ಜೆಡಿಎಸ್‌ನವರ ವಿಶ್ವಾಸ ಗಳಿಸಿ ಚುನಾವಣೆ ಎದುರಿಸೋಣ: ಶಾಸಕ ಸುರೇಶ್ ಗೌಡ ಕರೆ

| Published : Mar 25 2024, 12:48 AM IST

ಜೆಡಿಎಸ್‌ನವರ ವಿಶ್ವಾಸ ಗಳಿಸಿ ಚುನಾವಣೆ ಎದುರಿಸೋಣ: ಶಾಸಕ ಸುರೇಶ್ ಗೌಡ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ನಮಗೆ ಪಕ್ಷದ ಗೆಲುವು ಮುಖ್ಯ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡುವುದೇ ನಮ್ಮ ಗುರಿ. ಈ ನಿಟ್ಟಿನಲ್ಲಿ ನಮ್ಮಲ್ಲಿರುವ ಮನಸ್ತಾಪಗಳನ್ನು ಮರೆತು ಒಗ್ಗಟ್ಟಿನಿಂದ ವಿ.ಸೋಮಣ್ಣ ಅವರು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಲು ಪ್ರಯತ್ನಿಸಬೇಕು.

ಕನ್ನಡಪ್ರಭ ವಾರ್ತೆ ತುಮಕೂರು

ಒಂದು ಕಾಲದಲ್ಲಿ ಬಿಜೆಪಿಯನ್ನು ದ್ವೇಷಿಸುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ, ನಾಯಕತ್ವ ಒಪ್ಪಿದ್ದಾರೆ. ಈ ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಸಾಮರ್ಥ್ಯ ಮೋದಿಯವರಿಗಿದೆ ಎಂದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಸೇರಿ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಲು ನಮ್ಮ ಜೊತೆ ಕೈ ಜೋಡಿಸಿದ್ದಾರೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಸುರೇಶ್‌ಗೌಡರು ಹೇಳಿದರು.

ಭಾನುವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಗುಬ್ಬಿ ತಾಲೂಕು ಪ್ರಮುಖರ ಸಭೆಯಲ್ಲಿ ಮಾತನಾಡಿದ ಶಾಸಕರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರ ಗೆಲುವಿಗೆ ಕೆಲಸ ಮಾಡಬೇಕು ಎಂದು ವಿನಂತಿಸಿದರು.

ನಮಗೆ ಪಕ್ಷದ ಗೆಲುವು ಮುಖ್ಯ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಮೋದಿಯವರನ್ನು ಪ್ರಧಾನಿ ಮಾಡುವುದೇ ನಮ್ಮ ಗುರಿ. ಈ ನಿಟ್ಟಿನಲ್ಲಿ ನಮ್ಮಲ್ಲಿರುವ ಮನಸ್ತಾಪಗಳನ್ನು ಮರೆತು ಒಗ್ಗಟ್ಟಿನಿಂದ ವಿ.ಸೋಮಣ್ಣ ಅವರು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಲು ಪ್ರಯತ್ನಿಸಬೇಕು. ಈ ಲೋಕಸಭಾ ಚುನಾವಣೆಯ ಗೆಲುವು ಮುಂಬರುವ ಚುನಾವಣೆಗಳ ಗೆಲುವಿಗೆ ನಾಂದಿಯಾಗಬೇಕು. ಮುಖಂಡರು ಕಾರ್ಯಕರ್ತರಲ್ಲಿ ಹುರುಪು ತುಂಬಿ, ಜೆಡಿಎಸ್ ಕಾರ್ಯಕರ್ತರ ಜೊತೆಗೂಡಿ ಚುನಾವಣೆ ಗೆಲ್ಲಬೇಕು ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್ ಮುಖಂಡರ ಜಂಟಿ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಅದಕ್ಕೂ ಮೊದಲು ಜಿಲ್ಲಾ ಮಟ್ಟದಲ್ಲಿ ಎರಡೂ ಪಕ್ಷಗಳ ಪ್ರಮುಖರ ಸಭೆ ಮಾಡಿ ಒಟ್ಟಾಗಿ ಚುನಾವಣೆ ಎದುರಿಸಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಅವರ ಗೆಲುವಿಗೆ ಕೆಲಸ ಮಾಡಲು ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

ಹಿಂದಿನ ಕಹಿ ಘಟನೆಗಳನ್ನು ಮರೆತು, ನಮ್ಮ ಅಭ್ಯರ್ಥಿ ಜಯಗಳಿಸಿ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಬೇಕು ಎಂಬುವುದೇ ನಮ್ಮ ಸಂಕಲ್ಪವಾಗಬೇಕು. ಮೋದಿ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳನ್ನು ಮನೆಮನೆಗೂ ತಲುಪಿಸಿ ಮತದಾರರು ಬಿಜೆಪಿ ಬೆಂಬಲಿಸಲು ಪ್ರಚಾರ ಮಾಡಬೇಕು ಎಂದು ಹೇಳಿದರು.

ಗುಬ್ಬಿ ಕ್ಷೇತ್ರದ ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್‌ಕುಮಾರ್ ಮಾತನಾಡಿ, ಗುಬ್ಬಿ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ನಾವೂ ಒಗ್ಗಟ್ಟಿನಿಂದ ಅವರ ಜೊತೆಗೂಡಿ ವಿ.ಸೋಮಣ್ಣ ಅವರಿಗೆ ಕ್ಷೇತ್ರದಲ್ಲಿ ಅತ್ಯಧಿಕ ಮತ ದೊರೆಯುವಂತೆ ಮಾಡಿ ಪ್ರಧಾನಿ ಮೋದಿಯವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಗುಬ್ಬಿ ಮಂಡಲ ಅಧ್ಯಕ್ಷ ಪಂಚಾಕ್ಷರಿ, ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ, ವಿಜಯಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹಾಲೇಗೌಡ, ಸಂದೀಪ್‌ಗೌಡ, ಜಿಲ್ಲಾ ಕಾರ್ಯದರ್ಶಿ ಬಲರಾಂ, ಮುಖಂಡರಾದ ಎಸ್.ಶಿವಪ್ರಸಾದ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಿದ್ದರಾಮಣ್ಣ, ಜಿಲ್ಲಾ ಎಸ್.ಟಿ.ಮೋರ್ಚಾ ಅಧ್ಯಕ್ಷ ವೆಂಕಟೇಶ್, ಎಸ್.ಸಿ.ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಕೇಶ್, ಗಂಗಣ್ಣ ಮತ್ತಿತರರು ಭಾಗವಹಿಸಿದ್ದರು.