25 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ

| Published : Feb 02 2025, 01:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಬಬಲೇಶ್ವರ ತಾಲೂಕಿನ ನಿಡೋಣಿ, ಶೇಗುಣಸಿ ಸೇರಿದಂತೆ ನಾನಾ ಗ್ರಾಮಗಳ ಬಾಕಿ ಜಮೀನಿಗೆ ಮುಳವಾಡ ಏತ ನೀರಾವರಿ ಯೋಜನೆಯ 5 ಎ ಮತ್ತು 5 ಬಿ ಲಿಫ್ಟ್ ಮೂಲಕ ನೀರು ಒದಗಿಸುವ ಹಾಗೂ 15ನೇ ವಿತರಣೆ ಕಾಲುವೆ ಕಾಮಗಾರಿಗೆ ಅತೀ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಬಲೇಶ್ವರ ತಾಲೂಕಿನ ನಿಡೋಣಿ, ಶೇಗುಣಸಿ ಸೇರಿದಂತೆ ನಾನಾ ಗ್ರಾಮಗಳ ಬಾಕಿ ಜಮೀನಿಗೆ ಮುಳವಾಡ ಏತ ನೀರಾವರಿ ಯೋಜನೆಯ 5 ಎ ಮತ್ತು 5 ಬಿ ಲಿಫ್ಟ್ ಮೂಲಕ ನೀರು ಒದಗಿಸುವ ಹಾಗೂ 15ನೇ ವಿತರಣೆ ಕಾಲುವೆ ಕಾಮಗಾರಿಗೆ ಅತೀ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಬೆಂಗಳೂರು ಪ್ರೆಸ್ ಕ್ಲಬ್ ನಿಂದ ವರ್ಷದ ವ್ಯಕ್ತಿ ಪ್ರಶಸ್ತಿ ಪುರಸ್ಕೃತರಾದ ಹಿನ್ನೆಲೆಯಲ್ಲಿ ಬಬಲೇಶ್ವರ ತಾಲೂಕಿನ ಸಂಗಾಪುರ.ಎಚ್ ಗ್ರಾಮದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಾಕಿ ಕಾಮಗಾರಿಗೆ ಚಾಲನೆ ನೀಡುವುದರಿಂದ ಈ ಭಾಗದಲ್ಲಿ ಸುಮಾರು 25 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಜಲಸಂಪನ್ಮೂಲ ಸಚಿವನಾಗಿದ್ದಾಗ ಕೈಗೊಂಡ ನೀರಾವರಿ ಯೋಜನೆಗಳಿಂದಾಗಿ ಈ ಹಿಂದೆ ಕೃಷಿಗಾಗಿ ಹಿರಿಯರು ಪಡುತ್ತಿದ್ದ ಕಷ್ಟ ಈಗ ಇಲ್ಲ. ಬೇಸಿಗೆಯಲ್ಲಿ ತೋಟಗಾರಿಕೆ ಬೆಳೆ ರಕ್ಷಣೆಗಾಗಿ ರೈತರು ವ್ಯಯಿಸುತ್ತಿದ್ದ ಹಣ ಈಗ ಉಳಿತಾಯವಾಗಿದೆ. ಸಿಎಂ ಸಿದ್ಧರಾಮಯ್ಯ ಅವರ ಸಹಕಾರದಿಂದ ಈ ಕೆಲಸ ಸಾಧ್ಯವಾಗಿದೆ. ಜಲಸಂಪನ್ಮೂಲ ಸಚಿವನಾಗಿದ್ದಾಗ ನೀರಾವರಿಗಾಗಿ ₹ 58 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಅಂದು ಮಾಡಿದ ಕೆಲಸ ಇಂದು ಫಲ ನೀಡುತ್ತಿದೆ. ಅಂತರ್ಜಲ ಹೆಚ್ಚಿ ಕೊಳವೆ ಭಾವಿಗಳು ಪುನಶ್ಚೇತನಗೊಂಡಿವೆ. ಈಗ ನಾನು ಕೈಗಾರಿಕೆ ಸಚಿವನಾಗಿ ಮಾಡಿರುವ ಕೆಲಸಗಳನ್ನು ಗುರುತಿಸಿ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಗೌರವ ಬಬಲೇಶ್ವರ ಮತಕ್ಷೇತ್ರದ ಎಲ್ಲರಿಗೂ ಸಲ್ಲುತ್ತದೆ ಎಂದು ಅವರು ಹೇಳಿದರು.

