ದಲಿತ ಮುಖಂಡರ ಅಸಮಾಧಾನ ತಣಿಸಿದ ಇಕ್ಬಾಲ್ ಹುಸೇನ್

| Published : Mar 25 2024, 12:48 AM IST

ಸಾರಾಂಶ

ರಾಮನಗರ: ಪ್ರಾಧಿಕಾರಗಳ ನೇಮಕದಲ್ಲಿ ಆಗಿರುವ ಅನ್ಯಾಯದ ವಿರುದ್ಧ ಅಪಸ್ವರ ಎತ್ತಿದ್ದರಿಂದ ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನ ಭುಗಿಲೇಳಲು ಕಾರಣರಾದ ದಲಿತ ಮುಖಂಡರನ್ನು ಶಾಸಕ ಇಕ್ಬಾಲ್ ಹುಸೇನ್ ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರು.

ರಾಮನಗರ: ಪ್ರಾಧಿಕಾರಗಳ ನೇಮಕದಲ್ಲಿ ಆಗಿರುವ ಅನ್ಯಾಯದ ವಿರುದ್ಧ ಅಪಸ್ವರ ಎತ್ತಿದ್ದರಿಂದ ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನ ಭುಗಿಲೇಳಲು ಕಾರಣರಾದ ದಲಿತ ಮುಖಂಡರನ್ನು ಶಾಸಕ ಇಕ್ಬಾಲ್ ಹುಸೇನ್ ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರು.

ನಗರದ ಹೊರ ವಲಯದ ರೆಸಾರ್ಟ್‌ನಲ್ಲಿ ದಲಿತ ಮುಖಂಡರ ಸಭೆ ನಡೆಸಿದ ಇಕ್ಬಾಲ್ ಹುಸೇನ್ ವಿರುದ್ಧ ಮುಖಂಡರು ದಲಿತರಿಗೆ ಅಧಿಕಾರ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಬಹಿರಂಗವಾಗಿ ನೋವು ತೋಡಿಕೊಂಡರು.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ದಲಿತ ಮುಖಂಡರೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿದ ಫಲವಾಗಿ ಮೂವರು ಶಾಸಕರು ಆಯ್ಕೆಯಾಗಿದ್ದೀರಿ. ನಿಮಗೆ ಅಧಿಕಾರ ಕೊಡಿಸಲು ನಾವೆಲ್ಲರೂ ಶ್ರಮಿಸಬೇಕು. ನಮಗೆ ಅಧಿಕಾರ ಕೊಡಲು ನಿಮಗ್ಯಾರಿಗೂ ಇಷ್ಟವಿಲ್ಲ. ನಾವೇಕೆ ನಿಮ್ಮ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಬೇಕು ಎಂದು ಪ್ರಶ್ನಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿ ಒಂದೇ ಒಂದು ಮತ ಹಾಕಿಸಿದವರಿಗೆ ಜಾತಿ ಆಧಾರದ ಮೇಲೆ ಅಧಿಕಾರ ನೀಡುತ್ತೀರಿ. ಚುನಾವಣೆ ಮುಗಿದು 9 ತಿಂಗಳು ಕಳೆಯುತ್ತಿದ್ದರು ಒಂದೇ ಒಂದು ದಲಿತರ ಸಭೆ ಕರೆದು ಅಹವಾಲು ಆಲಿಸುವ ಪ್ರಯತ್ನ ಮಾಡಲಿಲ್ಲ ಎಂದು ದಲಿತ ಮುಖಂಡರು ಆಕ್ರೋಶ ಹೊರ ಹಾಕಿದರು.

ಈ ವೇಳೆ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್, ನಾನು ಶಾಸಕನಾಗಿ 9 ತಿಂಗಳಷ್ಟೇ ಆಗಿದೆ. ದಲಿತರ ಸಭೆ ಕರೆದು ಅಹವಾಲು ಆಲಿಸಿಲ್ಲ ನಿಜ. ಇನ್ನು ಮುಂದೆ ಈ ರೀತಿ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಪ್ರಾಧಿಕಾರಗಳಲ್ಲಿ ಅಧಿಕಾರ ಹಂಚಿಕೆ ನನ್ನ ಕೈಯಲ್ಲಿಲ್ಲ. ಆ ವಿಚಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ತೀರ್ಮಾನ ತೆಗೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪರಿಶಿಷ್ಟರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗದ ಮುಖಂಡರಿಗೂ ಅವಕಾಶ ನೀಡಲಿದ್ದು, ಯಾರೂ ಬೇಸರಗೊಳ್ಳುವುದು ಬೇಡ ಎಂದು ಮನವಿ ಮಾಡಿದರು.

ವಿಧಾನಸಭಾ ಚುನಾವಣೆಯಲ್ಲಿ ನೀವೆಲ್ಲರರೂ ನನ್ನ ಗೆಲುವಿಗಾಗಿ ಪಟ್ಟ ಶ್ರಮವನ್ನು ಮರೆಯುವುದಿಲ್ಲ. ಪ್ರಾಧಿಕಾರ, ಸ್ಥಳೀಯ ಸಂಸ್ಥೆಗಳ ನಾಮ ನಿರ್ದೇಶನದಲ್ಲಿ ಯಾರ್ಯಾರಿಗೆ ಅವಕಾಶ ನೀಡಬೇಕೆಂದು ನೀವೇ ಪಟ್ಟಿ ಸಿದ್ಧಪಡಿಸಿ ಸಲ್ಲಿಸಿದರೆ ಕ್ರಮ ವಹಿಸುತ್ತೇನೆ. ಈ ಬಾರಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯಾಗಿದ್ದು, ಎಲ್ಲರು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಇಕ್ಬಾಲ್ ಹುಸೇನ್ ಮನವಿ ಮಾಡಿದರು.

ಸಭೆಯಲ್ಲಿ ದಲಿತ ಮುಖಂಡರಾದ ಶಿವಕುಮಾರಸ್ವಾಮಿ, ಚಲುವರಾಜು, ಶಿವಶಂಕರ್ , ಶಿವಪ್ರಕಾಶ್ , ಶ್ರೀನಿವಾಸಮೂರ್ತಿ, ಗುಡ್ಡೆ ವೆಂಕಟೇಶ್ ಮತ್ತಿತರರು ಹಾಜರಿದ್ದರು.

24ಕೆಆರ್ ಎಂಎನ್ 5ಜೆಪಿಜಿ

ರಾಮನಗರದ ರೆಸಾರ್ಟ್‌ನಲ್ಲಿ ಶಾಸಕ ಇಕ್ಬಾಲ್ ಹುಸೇನ್ ದಲಿತ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು.