ಉತ್ತರ ಕನ್ನಡ ಜಿಲ್ಲೆಯ ಕಲೆ, ಸಂಸ್ಕೃತಿ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸಬೇಕು.
ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಛಾಯಾಚಿತ್ರ, ರೀಲ್ಸ್ ಪ್ರದರ್ಶನ ಮತ್ತು ಸ್ಪರ್ಧೆ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಕಾರವಾರಉತ್ತರ ಕನ್ನಡ ಜಿಲ್ಲೆಯ ಕಲೆ, ಸಂಸ್ಕೃತಿ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸಬೇಕು. ಇದೇ ಉದ್ದೇಶದಿಂದ ಕರಾವಳಿ ಉತ್ಸವ ಸಂದರ್ಭದಲ್ಲಿ ಛಾಯಾಚಿತ್ರ ಹಾಗೂ ರೀಲ್ಸ್ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ ಹೇಳಿದರು.
ಮಂಗಳವಾರ ನೂತನ ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧದಲ್ಲಿ ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಛಾಯಾಚಿತ್ರ ಹಾಗೂ ರೀಲ್ಸ್ ಪ್ರದರ್ಶನ ಮತ್ತು ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹೆಚ್ಚಾಗಿರುವುದರಿಂದ ಪ್ರಮುಖ ಪ್ರವಾಸಿ ಸ್ಥಳಗಳ, ಜಲಪಾತಗಳ, ಕಡಲತೀರಗಳ, ಪಾರಂಪರಿಕ ತಾಣಗಳ ಛಾಯಾಚಿತ್ರ ನೀಡಿದಲ್ಲಿ, ಅವುಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಲಾಗುವುದು. ಈಗಾಗಲೇ ಕೆಲವು ಛಾಯಾಗ್ರಾಹಕರು ಛಾಯಾಚಿತ್ರ ಮತ್ತು ರೀಲ್ಸ್ ನೀಡಿದ್ದಾರೆ. ಈ ಸ್ಪರ್ಧೆ ಮತ್ತು ಪ್ರದರ್ಶನದಲ್ಲಿ ಇನ್ನೂ ಆಕರ್ಷಣೆಯ, ಇತಿಹಾಸಯುಳ್ಳ ಛಾಯಾಚಿತ್ರಗಳನ್ನು ಸಂಗ್ರಹಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂತಹ ಅಪರೂಪದ ಮತ್ತು ಐತಿಹಾಸಿಕ ಛಾಯಾಚಿತ್ರಗಳು ಇದ್ದಲ್ಲಿ ಪ್ರದರ್ಶನಕ್ಕೆ ಇಡುವಂತೆ ತಿಳಿಸಿದ ಅವರು, ಉತ್ತಮ ಛಾಯಾಚಿತ್ರ ಮತ್ತು ರೀಲ್ಸ್‌ಗಳನ್ನು ಗುರುತಿಸಿ ಕೊನೆಯ ದಿನ ಬಹುಮಾನ ನೀಡಲಾಗುವುದು ಎಂದರು.
ನಿಗದಿತ ದಿನಾಂಕದೊಳಗೆ ಆಗಮಿಸಿದ ಛಾಯಾಚಿತ್ರ ಮತ್ತು ರೀಲ್ಸ್‌ಗಳನ್ನು ಈ ಸ್ಪರ್ಧೇಗೆ ಪರಿಗಣಿಸಲಾಗುವುದು. ನಂತರ ಬಂದ ಛಾಯಾಚಿತ್ರ ಮತ್ತು ರೀಲ್ಸ್ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು, ಉತ್ತಮವಾದ ರೀಲ್ಸ್ ಗಳನ್ನು ಕರಾವಳಿ ಉತ್ಸವದ ವೇದಿಕೆಯಲ್ಲಿ ಪ್ರದರ್ಶಿಸಲಾಗುವುದು ಎಂದರು.ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಮಂಗಳಗೌರಿ ಭಟ್, ಜಿಲ್ಲಾ ವಾರ್ತಾಧಿಕಾರಿ ಬಿ.ಶಿವಕುಮಾರ್ ಮತ್ತಿತರರಿದ್ದರು.
ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳು ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಅತ್ಯಾಕರ್ಷಕವಾದ 50ಕ್ಕೂ ಅಧಿಕ ಛಾಯಾಚಿತ್ರಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಕರಾವಳಿ ಉತ್ಸವದ ಮುಕ್ತಾಯದವರೆಗೂ ಸಾರ್ವಜನಿಕರಿಗೆ ಉಚಿತವಾಗಿ ಈ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.