ಇಲ್ಲಿನ ಕಮರಿಮಠದ ಬಾಕಿ ಕೆಲಸಕ್ಕೆ ಕ್ರಮ ಕೈಗೊಳ್ಳಲಾಗುವುದು. ಸಂಗಾಪುರ.ಎಸ್.ಎಚ್. ಗ್ರಾಮಕ್ಕೆ ₹ 2.20 ಕೋಟಿ ವೆಚ್ಚದಲ್ಲಿ ಜಿನುಗು ಕೆರೆ ಮಂಜೂರು ಮಾಡಲಾಗಿದೆ. ಶೀಘ್ರದಲ್ಲಿ ಟೆಂಡರ್ ಕರೆದು ಕೆಲಸ ಪ್ರಾರಂಭಿಸಲಾಗುವುದು. ನೀರಾವರಿ ಕೆಲಸದಿಂದ ರೈತರು ಪ್ರಗತಿ ಹೊಂದಿ ಹಣ ಕೂಡಿಸಿ ಗ್ರಾಮದಲ್ಲಿ ನನ್ನ ಮೂರ್ತಿ ಮಾಡಿದ್ದು ತಮ್ಮೆಲ್ಲರ ಅಭಿಮಾನಕ್ಕೆ ಸಾಕ್ಷಿ. ತಮಗೆ ನಾನು ಚಿರ ಋಣಿ. ತಮ್ಮ ಪ್ರೋತ್ಸಾಹ ಎಲ್ಲ ಸಾಹಸಕ್ಕೆ ಸ್ಪೂರ್ತಿ ನೀಡುತ್ತಿದೆ ಎಂದು ಸಚಿವರು ಹೇಳಿದರು.ರಮೇಶ ಬಡ್ರಿ ಮಾತನಾಡಿ, ಸಚಿವ ಎಂ.ಬಿ.ಪಾಟೀಲ ಅವರ ದೂರದೃಷ್ಠಿಯ ಫಲವಾಗಿ ಗ್ರಾಮಕ್ಕೆ ನೀರು ಬಂದಿದೆ. ಅವರಿಗೆ ಲಭಿಸುವ ಪ್ರತಿಯೊಂದು ಗೌರವಕ್ಕೆ ಸಂಗಾಪುರಎಸ್.ಎಚ್ ಗ್ರಾಮಸ್ಥರು ನಾವೇ ಪ್ರಶಸ್ತಿ ಪಡೆದಷ್ಟು ಸಂತೋಷ ಪಡುತ್ತೇವೆ. ಸದಾ ನಿಮ್ಮ ಜೊತೆಗಿರುತ್ತೇವೆ ಎಂದು ಹೇಳಿದರು.

ಗ್ರಾಮದಲ್ಲಿ ರೈತರು 2023ರಲ್ಲಿ ಪ್ರತಿಷ್ಠಾಪಿಸಿರುವ ಎಂ.ಬಿ.ಪಾಟೀಲ ಅವರ ಕಂಚಿನ ಪುತ್ಥಳಿ ಸ್ಥಳಕ್ಕೆ ಇದೇ ಮೊದಲ ಬಾರಿಗೆ ಅವರು ಭೇಟಿ ನೀಡಿದರು. ಗ್ರಾಮಸ್ಥರ ಸಾಧನೆಯ ಹಿಂದಿನ ಶ್ರಮ, ಬೆವರು ಮತ್ತು ಒಗ್ಗಟ್ಟಿನ ಶಕ್ತಿಯಿಂದ ನನ್ನ ಹೃದಯ ತುಂಬಿ ಬಂದಿದೆ ಎಂದು ಗ್ರಾಮಸ್ಥರಿಗೆ ಧನ್ಯವಾದ ಅರ್ಪಿಸಿದರು. ಅಲ್ಲದೇ, ರೈತರು ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ. ಅನ್ನದಾತರ ಬದುಕು ಬಂಗಾರವಾಗಲಿ ಎಂದು ಶುಭ ಹಾರೈಸಿದರು.ಸಿದ್ಧಲಿಂಗೇಶ್ವರ ಕಮರಿಮಠ ಅಭಿನವ ಸಿದ್ದಲಿಂಗ ದೇವರು, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಆನಂದಕುಮಾರ ದೇಸಾಯಿ, ಮುಖಂಡರಾದ ಡಾ.ಕೆ.ಎಚ್.ಮುಂಬಾರೆಡ್ಡಿ, ವಿ.ಎಸ್.ಪಾಟೀಲ, ಈರಗೊಂಡ ಬಿರಾದಾರ, ಧರ್ಮಣ್ಣ ಬಿಳೂರ, ಮಲ್ಲು ಪರಸಣ್ಣವರ, ಅಮರೇಶ ಸಾಲಿಮಠ, ಗೌಡಪ್ಪ ಗಲಗಲಿ ಸೇರಿದಂತೆ ಇನ್ನು ಹಲವರು ಉಪಸ್ಥಿತರಿದ್ದರು.