‘10ನೇ ತರಗತಿವರೆಗೆ ಕನ್ನಡ ಕಡ್ಡಾಯ, ಏಕರೂಪದ ಶಿಕ್ಷಣ ಬೇಕು’

| Published : Mar 25 2024, 12:48 AM IST

ಸಾರಾಂಶ

ಇಂಗ್ಲಿಷ್‌ ಕಲಿಯದೆಯೂ ಫ್ರಾನ್ಸ್‌ ಜನರು ರಫೇಲ್‌ನಂಥ ಯುದ್ಧ ವಿಮಾನವನ್ನೇ ತಯಾರು ಮಾಡಿಲ್ಲವೇ? ಕನ್ನಡ ಮಾಧ್ಯಮದಲ್ಲೇ ಕಲಿತು ಅದೆಷ್ಟು ಉನ್ನತ ಹುದ್ದೆ ಗಳಿಸಿದವರಿಲ್ಲವೇ? ಇನ್ನೂ ನಾವು ಕನ್ನಡ ಮಾಧ್ಯಮವನ್ನು ಸ್ವೀಕಾರ ಮಾಡದಿದ್ದರೆ ಭಾಷೆ ಉಳಿಯುವುದೆಂತು ಎಂದು ಪ್ರಭಾಕರ ಶಿಶಿಲ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಈಗಿನ ಪೀಳಿಗೆ ಇಂಗ್ಲಿಷ್‌ನಲ್ಲೇ ಕಲಿಯುವುದರಿಂದ ಕನ್ನಡ ಸಂಸ್ಕೃತಿ ಉಳಿಯೋದು ಹೇಗೆ ಎಂದು ತೀವ್ರ ವಿಷಾದ ವ್ಯಕ್ತಪಡಿಸಿರುವ ಹಿರಿಯ ಸಾಹಿತಿ ಡಾ.ಪ್ರಭಾಕರ ಶಿಶಿಲ, ಕನ್ನಡಕ್ಕಾಗಿ ರಕ್ತ, ಬೆವರು ಹರಿಸಬೇಕಿಲ್ಲ. ಕನಿಷ್ಠ 10ನೇ ತರಗತಿವರೆಗಾದರೂ ಕನ್ನಡದಲ್ಲೇ ಕಡ್ಡಾಯ ಶಿಕ್ಷಣದ ನಿಯಮ ರೂಪಿಸಬೇಕಾಗಿದೆ. ಕನ್ನಡ ಮಾಧ್ಯಮವನ್ನು ಸ್ವೀಕಾರ ಮಾಡದೇ ಇದ್ದರೆ ನಮ್ಮ ಈ ನೆಲದ ಭಾಷೆ, ಸಂಸ್ಕೃತಿ ವಿನಾಶವಾಗಲಿದೆ ಎಂದು ಎಚ್ಚರಿಸಿದ್ದಾರೆ.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಗರದ ಪುರಭವನದ ಮಿಜಾರುಗುತ್ತು ಆನಂದ ಆಳ್ವ ವೇದಿಕೆಯಲ್ಲಿ 26ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ಇಂಗ್ಲಿಷನ್ನು ಕಲಿಯುವುದು ಬೇರೆ, ಇಂಗ್ಲಿಷ್‌ನಲ್ಲೇ ಕಲಿಯುವುದು ಬೇರೆ. ಇಂಗ್ಲಿಷ್‌ನಲ್ಲೇ ಕಲಿಯುವುದರಿಂದ ಕನ್ನಡ ಭಾಷೆ, ಸಂಸ್ಕೃತಿ ಮೇಲೆ ಬಹುದೊಡ್ಡ ಹೊಡೆತ ಬೀಳಲಿದೆ. ಇದನ್ನು ತಪ್ಪಿಸಬೇಕಾದರೆ 10ನೇ ತರಗತಿವರೆಗೆ ಏಕರೂಪದ ಶಿಕ್ಷಣ ಪದ್ಧತಿ, ಕನ್ನಡದಲ್ಲಿ ಶಿಕ್ಷಣ, ಶಿಕ್ಷಣದ ರಾಷ್ಟ್ರೀಕರಣವೊಂದೇ ದಾರಿ ಎಂದು ಪ್ರಭಾಕರ ಶಿಶಿಲ ಪ್ರತಿಪಾದಿಸಿದರು.

