ಕನ್ನಡಪ್ರಭ ವಾರ್ತೆ ಹೊಸದುರ್ಗ

ದಂದಣ ದತ್ತಣ ಗೋಷ್ಠಿಗಳು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ, ಸಭೆಯ ಮುಂದೆ ಧೈರ್ಯವಾಗಿ ಮಾತನಾಡುವ ಕಲೆ ಹಾಗೂ ನಾಯಕತ್ವ ಗುಣವನ್ನು ಬೆಳೆಸುತ್ತವೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ತಾಲೂಕಿನ ಸಾಣೇಹಳ್ಳಿಯ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ತರಳಬಾಳು ಗುರುಪರಂಪರೆ ವಿಷಯದ ಕುರಿತಾದ ದಂದಣ ದತ್ತಣ ಗೋಷ್ಠಿಯ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಕ್ಕಳು ಸಣ್ಣಪುಟ್ಟ ಕಾರಣಗಳಿಗೆ ಮನಸ್ಸು ದುರ್ಬಲ ಮಾಡಿಕೊಳ್ಳದೆ, ಮಠದ ಸಂಸ್ಥೆಗಳು ಕಲ್ಪಿಸಿರುವ ಉತ್ತಮ ಶಿಕ್ಷಣದ ಅವಕಾಶವನ್ನು ಬಳಸಿಕೊಂಡು ಹೋರಾಟ ಹಾಗೂ ಸಾಧನೆಯ ಬದುಕು ರೂಪಿಸಿಕೊಳ್ಳಬೇಕು. ವಿಷಯಗಳನ್ನು ಕಂಠಪಾಠ ಮಾಡುವುದಕ್ಕಿಂತ ಸ್ವಂತ ಮಾತುಗಳಲ್ಲಿ ಗ್ರಹಿಸಿ ಸಂವಾದ ನಡೆಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆದ್ರಿಕಟ್ಟೆಯ ನಿವೃತ್ತ ಮುಖ್ಯ ಶಿಕ್ಷಕ ಬಸವರಾಜಪ್ಪ ಮಾತನಾಡಿ, ಗ್ರಾಮೀಣ ಭಾಗದ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ ತಲೆಯೆತ್ತಿ ಬಾಳುವಂತೆ ಮಾಡಿದ ಕೀರ್ತಿ ಲಿಂಗಾಯತ ಮಠಗಳಿಗೆ ಸಲ್ಲುತ್ತದೆ. ಸಾಣೇಹಳ್ಳಿಯ ಶಾಲಾ ಪರಿಸರ ಮತ್ತು ಇಲ್ಲಿ ದೊರೆಯುವ ಸಂಸ್ಕಾರ ವಿದ್ಯಾರ್ಥಿಗಳ ಬದುಕನ್ನು ಉತ್ತಮ ಹಾದಿಗೆ ತರುತ್ತದೆ. ತರಳಬಾಳು ಪರಂಪರೆಯ ಸಂವಾದವನ್ನು ಒಂದು ಐತಿಹಾಸಿಕ ರೂಪಕ ಅಥವಾ ನಾಟಕದ ರೂಪದಲ್ಲಿ ರಂಗದ ಮೇಲೆ ತರುವ ಶಕ್ತಿ ಇಲ್ಲಿನ ರಂಗಶಾಲೆಗಿದೆ ಎಂದು ಅಭಿಪ್ರಾಯಪಟ್ಟರು.

ಶ್ರೀ ಶಿವಕುಮಾರ ಸ್ವಾಮೀಜಿ ವಿದ್ಯಾವರ್ಧಕ ಸಂಘದ ಸದಸ್ಯ ಆರ್.ಕೃಷ್ಣಮೂರ್ತಿ ಮಾತನಾಡಿದರು. ವಿದ್ಯಾರ್ಥಿ ಭಾಷಣಕಾರರಾದ ಪ್ರತೀಕ್ಷ, ಧನುಶ್ರೀ, ರಕ್ಷಿತ, ಮನು, ಗಣೇಶ, ಅರವಿಂದ, ಪ್ರಾರ್ಥನ, ಮಾನಸ ತರಳಬಾಳು ಗುರುಪರಂಪರೆ ವಿಷಯ ಕುರಿತು ಮಾತನಾಡಿದರು. ವಿದ್ಯಾರ್ಥಿ ಅಭಯ ಸ್ವಾಗತಿಸಿ, ನಿರೂಪಿಸಿದರು.


ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ವಚನಗೀತೆಗಳನ್ನು ಹಾಡಿದರು. ಉಭಯ ಶಾಲಾ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.