ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ಹೊಸ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗುವರೇ ಅಥವಾ ಇಲ್ಲವೇ ಎಂಬ ಕುತೂಹಲ ಕಾಂಗ್ರೆಸ್ ವಲಯದಲ್ಲಿದೆ.ಏಕೆಂದರೆ, ಡಿಸಿಎಂ ಹುದ್ದೆಯ ಪ್ರಸ್ತಾಪವನ್ನು ಖುದ್ದು ಹೈಕಮಾಂಡ್ ಇಟ್ಟಿದ್ದರೂ ಇದಕ್ಕೆ ಸಿದ್ದರಾಮಯ್ಯ ಅವರು ಯತೀಂದ್ರಗೆ ಡಿಸಿಎಂ ಪಟ್ಟ ಬೇಡ ಎಂದಿದ್ದಾರೆ ಎನ್ನಲಾಗಿದೆ. ಆದರೆ, ಕುರುಬ ಸಮುದಾಯದ ಅತ್ಯುನ್ನತ ನಾಯಕ ಸಿದ್ದರಾಮಯ್ಯ ಅವರು ಸಿಎಂ ಪಟ್ಟದಿಂದ ಕೆಳಗಿಳಿದ ನಂತರ ಅವರ ಪುತ್ರನಿಗೆ ಡಿಸಿಎಂ ಹುದ್ದೆ ನೀಡಬೇಕು. ತನ್ಮೂಲಕ ಕುರುಬ ಸಮುದಾಯದಲ್ಲಿ ಮೂಡಬಹುದಾದ ಬೇಸರವನ್ನು ನೀಗಿಸಬೇಕು ಎಂಬ ಇರಾದೆ ಹೈಕಮಾಂಡ್‌ನದ್ದು ಎನ್ನಲಾಗಿದೆ.
ಆದರೆ, ಸಿದ್ದರಾಮಯ್ಯ ಅವರು ಡಿಸಿಎಂ ಹುದ್ದೆ ಬೇಡ. ಬದಲಾಗಿ, ಯತೀಂದ್ರ ಪ್ರಮುಖ ಖಾತೆಯೊಂದಿಗೆ ಹೊಸ ಸಂಪುಟ ಸೇರ್ಪಡೆಯಾಗಿ ಮೈಸೂರು ಜಿಲ್ಲಾ ಉಸ್ತುವಾರಿ ನಿರ್ವಹಿಸಲಿ ಸಾಕು ಎಂಬ ಮನಸ್ಥಿತಿ ಹೊಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ದೆಹಲಿಯಲ್ಲಿರುವ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಲಿದ್ದು, ಆನಂತರವೇ ಯತೀಂದ್ರ ಡಿಸಿಎಂ ಆಗುವರೇ ಅಥವಾ ಸಂಪುಟದಲ್ಲಿ ಪ್ರಮುಖ ಖಾತೆಯೊಂದಿಗೆ ಸಚಿವರಾಗುವುದೇ ಎಂಬುದು ನಿರ್ಧಾರವಾಗಲಿದೆ ಎನ್ನುತ್ತವೆ ಮೂಲಗಳು.ಎಷ್ಟು ಡಿಸಿಎಂ ಹುದ್ದೆ?
ಒಂದು ವೇಳೆ ಯತೀಂದ್ರ ಅವರು ಸಂಪುಟ ಸೇರ್ಪಡೆಯಾಗದಿದ್ದರೆ ಆಗ ಹೊಸ ಸಂಪುಟದಲ್ಲಿ ನಿರ್ಮಾಣವಾಗುವ ಡಿಸಿಎಂ ಹುದ್ದೆಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಯತೀಂದ್ರ ಡಿಸಿಎಂ ಆಗುವುದಾದರೇ ನಾಲ್ಕು ಡಿಸಿಎಂ ಆಗಬಹುದು. ಇಲ್ಲದಿದ್ದರೆ ಎರಡು ಅಥವಾ ಮೂರಕ್ಕೆ ಸೀಮಿತವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.