ಯಕ್ಷಗಾನ ರಾಜ್ಯಕಲೆಯಾಗಲಿ:

ಯಕ್ಷಗಾನ ಎಂದೋ ರಾಷ್ಟ್ರೀಯ ಕಲೆ ಆಗಬೇಕಿತ್ತು. ಆದರೆ ರಾಜ್ಯಕಲೆಯೂ ಆಗಿಲ್ಲ ಎನ್ನುವುದು ಬೇಸರದ ಸಂಗತಿ. ಭೂತಾರಾಧನೆ ಹಾಗೂ ಯಕ್ಷಗಾನ ತುಳುನಾಡಿನ ಐಡೆಂಟಿಟಿ. ಭೂತಾರಾಧನೆಯನ್ನು ಸಾರ್ವಜನಿಕವಾಗಿ ತೋರಿಸುವಂತಿಲ್ಲ. ಆದರೆ ಯಕ್ಷಗಾನವನ್ನು ರಾಜ್ಯಕಲೆಯಾಗಿ ಅಂಗೀಕಾರ ಮಾಡಬೇಕಿದೆ ಎಂದು ಆಗ್ರಹಿಸಿದರು.

ಇಂಗ್ಲಿಷ್‌ನಿಂದಲೇ ಸಾಧನೆಯಲ್ಲ: ಪ್ರಸ್ತುತ ಕನ್ನಡ ನಾಡಿನಲ್ಲಿ ನೆಲ, ಜಲ, ಭಾಷೆಯ ಮೂರು ಮುಖ್ಯ ಸಮಸ್ಯೆಗಳಿವೆ. ನೆಲದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಹಾಜನ್‌ ವರದಿ ಅನುಷ್ಠಾನ ಆಗದೆ ಇರೋದು ದೊಡ್ಡ ದುರಂತ. ಜಲದ ಸಮಸ್ಯೆ ಇನ್ನೂ ಹಾಗೇ ಉಳಿದಿದೆ. ಇನ್ನು ಭಾಷೆಯ ವಿಚಾರಕ್ಕೆ ಬಂದರೆ, ಇಂಗ್ಲಿಷ್‌ ಕಲಿಯದೆಯೂ ಫ್ರಾನ್ಸ್‌ ಜನರು ರಫೇಲ್‌ನಂಥ ಯುದ್ಧ ವಿಮಾನವನ್ನೇ ತಯಾರು ಮಾಡಿಲ್ಲವೇ? ಕನ್ನಡ ಮಾಧ್ಯಮದಲ್ಲೇ ಕಲಿತು ಅದೆಷ್ಟು ಉನ್ನತ ಹುದ್ದೆ ಗಳಿಸಿದವರಿಲ್ಲವೇ? ಇನ್ನೂ ನಾವು ಕನ್ನಡ ಮಾಧ್ಯಮವನ್ನು ಸ್ವೀಕಾರ ಮಾಡದಿದ್ದರೆ ಭಾಷೆ ಉಳಿಯುವುದೆಂತು ಎಂದು ಪ್ರಭಾಕರ ಶಿಶಿಲ ಪ್ರಶ್ನಿಸಿದರು.ಅಭಿವ್ಯಕ್ತಿ ಸ್ವಾತಂತ್ರ್ಯ ಹೆಚ್ಚಲಿ: ಸಾಹಿತ್ಯಕ್ಕೆ ಸಮಾಜವನ್ನು ಬದಲಿಸುವ ಶಕ್ತಿ ಇದೆ. ಆದರೆ ಆದರೆ ಸಾಹಿತ್ಯದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಇರಬಾರದು. ಪ್ರಸ್ತುತ ಭಾರತ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಪ್ರಪಂಚದಲ್ಲಿ 120ನೇ ಸ್ಥಾನದಲ್ಲಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಸಾಹಿತ್ಯದ ವಾತಾವರಣ ಮತ್ತೆ ನಿರ್ಮಾಣ ಆಗಬೇಕಿದೆ. ಸಾಹಿತ್ಯ ರಚನೆ ಜೀವನ ಆಗಿರುವ ಜೀವನ ಕ್ರಮ ಅಳವಡಿಕೆ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು.ಜಿಲ್ಲಾ ಸಾಹಿತಿ ಮಾಹಿತಿ ಕೋಶ ಬರಲಿ:

