ಸಂಸದ ಡಾ.ಸಿ.ಎನ್.ಮಂಜುನಾಥ್ ಮಾಗಡಿ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಬಿಜೆಪಿ ನಾಯಕರು ತೋರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಪೂಜಾರಿಪಾಳ್ಯ ಕೃಷ್ಣಮೂರ್ತಿ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಮಾಗಡಿ

ಸಂಸದ ಡಾ.ಸಿ.ಎನ್.ಮಂಜುನಾಥ್ ಮಾಗಡಿ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಬಿಜೆಪಿ ನಾಯಕರು ತೋರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಪೂಜಾರಿಪಾಳ್ಯ ಕೃಷ್ಣಮೂರ್ತಿ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಇತ್ತೀಚೆಗಷ್ಟೇ ಮಾಗಡಿಯಲ್ಲಿ ಕೆ-ಶಿಫ್ ಕಾಮಗಾರಿ ವಿಳಂಬದಿಂದ ಧೂಳಾಗುತ್ತಿದೆ ಎಂದು ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಪ್ರತಿಭಟನೆ ಮಾಡಿದ್ದನ್ನು ಪ್ರಶ್ನಿಸಿ, ಅಭಿವೃದ್ಧಿ ಕಾಮಗಾರಿಗಳ ವೇಳೆ ವಿವಿಧ ಸಮಸ್ಯೆಗಳಿಂದ ವಿಳಂಬ ಸರ್ವೆ ಸಾಮಾನ್ಯ. ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಬೆಂಗಳೂರು-ಮಾಗಡಿ ಕೆಶಿಪ್ ರಸ್ತೆ ಕಾಮಗಾರಿ ಪ್ರಾರಂಭಿಸಿದ್ದು, ಆನಂತರ ಬಿಜೆಪಿ ಸರ್ಕಾರ ಬಂತು, ನಮ್ಮ ತಾಲೂಕಿನವರೇ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಉಪ ಮುಖ್ಯಮಂತ್ರಿಯಾಗಿದ್ದರು. ಆಗಲೂ ಕಾಮಗಾರಿಯನ್ನು ಪೂರ್ಣಗೊಳಿಸಬಹುದಿತ್ತು, ಕೆ-ಶಿಫ್ ರಸ್ತೆಗೆ ಕೆಲವರು ಜಾಗ ಬಿಟ್ಟಿರಲಿಲ್ಲ, ಅದನ್ನು ಬಿಜೆಪಿಯವರೇ ಬಿಡಿಸಿಕೊಡಬಹುದಿತ್ತು. ಬಾಲಕೃಷ್ಣ ಶಾಸಕರಾದ ನಂತರ ಜಾಗದ ಸಮಸ್ಯೆ ಬಗೆಹರಿಸಿದ್ದಾರೆ. ಅಧಿಕಾರವಿದ್ದಾಗ ಸುಮ್ಮನೆ ಇದ್ದ ಬಿಜೆಪಿ ಮುಖಂಡರು, ಅಧಿಕಾರವಿಲ್ಲದಿದ್ದಾಗ ಸುಖಾಸುಮ್ಮನೇ ಶಾಸಕರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದು ಕೃಷ್ಣಮೂರ್ತಿ ಹೇಳಿದರು.

ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಮಾಗಡಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿವೆ. ವಿರೋಧ ಪಕ್ಷದವರ ಟೀಕೆಗಳು ಸಕರಾತ್ಮಕವಾಗಿರಲಿ, ಕೆ-ಶಿಫ್ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿರಲಿಲ್ಲ, ಗುತ್ತಿಗೆದಾರ ಬಿಟ್ಟು ಓಡಿ ಹೋಗಿದ್ದ, ಶಾಸಕರು, ಮಾಜಿ ಸಂಸದರ ಜತೆ ಸೇರಿ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿಗೆ ಚಾಲನೆ ಕೊಡಿಸಿದ್ದಾರೆ. ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುತ್ತದೆ. ಅಭಿವೃದ್ಧಿಗೆ ಸಹಕಾರ ನೀಡಿ, ಇಲ್ಲವಾದರೆ ಈ ರೀತಿ ಜನಗಳಿಗೆ ತಪ್ಪು ಸಂದೇಶ ನೀಡಬೇಡಿ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಸಂಸದ ಡಾ. ಮಂಜುನಾಥ್‌ಗೆ ಮಾಗಡಿ ಕ್ಷೇತ್ರದಲ್ಲೂ ಹೆಚ್ಚಿನ ಮತ ನೀಡಿದ್ದು, ಕ್ಷೇತ್ರಕ್ಕೆ ಅವರ ಕೊಡುಗೆ ಏನು? ತಾಲೂಕಿನ ನೀರಾವರಿ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಸಂಸದರು ಚಕಾರವೆತ್ತುತ್ತಿಲ್ಲ. ಹೇಮಾವತಿ ನೀರಾವರಿ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ಯೋಜನೆಗೆ ಇದೇ ಬಿಜೆಪಿ-ಜೆಡಿಎಸ್ ವಿರೋಧಿಸುತ್ತಿದ್ದಾರೆ. ಡಿ.ಕೆ.ಸುರೇಶ್ ಸೋತರು ಮನೆಯಲ್ಲಿ ಕುಳಿತುಕೊಂಡಿಲ್ಲ, ಮಾಗಡಿ ತಾಲೂಕಿಗೆ ಎತ್ತಿನಹೊಳೆ, ಸತ್ತೇಗಾಲ ನೀರಾವರಿ ಯೋಜನೆಗಳಿಂದ ಕೆರೆಗಳನ್ನು ತುಂಬಿಸುತ್ತಿದ್ದಾರೆ. ಅಧಿಕಾರ ಇಲ್ಲದಿದ್ದರೂ ಸುರೇಶ್‌ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರಕ್ಕೆ ಗೆದ್ದಿರುವ ಸಂಸದರ ಕೊಡುಗೆ ಏನೂ ಇಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ವಿದ್ದರೂ ಕ್ಷೇತ್ರಕ್ಕೆ ಅನುದಾನ ತಂದು ಅಭಿವೃದ್ಧಿ ಕೆಲಸಗಳಿಗೆ ಸಹಕರಿಸುತ್ತಿಲ್ಲ ಎಂದು ಕೃಷ್ಣಮೂರ್ತಿ ವಾಗ್ದಾಳಿ ನಡೆಸಿದರು. ಪಂಚಗ್ಯಾರಂಟಿ ತಾಲೂಕು ಅಧ್ಯಕ್ಷ ಕಲ್ಕೆರೆ ಶಿವಣ್ಣ, ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್,

ಪುರಸಭೆ ಮಾಜಿ ಸದಸ್ಯ ಹೇಮಲತಾ, ಶಬ್ಬೀರ್, ರಹಮತ್‌, ಮೂರ್ತಿ, ಗಂಗರಾಜು, ಜಯಮ್ಮ, ಚಿಕ್ಕರಾಜು, ಪರ್ವಿಜ್ ಆಹಮದ್, ಆನಂದ್‌ಗೌಡ, ಕೇಬಲ್ ಮಂಜುನಾಥ್, ಚಿಕ್ಕಣ್ಣ, ಶಾಂತಕುಮಾರ್ ಇತರರಿದ್ದರು.