ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಶಿಸ್ತುಬದ್ಧ ಹೋರಾಟ ಅಗತ್ಯ: ಹುಚ್ಚವ್ವನಹಳ್ಳಿ ಮಂಜುನಾಥ

| Published : Feb 02 2025, 01:00 AM IST

ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಶಿಸ್ತುಬದ್ಧ ಹೋರಾಟ ಅಗತ್ಯ: ಹುಚ್ಚವ್ವನಹಳ್ಳಿ ಮಂಜುನಾಥ
Share this Article
  • FB
  • TW
  • Linkdin
  • Email

ಸಾರಾಂಶ

ಸಮಸ್ಯೆಗಳ ಪರಿಹಾರಕ್ಕಾಗಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹೋರಾಟವನ್ನು ರೂಪಿಸಬೇಕಿದೆ.

ಸಂಡೂರು: ಬಗರ್ ಹುಕುಂ ಯೋಜನೆ ಅಡಿ ಹಾಗೂ ಅರಣ್ಯ ಹಕ್ಕು ಕಾಯ್ದೆ ಅರ್ಜಿ ಸಲ್ಲಿಸಿದ ರೈತರಿಗೆ ನ್ಯಾಯ ದೊರಕಿಸಿ ಕೊಡುವುದು ಸೇರಿದಂತೆ ರೈತರು ಎದುರಿಸುತ್ತಿರುವ ಹಲವು ರೀತಿಯ ಸಮಸ್ಯೆಗಳ ಪರಿಹಾರಕ್ಕಾಗಿ ರೈತ ಸಂಘದಿಂದ ಶಿಸ್ತುಬದ್ಧ ಹೋರಾಟ ನಡೆಸುವುದು ಅಗತ್ಯವಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಹೇಳಿದರು.

ತಾಲೂಕಿನ ಬೊಮ್ಮಾಘಟ್ಟದ ಹುಲಿಕುಂಟೇಶ್ವರ ದೇವಸ್ಥಾನದ ಆವರಣದಲ್ಲಿ ರೈತ ಸಂಘ (ಹುಚ್ಚವ್ವನಹಳ್ಳಿ ಮಂಜುನಾಥ ಬಣ) ಜಿಲ್ಲೆ, ತಾಲೂಕು ಸಮಿತಿಯಿಂದ ಹಮ್ಮಿಕೊಂಡಿರುವ ರಾಜ್ಯಮಟ್ಟದ ರೈತರ ತರಬೇತಿ ಶಿಬಿರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ರೈತರಲ್ಲಿ ಶಿಸ್ತು, ಸಂಘಟನೆ, ಒಗ್ಗಟ್ಟು ಅಗತ್ಯವಾಗಿದೆ. ಸಂಘಟನೆಯನ್ನು ಬಲಪಡಿಸಬೇಕಿದೆ. ತಾಲೂಕಿನಲ್ಲಿನ ರೈತರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹೋರಾಟವನ್ನು ರೂಪಿಸಬೇಕಿದೆ ಎಂದರು.

ವಕೀಲರಾದ ಎಚ್.ಎಂ. ಪಂಡಿತಾರಾಧ್ಯ ಮಾತನಾಡಿ, ಸಂಡೂರು ಭೂ ಹೋರಾಟಕ್ಕೆ ದೊಡ್ಡ ಇತಿಹಾಸವಿದೆ. 1971ರಲ್ಲಿ ನಡೆದ ಭೂ ಹೋರಾಟದಲ್ಲಿ ಜಾರ್ಜ್ ಫರ್ನಾಂಡಿಸ್, ಯಜಮಾನ್ ಶಾಂತರುದ್ರಪ್ಪ, ಎಲಿಗಾರ್ ತಿಮ್ಮಪ್ಪ ಸೇರಿದಂತೆ ರಾಜ್ಯದ ಹಲವು ರೈತ ನಾಯಕರು ಭಾಗವಹಿಸಿದ್ದರು. ರೈತರ ಹೋರಾಟದ ಫಲವಾಗಿ ದೇವರಾಜ ಅರಸು ಇನಾಂಲ್ಯಾಂಡ್ ರದ್ದತಿ ಕಾಯ್ದೆಯನ್ನು ಜಾರಿಗೆ ತಂದರು. ಇದರಿಂದಾಗಿ ಸುಮಾರು 23 ಸಾವಿರ ಎಕರೆ ಜಮೀನನ್ನು 9 ಸಾವಿರ ರೈತರಿಗೆ ಹಂಚಲಾಯಿತು. ಇದು ಒಂದು ಐತಿಹಾಸಿಕ ಘಟನೆಯಾಗಿದೆ. ಇದು ರೈತರ ಹೋರಾಟಕ್ಕೆ ಸ್ಪೂರ್ತಿಯಾಗಿದೆ ಎಂದು ಸ್ಮರಿಸಿದರು.

ಸಂಘದ ಸಹ ಕಾರ್ಯದರ್ಶಿ ವಿ.ಎಸ್. ಶಂಕರ್, ಹನುಮಯ್ಯ, ಬಂಡ್ರಿ ದುರುಗಪ್ಪ ರೈತರ ಸಮಸ್ಯೆಗಳು, ಸಂಘಟನೆ ಬಲಪಡಿಸುವ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಮನಿ ಮಹೇಶ, ಜಿಲ್ಲಾಧ್ಯಕ್ಷ ಕೆ.ದೇವೇಂದ್ರ, ರಾಜ್ಯ ಉಪಾಧ್ಯಕ್ಷ ಕಲ್ಲಾಳ್ ಪರಶುರಾಮಪ್ಪ, ಸಂಘದ ಜಿಲ್ಲಾಧ್ಯಕ್ಷ ಬಣಕಾರ ಕೆ. ಬಸವರಾಜ, ತಾಲೂಕು ಅಧ್ಯಕ್ಷ ಕೆ. ಶಾಂತಕುಮಾರ, ಪರಿಸರ ಮರುಸ್ಥಾಪನೆ ಸಮಿತಿ ಅಧ್ಯಕ್ಷ ಹೊನ್ನೂರಸ್ವಾಮಿ, ಮಾನವ ಹಕ್ಕುಗಳ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಓಬಳೇಶ, ರೈತ ಸಂಘದ ತಾಲೂಕು ಘಟಕದ ಗೌರವಾಧ್ಯಕ್ಷ ಜಿ.ದೊಡ್ಡಮಲ್ಲಯ್ಯ, ಜಿಲ್ಲಾ ಉಪಾಧ್ಯಕ್ಷ ಆರ್. ಬಸವರಾಜ, ಪ್ರಧಾನ ಕಾರ್ಯದರ್ಶಿ ಎನ್.ಓಂಕಾರಪ್ಪ, ಕಾರ್ಯಾಧ್ಯಕ್ಷ ಮಹಮ್ಮದ್ ರಫಿ, ಕೂಡ್ಲಿಗಿ ಘಟಕದ ಪ್ರಧಾನ ಕಾರ್ಯದರ್ಶಿ ಜಿ. ಹುಲಿಕುಂಟೆಪ್ಪ, ಗಂಡಿ ಮಾರೆಪ್ಪ, ಮುಖಂಡರಾದ ಅಡಿವೆಪ್ಪ ಉಪಸ್ಥಿತರಿದ್ದರು.