ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ, ಸರಳ ಕಾರ್ಯಕ್ರಮ

| Published : Oct 06 2025, 01:01 AM IST

ಸಾರಾಂಶ

ಭಾರತದಿಂದ ಹೊರದೇಶಗಳಿಗೆ ರಫ್ತಾಗುವ ಕಾಫಿಯ ಪ್ರಮಾಣದಲ್ಲಿ ಶೇ. 50 ರಷ್ಟು ಕುಶಾಲನಗರ ಕೈಗಾರಿಕಾ ಬಡಾವಣೆಯಿಂದ ಸಾಗಾಟವಾಗುತ್ತಿದೆ ಎಂದು ಎ ಎನ್‌ ಪ್ರವೀಣ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ ಭಾರತದಿಂದ ಹೊರದೇಶಗಳಿಗೆ ರಫ್ತಾಗುವ ಕಾಫಿಯ ಪ್ರಮಾಣದಲ್ಲಿ ಶೇ. 50ರಷ್ಟು ಕುಶಾಲನಗರ ಕೈಗಾರಿಕಾ ಬಡಾವಣೆಯಿಂದ ಸಾಗಾಟವಾಗುತ್ತಿದೆ ಎಂದು ಕೂಡ್ಲೂರು ಇಂಡಸ್ಟ್ರಿಯಲ್ ಏರಿಯಾ ಅಸೋಸಿಯೇಷನ್ ಅಧ್ಯಕ್ಷರಾದ ಎ ಎನ್ ಪ್ರವೀಣ್ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಅಂಗವಾಗಿ ಕೈಗಾರಿಕಾ ಬಡಾವಣೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಕುಶಾಲನಗರ ಕೈಗಾರಿಕಾ ಬಡಾವಣೆ ದೇಶದ ಪ್ರಮುಖ ಕಾಫಿ ಹಬ್ ಆಗಿ ಪರಿವರ್ತನೆ ಆಗುವ ಸಾಧ್ಯತೆ ಅಧಿಕವಾಗಿದೆ ಎಂದರು. ಕೈಗಾರಿಕಾ ಬಡಾವಣೆಯಲ್ಲಿ ಆ ರೀತಿಯ ಅಭಿವೃದ್ಧಿ ಬೆಳವಣಿಗೆಗಳು ಕಾಣಬಹುದು ಎಂದರು.ಅಂತರಾಷ್ಟ್ರೀಯ ಕಾಫಿ ದಿನಾಚರಣೆ ಅಂಗವಾಗಿ ಕೈಗಾರಿಕಾ ಬಡಾವಣೆಯ ಕಾಫಿ ಘಟಕಗಳ ಉದ್ಯಮಿಗಳು ಹಾರಂಗಿ ರಸ್ತೆಯ ಬಳಿಯಿಂದ ಕಾರ್ಯಕ್ರಮದ ವೇದಿಕೆ ತನಕ ಮೆರವಣಿಗೆಯಲ್ಲಿ ತೆರಳಿ ವಾಕ್ ವಿಥ್ ಕಾಫಿ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಇದೇ ಸಂದರ್ಭ ಮಾತನಾಡಿದ ಎಸ್ ಎಲ್ ಎನ್ ಸಂಸ್ಥೆಯ ಮುಖ್ಯಸ್ಥರಾದ ವಿಶ್ವನಾಥನ್ ಅಸೋಸಿಯೇಷನ್ ಕಾರ್ಯಕ್ರಮಗಳ ಮೂಲಕ ಉದ್ಯಮಿಗಳ ಸಮಸ್ಯೆಗಳ ಚರ್ಚೆ ನಡೆದು ಪರಿಹಾರ ಪಡೆಯಲು ಸಾಧ್ಯ ಎಂದರು. ವಿಶ್ವ ಕಾಫಿ ದಿನಾಚರಣೆ ಅಂಗವಾಗಿ ಉದ್ಯಮಿಗಳಿಗೆ ಅವರು ಶುಭಕೋರಿದರು. ಕಾಫಿ ಉದ್ಯಮಿ ಮಜೀದ್ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಕೂಡ್ಲೂರು ಇಂಡಸ್ಟ್ರಿಯಲ್ ಏರಿಯಾ ಕೈಗಾರಿಕಾ ಪ್ರತಿನಿಧಿಗಳ ಅಸೋಸಿಯೇಷನ್ ಲೋಗೋ ಬಿಡುಗಡೆ ಕಾರ್ಯಕ್ರಮ ನಡೆಯಿತು.ಇದೇ ಸಂದರ್ಭ ಲೆವಿಸ್ಟಾ ಮತ್ತು ಸಂಗೀತ ಕಾಫಿ ಸಂಸ್ಥೆಗಳ ಮೂಲಕ ಸಭಿಕರಿಗೆ ಉಚಿತವಾಗಿ ಕಾಫಿ ವಿತರಣೆ ನಡೆಯಿತು.ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಪದಾಧಿಕಾರಿಗಳು ಸದಸ್ಯರು ಇದ್ದರು.