ಸಮಾನತೆ ಸಾರಿದ ರಾಜ್ಯ ನಮ್ಮದು: ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಅಭಿಮತ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪ್ರಪಂಚದಲ್ಲಿ ಜನಿಸಿದ ಪ್ರತಿ ಒಂದು ಜೀವಿಗೂ ಜೀವಿಸುವ ಹಕ್ಕಿದೆ. ಈ ಸಹಜ ನ್ಯಾಯ ಪರಿಪಾಲನೆಯನ್ನು ನಮ್ಮ ಭಾರತ ಸಂವಿಧಾನವು ಸಹ ಅಂಗೀಕಾರ ಮಾಡಿದೆ. ಆರ್ಟಿಕಲ್ 14ರ ಅನ್ವಯ ಎಲ್ಲರಿಗೂ ಸಮಾನ ಹಕ್ಕಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ತಿಳಿಸಿದರು.

ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2026ರ ಎರಡನೇ ರಾಷ್ಟ್ರೀಯ ಮೆಗಾ ಲೋಕ ಅದಾಲತ್‌ಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ 12ನೇ ಶತಮಾನದಲ್ಲಿ ಬಸವಾದಿ ಶರಣರು ಸಹ ತಮ್ಮ ಅನುಭವ ಮಂಟಪದ ಮೂಲಕ ನ್ಯಾಯದಾನವನ್ನು ಮಾಡುತ್ತಿದ್ದರು. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವ ಸಿದ್ಧಾಂತವನ್ನು ಅಂದೆ ಬಸವಣ್ಣನವರು ಆಚರಣೆಗೆ ತಂದು ಪರಿಪಾಲಿಸುತ್ತಿದ್ದರು. ಇಂತಹ ಸಮಾನತೆಯನ್ನು ಸಾರಿದ ರಾಜ್ಯ ನಮ್ಮದು ಎಂದರು.

ನಾವೆಲ್ಲರೂ ಕರ್ತವ್ಯಗಳನ್ನು ಅಳವಡಿಸಿಕೊಂಡು ನಡೆಯಬೇಕು. ಆದರೆ ನಾವು ಕರ್ತವ್ಯಗಳನ್ನು ಅಳವಡಿಸಿಕೊಳ್ಳದೆ ಹಕ್ಕುಗಳನ್ನು ಮಾತ್ರ ಕೇಳುತ್ತೇವೆ. ಇದು ಸರಿಯಲ್ಲ. ಎಲ್ಲರೂ ಕರ್ತವ್ಯಗಳನ್ನು ಪರಿಪಾಲನೆ ಮಾಡಿದರೆ ಯೋಗ್ಯ ಪರಿಪಾಲನೆ ಸಿಗುತ್ತದೆ. ಹಾಗೆ ಮಾಡದೇ ಕೇವಲ ಹಕ್ಕುಗಳಿಗಾಗಿ ಹಕ್ಕುಗಳಿಗಾಗಿ ಹೋರಾಟ ಮಾಡುತ್ತೇವೆ. ಆದರೆ ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎಂಬುವುದೇ ಮುಖ್ಯವಾಗುತ್ತದೆ ಎಂದರು.


ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಭಿಲಾಷ್ ಮಾತನಾಡಿ, ಅಣ್ಣ ತಮ್ಮಂದಿರು ತಮ್ಮ ಜಮೀನು, ಆಸ್ತಿಪಾಸ್ತಿಗಳ ಸಮಸ್ಯೆಗಳನ್ನು ಮೂಲದಲ್ಲೇ ಬಗೆ ಹರಿಸಿಕೊಂಡರೆ ಸಮಸ್ಯೆಗಳು ಪ್ರಕರಣಗಳಾಗಿ ನ್ಯಾಯಾಲಯದ ಮೆಟ್ಟಿಲು ಹತ್ತುವ ಅವಶ್ಯಕತೆ ಇರುವುದಿಲ್ಲ. ಅಣ್ಣತಮ್ಮಂದಿರ ಆಸ್ತಿ ಸಮಸ್ಯೆಗಳು ನ್ಯಾಯಾಲಯದ ಮೆಟ್ಟಿಲು ಏರಿದಲ್ಲಿ ಸಂಬಂಧಗಳು ಹದಗೆಡುತ್ತವೆ‌. ನೆಮ್ಮದಿ ಹಾಳಾಗಿ ದ್ವೇಷ ಅಸೂಯೆಗಳ ಹೆಚ್ಚಳಕ್ಕೂ ಕಾರಣವಾಗುತ್ತದೆ. ಕುಟುಂಬಗಳ ಹಂತದಲ್ಲೇ ತಂದೆ ಸಂಪಾದನೆಯ ಆಸ್ತಿಪಾಸ್ತಿಗಳನ್ನು ನ್ಯಾಯಯುತ ರೀತಿಯಲ್ಲಿ ಮುಕ್ತವಾಗಿ ಹಂಚಿಕೊಂಡರೆ ಯಾವುದೇ ಸಮಸ್ಯೆ ಇರುವುದಿಲ್ಲ. ಸಣ್ಣಪುಟ್ಟ ವಿಸ್ತೀರ್ಣದ ಜಮೀನುಗಳಿಗಾಗಿ ಪ್ರತಿಷ್ಠೆಗಳಿಗೆ ಬಿದ್ದು ಅನೇಕರು ನ್ಯಾಯಾಲಯಗಳಲ್ಲಿ ಪ್ರಕರಣಗಳಿಗೆ ತಲೆಮಾರುಗಟ್ಟಲೇ ಮತ್ತು ಅನೇಕ ವರ್ಷಾನುಗಟ್ಟಲೆ ಓಡಾಡುತ್ತಿರುವವರು ಅನೇಕರಿದ್ದಾರೆ‌. ಅಂತವರು ಅರ್ಥ ಮಾಡಿಕೊಂಡು ಸಂಬಂಧಗಳಿಗೆ ಬೆಲೆ ಕೊಟ್ಟರೆ ಎಲ್ಲ ಪ್ರಕರಣಗಳು ಇತ್ಯರ್ಥ ಆಗುತ್ತವೆ ಎಂದು ತಿಳಿಸಿದರು.

ನ್ಯಾಯಾಲಯಕ್ಕೆ ಮಾಟ ಮಂತ್ರ?

ಮೊನ್ನೆ ನ್ಯಾಯಾಲಯ ಆವರಣದಲ್ಲಿ ಮಾಟ ಮಂತ್ರ ನಡೆದಿದೆ ಎಂದು ಘಟನೆ ಕುರಿತು ಹೇಳಿದ ನ್ಯಾ.ಟಿ.ಪಿ. ರಾಮಲಿಂಗೇಗೌಡರು, ನಮ್ಮ ನ್ಯಾಯಧೀಶರಾದ ಭಾರತಿದೇವಿ ಅವರ ಕೊಠಡಿ ಪಕ್ಕದಲ್ಲಿ ಮಾಟ ಮಂತ್ರವನ್ನು ಮಾಡಿದ ಒಬ್ಬ ಮಹಿಳೆ ಯನ್ನು ಬಂಧಿಸಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದೇವೆ. ಆ ಮಹಿಳೆ ತನ್ನ ಪರವಾಗಿ ನ್ಯಾಯಾಧೀಶರು ತೀರ್ಪು ನೀಡಲಿ ಎಂದು ನ್ಯಾಯಾಧೀಶರ ಕೊಠಡಿಗೆ ಬಿಳಿಸಾವುವೆ ಸೇರಿದಂತೆ ಮಾಟ ಮಂತ್ರಕ್ಕೆ ಉಪಯೋಗಿಸುವ ವಸ್ತುಗಳನ್ನು ತಂದು ಎಸೆದು ಭಯ ಭೀತಿಯ ವಾತವರಣ ನಿರ್ಮಾಣ ಮಾಡಿದ್ದರು. ಆದರೆ ಸಿಸಿಟಿವಿಯಲ್ಲಿ ಇದೆಲ್ಲವೂ ಸೆರೆಯಾಗಿತ್ತು. ಸಿಸಿಟಿವಿಯ ದೃಶ್ಯಗಳನ್ನಾದರಿಸಿ ಆಕೆಯ ವಿರುದ್ದ ಪ್ರಕರಣ ದಾಖಲಾಗಿದೆ. ಇಲ್ಲಿ ಆಕೆ ಮಾಡಿದ್ದು ಆಕೆಗೆ ಮುಳುವಾಯಿತು. ಯಾರೆ ಆಗಲಿ ಅವರು ಮಾಡಿದ ತಪ್ಪುಗಳಿಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಶಿಲ್ಪ, ಜಿಲ್ಲಾ ನ್ಯಾಯಧೀಶರಾದ ಕಾಂತರಾಜು, ಸಿದ್ದಣ್ಣ, ಉಮೇಶ್, ಭಾರತಿದೇವಿ, ಶ್ರೀಪ್ರೇಮ್, ಮಹಾಲಕ್ಷ್ಮೀ, ಹಿರಿಯ ವಕೀಲ ಪ್ರಕಾಶ್, ವಕೀಲರು, ಕಕ್ಷಿದಾರರು ಇದ್ದರು.

ಸಿಕೆಬಿ-1 ಜಿಲ್ಲಾ ನ್ಯಾಯಾಲಯದಲ್ಲಿ ನಡೆದ 2026ರ ಎರಡನೇ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ಉಧ್ಘಾಟನಾ ಸಮಾರಂಭದಲ್ಲಿ ನ್ಯಾ.ಟಿ.ಪಿ.ರಾಮಲಿಂಗೇಗೌಡ ಮಾತನಾಡಿದರು.