ಶಿರಹಟ್ಟಿ: ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗಿರದೇ ಅವರ ಜೀವನದ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಬಸವಣ್ಣನವರ ಆಚಾರ, ವಿಚಾರ, ವಚನಗಳನ್ನು ಯುವಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸವಿತಾ ತಾಂಭ್ರೆ ತಿಳಿಸಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜರುಗಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣ ಸಾಮಾನ್ಯರಲ್ಲ. ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು. ಬಸವಣ್ಣ ನಾಡಿನಲ್ಲಿ ಯಾವ ಕಾರಣಕ್ಕೆ, ಉದ್ದೇಶ, ವಿಚಾರಕ್ಕಾಗಿ ಹುಟ್ಟಿ ಬಂದರು ಎಂಬುದನ್ನು ಮರೆತಿದ್ದರಿಂದ ನಾಡು ಸಂಕಷ್ಟದಲ್ಲಿದೆ ಎಂದರು. ಸಂಸ್ಕೃತದ ಪ್ರಭಾವ ಇದ್ದ ಕಾಲದಲ್ಲಿ ಜನಸಾಮಾನ್ಯರಿಗೆ ತಿಳಿಯುವಂತೆ ಕನ್ನಡದಲ್ಲಿ ವಚನಗಳನ್ನು ರಚಿಸಿದ ಕೀರ್ತಿ ಶಿವಶರಣರಿಗೆ ಸಲ್ಲುತ್ತದೆ. ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ಕೆಲಸದ ಮಹತ್ವವನ್ನು ತಿಳಿಸಿಕೊಟ್ಟಿರುವ ಬಸವಣ್ಣ ತಮ್ಮ ಅನುಭವ ಮಂಟಪದಲ್ಲಿ ಮಹಿಳೆಯರಿಗೂ ಸ್ಥಾನಮಾನ ನೀಡಿದ್ದರು. ಇದರಿಂದ ಅಕ್ಕಮಹಾದೇವಿ, ನೀಲಾಂಬಿಕೆ, ಗಂಗಾಂಬಿಕೆ, ಮುಕ್ತಾಯಕ್ಕ ಮೊದಲಾದ ಶಿವಶರಣೆಯರು ಸಮಾಜದ ಅಂಕುಡೊಂಕುಗಳನ್ನು ತಮ್ಮ ವಚನಗಳಲ್ಲಿ ಸಾರಿದ್ದಾರೆ ಎಂದರು.೮೦೦ ವರ್ಷಗಳ ಹಿಂದೆ ಕಲ್ಯಾಣದಲ್ಲಿ ಕ್ರಾಂತಿ ಮಾಡಿದ ಬಸವಣ್ಣ ಮತ್ತೆ ಹುಟ್ಟಿ ಬಂದು ಇಂದಿನ ಪೀಳಿಗೆಯನ್ನು ಉದ್ಧಾರ ಮಾಡಬೇಕಾಗಿದೆ. ೧೨ನೇ ಶತಮಾನದಲ್ಲಿ ಯಾವುದೇ ಕಾನೂನುಗಳನ್ನು ಮಾಡದೇ ಜನರ ಮನ ಪರಿವರಿವರ್ತನೆಯಿಂದ ಆಡಳಿತ ನಡೆಸಿದ ವ್ಯಕ್ತಿ ಬಸವಣ್ಣ. ಸಮಾಜದಲ್ಲಿನ ಮೇಲು- ಕೀಳು, ಹೆಣ್ಣು- ಗಂಡು ಎಂಬ ಭೇದ ಭಾವವನ್ನು ತೊರೆದು ಸಮಾನತೆ ತೋರಿಸಿದ ಮಹಾನ್ ಚೇತನ ಬಸವಣ್ಣ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಮಾತನಾಡಿ, ಬಸವಣ್ಣನವರು ವರ್ಣರಹಿತ, ವರ್ಗರಹಿತ, ಲಿಂಗಭೇದರಹಿತ ಸಮಾಜ ನಿರ್ಮಾಣಕ್ಕಾಗಿ ಪ್ರಯತ್ನಿಸಿದರು. ಕೇವಲ ಆಚಾರ- ವಿಚಾರಗಳಲ್ಲಿ ಪ್ರಾಮಾಣಿಕರಾಗಿರದೇ ದಿನನಿತ್ಯದ ಕೆಲಸಗಳಲ್ಲಿ ಪ್ರಾಮಾಣಿಕರಾಗಿರಬೇಕು. ದುಡಿಮೆ ಶಿವಪೂಜೆಗೆ ಸಮಾನ ಎಂದ ವಿಶ್ವಗುರು ಬಸವಣ್ಣನವರು ತನ್ನ ತಾನರಿಯದೊಡೆ ಅದೆ ದೇವರು ಎಂದು ಸಾರಿದರು. ಲಿಂಗ ದೇವರಲ್ಲ. ಅದು ಅರಿವಿನ ಕುರುಹು ಎಂಬುದನ್ನು ಜನಕ್ಕೆ ತೋರಿಸಿ ಕೊಟ್ಟರು ಎಂದರು.
ಮುಖಂಡರಾದ ನಾಗರಾಜ ಲಕ್ಕುಂಡಿ, ಪರಮೇಶ ಪರಬ, ದೇವಪ್ಪ ಪವಾರ, ಸುರೇಶ ಹವಳದ, ಬಸವರಾಜ ಕಳಸಾಪೂರ, ಎಂ.ಕೆ. ಲಮಾಣಿ, ಸಿದ್ದು ಪಾಟೀಲ, ಎಂ.ಎ. ಮಕಾನದಾರ, ಪರಸಪ್ಪ ಬಂತಿ, ಎಚ್.ಎಂ. ಪಲ್ಲೇದ, ಪಾಟೀಲ, ಅರ್ಕಸಾಲಿ, ಬಸವರಾಜ ತುಳಿ, ಅಕಬರಸಾಬ ಯಾದಗಿರಿ ಸೇರಿ ಅನೇಕರು ಇದ್ದರು.ಬಸವೇಶ್ವರ ವಿಚಾರಧಾರೆ ಯುವಪೀಳಿಗೆಗೆ ಪರಿಚಯಿಸಿ: ಸವಿತಾ ತಾಂಭ್ರೆ
ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಮಾತನಾಡಿ, ಬಸವಣ್ಣನವರು ವರ್ಣರಹಿತ, ವರ್ಗರಹಿತ, ಲಿಂಗಭೇದರಹಿತ ಸಮಾಜ ನಿರ್ಮಾಣಕ್ಕಾಗಿ ಪ್ರಯತ್ನಿಸಿದರು ಎಂದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.