ಜಿಲ್ಲೆಯಲ್ಲಿ ತುಂಬ ಮಂದಿ ಸಾಹಿತಿಗಳಿದ್ದಾರೆ, ಹೊಸಬರೂ ತಯಾರಾಗುತ್ತಿದ್ದಾರೆ. ಬಹಳಷ್ಟು ಮಂದಿ ಸಾಹಿತಿಗಳ ಪರಿಚಯ ಜನರಿಗೆ ಇಲ್ಲ. ಈ ಬಾರಿಯಾದರೂ ಜಿಲ್ಲಾ ಮಟ್ಟದ ಸಾಹಿತಿ ಮಾಹಿತಿ ಕೋಶವನ್ನು ಹೊರತರಬೇಕಿದೆ. ಅಲ್ಲದೆ, ಜಿಲ್ಲಾ ಮಟ್ಟದಲ್ಲಿ ಕನ್ನಡ ಭವನ ನಿರ್ಮಾಣ ಆಗಬೇಕು. ಜಿಲ್ಲಾ ಮಟ್ಟದಲ್ಲಿ ಜಿಲ್ಲೆಯ ಎಲ್ಲ ಸಾಹಿತಿಗಳ ಪುಸ್ತಕ ಸಿಗುವಂತಿರಬೇಕು ಎಂದು ಡಾ.ಪ್ರಭಾಕರ ಶಿಶಿಲ ಸಲಹೆ ನೀಡಿದರು.ಸಮ್ಮೇಳನಾಧ್ಯಕ್ಷೆ ಭುವನೇಶ್ವರಿ ಹೆಗಡೆ ಮಾತನಾಡಿದರು. ಇದೇ ಸಂದರ್ಭ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್‌, ಶ್ರೀಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ, ಮಂಗಳೂರು ವಿವಿ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ಸೋಮಣ್ಣ, ವಿಶ್ವ ದೇವಾಡಿಗ ಮಹಾಮಂಡಲ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಉಡುಪಿ ಜಿಲ್ಲಾ ಕಪಾಸ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಸಾಪ ಬೆಂಗಳೂರು ಗೌರವ ಕೋಶಾಧಿಕಾರಿ ಬಿ.ಎಂ. ಪಟೇಲ್‌ ಪಾಂಡು ಮತ್ತಿತರರು ಇದ್ದರು.ಸಮ್ಮೇಳನದ ನಿರ್ಣಯಗಳು1. ಪಿ.ಯು.ಸಿ ಶಿಕ್ಷಣದಲ್ಲಿ ಕಲಾ ವಿಭಾಗದಲ್ಲಿ ಕನ್ನಡ ಐಚ್ಛಿಕವನ್ನು ಅಧ್ಯಯನಕ್ಕೆ ಸೇರ್ಪಡೆಗೊಳಿಸುವಲ್ಲಿ ಶಿಕ್ಷಣ ಇಲಾಖೆ ಪ್ರೋತ್ಸಾಹ ಕೊಡಬೇಕು.2. ಪದವಿ ಶಿಕ್ಷಣದಲ್ಲಿ ಕನ್ನಡ ಐಚ್ಛಿಕವನ್ನು ಆಯ್ಕೆ ಮಾಡಿ ಓದುವ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಬೇಕು.3. ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಿ ನಿರ್ಭೀತಿಯಿಂದ ವ್ಯಾಸಂಗ ಮಾಡಲು ಅವಕಾಶ ಮಾಡಿ ಕೊಡಬೇಕು.4. ಶತಮಾನದ ಇತಿಹಾಸವುಳ್ಳ ಕನ್ನಡ ಶಾಲೆಗಳಿಗೆ ವಿಶೇಷ ಅನುದಾನ ನೀಡಿ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸರ್ಕಾರ ಗಮನ ಹರಿಸಬೇಕು.5. ಈ ಹಿಂದಿನ ಸಮ್ಮೇಳನದಲ್ಲಿ ತೆಗೆದುಕೊಂಡ ಎಲ್ಲ ನಿರ್ಣಯಗಳನ್ನು ಗಂಭಿರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಮ್ಮೇಳನದಲ್ಲಿ ಒತ್ತಾಯಿಸಲಾಯಿತು.