ಗುಜರಾತ್‌ ಸೇರಿದಂತೆ ಗೋವಾ, ಅಹಮದಾಬಾದ್‌ನಲ್ಲಿ ನಡೆಯುತ್ತಿದ್ದ ಇಂತಹ ಗಾಳಿಪಟ ಅಂತಾರಾಷ್ಟ್ರೀಯ ಉತ್ಸವವನ್ನು ನಗರದಲ್ಲಿ ಸತತ 7ನೇ ಬಾರಿಗೆ ಏರ್ಪಡಿಸುವ ಮೂಲಕ ಈ ಭಾಗಕ್ಕೂ ಗಾಳಿಪಟ ಉತ್ಸವವನ್ನು ಪರಿಚಯಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ:

ನಗರದ ಹೊರವಲಯದ ಕುಸುಗಲ್ಲ ರಸ್ತೆಯ ಆಕ್ಸಫರ್ಡ್‌ ಕಾಲೇಜು ಹತ್ತಿರದ ಬೃಹತ್‌ ಮೈದಾನದಲ್ಲಿ ಫೆ. 7, 8ರಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಹಾಗೂ ದೇಶಿ ಕ್ರೀಡಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕ್ರೀಡಾ ಮಹೋತ್ಸವದ ಫೋಸ್ಟರ್‌ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಂಸದ ಸಾಂಸ್ಕೃತಿಕ ಮಹೋತ್ಸವ-26 ಹಾಗೂ ಅಂತಾರಾಷ್ಟ್ರೀಯ ಗಾಳಿಪಟ ಹಾಗೂ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.

ಗುಜರಾತ್‌ ಸೇರಿದಂತೆ ಗೋವಾ, ಅಹಮದಾಬಾದ್‌ನಲ್ಲಿ ನಡೆಯುತ್ತಿದ್ದ ಇಂತಹ ಗಾಳಿಪಟ ಅಂತಾರಾಷ್ಟ್ರೀಯ ಉತ್ಸವವನ್ನು ನಗರದಲ್ಲಿ ಸತತ 7ನೇ ಬಾರಿಗೆ ಏರ್ಪಡಿಸುವ ಮೂಲಕ ಈ ಭಾಗಕ್ಕೂ ಗಾಳಿಪಟ ಉತ್ಸವವನ್ನು ಪರಿಚಯಿಸುವ ಕಾರ್ಯ ಮಾಡಲಾಗುತ್ತಿದೆ. ಈ ಉತ್ಸವದಲ್ಲಿ ದೇಶದ ಪ್ರಸಿದ್ಧ ಗಾಳಿಪಟ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಇಡೀ ಹುಬ್ಬಳ್ಳಿಯಲ್ಲಿ ಹಬ್ಬದ ವಾತಾವರಣ ನಿರ್ಮಿಸುವ ಉದ್ದೇಶದಿಂದ ಸಾರ್ವಜನಿಕರು ಮತ್ತು ವಿವಿಧ ಕ್ಷೇತ್ರಗಳ ಪ್ರಮುಖರನ್ನೊಳಗೊಂಡ ಉಪ ಸಮಿತಿ ರಚಿಸಲಾಗಿದೆ. ಎರಡು ದಿನಗಳ ಈ ಉತ್ಸವದಲ್ಲಿ 2 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ ಎಂದರು.

ದೇಶಿ ಕ್ರೀಡೆಗಳು:

