರಾಗಿ ಬಂದಿದ್ದಾರೆ. ರೆಡ್ಡಿ ಜೈಲಿಗೆ ಹೋದಾಗ ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮಿಸಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ತುಕಾರಾಮ ಅವರ ಪ್ರಭಾವದಿಂದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಕಡಿಮೆ ಮತಗಳ ಅಂತರದಲ್ಲಿ ಸೋತಿದ್ದಾರೆ. ಈ ಸೋಲಿಗೆ ಕೇವಲ ಶ್ರೀರಾಮುಲು ಮಾತ್ರ ಹೊಣೆಯಲ್ಲ. ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಚುನಾವಣೆ ಜವಾಬ್ದಾರಿ ವಹಿಸಿಕೊಂಡಿದ್ದ ರೆಡ್ಡಿ ಪ್ರಮುಖ ಕಾರಣರಾಗಿದ್ದಾರೆ. ಆದರೆ ರಾಜ್ಯದ ಬಿಜೆಪಿ ಉಸ್ತುವಾರಿ ಕೇವಲ ಶ್ರೀರಾಮುಲು ಅವರನ್ನು ಮಾತ್ರ ಹೊಣೆ ಮಾಡಿ ಸೋಲನ್ನು ಅವರ ಹೆಗಲಿಗೆ ಕಟ್ಟಿರುವುದು ಸರಿಯಲ್ಲ ಎಂದರು.ಮುಖಂಡ ಜೋಗದ ನಾರಾಯಣಪ್ಪ ನಾಯಕ ಮಾತನಾಡಿದರು.
ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪನಾಯಕ, ಕೃಷ್ಣಪ್ಪ ನಾಯಕ, ರಮೇಶ, ನಾಯಕ ಸಮಾಜದ ಮುಖಂಡರಾದ ಹೊಸಮಲಿ ಮಲ್ಲೇಶಪ್ಪ, ಹನುಮಂತಪ್ಪ ಚೌಡ್ಕಿ, ವೀರಣ್ಣ ನಾಯಕ, ಶರಣಪ್ಪ ನಾಯಕ, ಎ. ರಮೇಶ, ರಾಜಣ್ಣ, ವೆಂಕಟೇಶ, ರಂಗನಾಥ ನಾಯಕ, ಅಂಜನಗೌಡ ಮಲ್ಲಾಪುರ, ನಾಗಪ್ಪ, ಬಸಪ್ಪ ನಾಯಕ, ನಾಗರಾಜ, ಮಹಾದೇವಪ್ಪ ಮತ್ತಿತರರು ಇದ್ದರು.