ಗಾಳಿಪಟ ಉತ್ಸವದೊಂದಿಗೆ ಸಂಸದ ಕ್ರೀಡಾ ಮಹೋತ್ಸವದ ಅಂಗವಾಗಿ ಲೋಕಸಭಾ ಮಟ್ಟದ ದೇಶಿ ಕ್ರೀಡೆಗಳಾದ ಯೋಗ, ಮಲ್ಲಕಂಬ, ಗೋಲಿ ಆಟ, ಲಗೋರಿ, ಹಗ್ಗ-ಜಗ್ಗಾಟ, ಚಿನ್ನಿ-ದಾಂಡು, ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ಈ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ₹10 ಸಾವಿರ, ₹ 7500 ದ್ವಿತೀಯ, ತೃತೀಯ ಮತ್ತು ಚತುರ್ಥ ₹5 ಸಾವಿರ ಜತೆಗೆ ಟ್ರೋಫಿ ನೀಡಲಾಗುವುದು. ಗಾಳಿಪಟ ಉತ್ಸವಕ್ಕೆ ಆಗಮಿಸುವವರಿಗೆ ಒಂದೇ ಸೂರಿನಲ್ಲಿ ವೈವಿಧ್ಯಮಯ ತಿಂಡಿ-ತಿನಿಸುಗಳ ಆಹಾರ ಉತ್ಸವವೂ ನಡೆಯಲಿದೆ. ಜತೆಗೆ ಎರಡು ದಿನ ಸಂಜೆ ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮ ನಡೆಯಲಿವೆ. ಫೆ. 7ರಂದು ನಡೆಯುವ ಕಾರ್ಯಕ್ರಮಗಳಿಗೆ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಶಾಸಕರು, ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.

ಫೆ. 7ರಂದು ಬೆಳಗ್ಗೆ 10.30ಕ್ಕೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಫರ್ಧೆಗೆ ಬಿಜೆಪಿ ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ಚಾಲನೆ ನೀಡುವರು. 11.30ಕ್ಕೆ ಸಂಸದ ಕ್ರೀಡಾ ಮಹೋತ್ಸವದ ಲೋಕಸಭಾ ಮಟ್ಟದ ದೇಶಿ ಕ್ರೀಡೆಗಳಿಗೆ ಕುಂದಗೋಳ ಶಾಸಕ ಎಂ.ಆರ್. ಪಾಟೀಲ, ಮಹಿಳಾ ಕ್ರೀಡೆಗಳಿಗೆ ಮೇಯರ್ ಜ್ಯೋತಿ ಪಾಟೀಲ ಚಾಲನೆ ನೀಡುವರು. ಪ್ರವೇಶ ಉಚಿತವಾಗಿದ್ದು, ಹೆಚ್ಚಿನ ಮಾಹಿತಿಗಾಗಿ 0836-2251055, 2258955 ಸಂಖ್ಯೆಗಳಿಗೆ ಸಂಪರ್ಕಿಸುವಂತೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೇಯರ್‌ ಜ್ಯೋತಿ ಪಾಟೀಲ, ಉಪಮೇಯರ್‌ ಸಂತೋಷ ಚವ್ಹಾಣ, ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ಸೇರಿದಂತೆ ಹಲವರಿದ್ದರು.

ಸೋನು ನಿಗಮ್, ಜಸ್ಕರನ್ ಸಿಂಗ್‌ ಭಾಗಿ

ಫೆ. 7ರಂದು ಸಂಜೆ 6.30ಕ್ಕೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾಯಕ ಜಸ್ಕರನ್‌ ಸಿಂಗ್‌, ದಿವ್ಯಾ ರಾಮಚಂದ್ರ ತಂಡ ಹಾಗೂ ಸಂಗೀತ ಸಂಯೋಜಕ ನಕುಲ್‌ ಅಭ್ಯಂಕರ್‌ ತಂಡಗಳಿಂದ ಸಂಗೀತ ಕಾರ್ಯಕ್ರಮ ನೆರವೇರಲಿದೆ. ಫೆ. 8ರಂದು ಸಂಜೆ 6ಕ್ಕೆ ಬಹುಭಾಷಾ ಗಾಯಕ ಸೋನು ನಿಗಮ್, ಹುಬ್ಬಳ್ಳಿಯ ಗಾನ ಕೋಗಿಲೆ ಖ್ಯಾತಿಯ ಮಹನ್ಯ ಪಾಟೀಲ ತಂಡದಿಂದ ಸಂಗೀತ ಕಾರ್ಯಕ್ರಮ ನೆರವೇರಲಿದೆ ಎಂದರು.