ಮುಖ್ಯಮಂತ್ರಿ ಸ್ಥಾನದ ಹೊಸ್ತಿಲಲ್ಲಿ ನಿಂತಿದ್ದರೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗುರುವಾರವೂ ಸಮಚಿತ್ತದಿಂದ ಕಾಣಿಸಿಕೊಂಡರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿ ಸ್ಥಾನದ ಹೊಸ್ತಿಲಲ್ಲಿ ನಿಂತಿದ್ದರೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗುರುವಾರವೂ ಸಮಚಿತ್ತದಿಂದ ಕಾಣಿಸಿಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ ಏರ್ಪಡಿಸಿದ್ದ ಉಪಹಾರ ಸಭೆಯಿಂದ ಸಿದ್ದರಾಮಯ್ಯ ಅವರು ರಾಜೀನಾಮೆ ಸಲ್ಲಿಸಿ, ಸುದ್ದಿಗೋಷ್ಠಿಯಲ್ಲಿ ನಡೆಸುವವರೆಗೆ ಅವರ ಜತೆಗೆ ಕಾಣಿಸಿಕೊಂಡ ಡಿ.ಕೆ. ಶಿವಕುಮಾರ್‌, ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ ನೀಡದೆ ಮೌನವಹಿಸಿದ್ದರು.

ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್‌ ನಿರ್ಧಾರದ ನಂತರ ಮಾಧ್ಯಮಗಳ ಸಮ್ಮುಖ ಮೌನವ್ರತ ಆರಂಭಿಸಿರುವ ಡಿ.ಕೆ.ಶಿವಕುಮಾರ್‌ ಧೋರಣೆ ಗುರುವಾರವೂ ಮುಂದುವರಿದಿತ್ತು. ಖುದ್ದು ಸಿದ್ದರಾಮಯ್ಯ ಅವರೇ ಸಚಿವರೊಂದಿಗಿನ ಉಪಹಾರ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ ಆಯ್ಕೆಯಾಗುತ್ತಾರೆ ಎಂದು ತಿಳಿಸಿದಾಗಲೂ ಯಾವುದೇ ಸಂಭ್ರಮದ ಭಾವನೆ ವ್ಯಕ್ತಪಡಿಸಲಿಲ್ಲ.

ಜತೆಗೆ ಸದಾಶಿವನಗರದ ತಮ್ಮ ನಿವಾಸದ ಬಳಿ ಜಮಾಯಿಸಿದ್ದ ಕಾರ್ಯಕರ್ತರು, ಅಭಿಮಾನಿಗಳನ್ನುದ್ದೇಶಿಯೂ ಮಾತನಾಡಲಿಲ್ಲ. ಅಷ್ಟೇ ಅಲ್ಲದೆ ತಮ್ಮ ಆಪ್ತ ಶಾಸಕರು, ನಾಯಕರಿಗೂ ಮಾಧ್ಯಮಗಳೆದುರು ಯಾವುದೇ ಹೇಳಿಕೆ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಹೈಕಮಾಂಡ್‌ ಘೋಷಿಸುವವರೆಗೆ ಮಾತಿಲ್ಲ?:

ಹೈಕಮಾಂಡ್‌ ಸೂಚನೆಯಂತೆ, ಈ ಹಿಂದೆ ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸಿದ್ದರಾಮಯ್ಯ ಸ್ಥಾನಕ್ಕೆ ಬಂದು ಕೂರುವುದು ಬಹುತೇಕ ಖಚಿತವಾಗಿದೆ. ಅದು ಕಾಂಗ್ರೆಸ್ ಶಾಸಕಾಂಗ ಪಕ್ಷ ಹಾಗೂ ಹೈಕಮಾಂಡ್‌ ನಾಯಕರು ಘೋಷಿಸಬೇಕಿದೆ. ಹೀಗೆ ಅಧಿಕೃತವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಾಗಿ, ಅದರಲ್ಲಿ ಅನುಮೋದನೆಗೊಂಡು, ಹೈಕಮಾಂಡ್‌ ನಾಯಕರು ತಮ್ಮ ಹೆಸರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸುವವರೆಗೆ ತಾವು ಮಾತನಾಡದಿರಲು ಡಿ.ಕೆ. ಶಿವಕುಮಾರ್‌ ನಿರ್ಧರಿಸಿದಂತಿದೆ.

ಇನ್ನು, ಡಿ.ಕೆ.ಶಿವಕುಮಾರ್‌ ಮಾತ್ರವಲ್ಲದೆ ಅವರ ಸಹೋದರ ಬಮುಲ್‌ ಅಧ್ಯಕ್ಷ ಕೂಡ ಮಾಧ್ಯಮಗಳೆದುರು ಮಾತನಾಡಲು ನಿರಾಕರಿಸಿದರು.

ಸಿದ್ದರಾಮಯ್ಯ ಜತೆಗೆ ಓಡಾಟ:

ಗುರುವಾರ ಬೆಳಗ್ಗೆ 9.20ರ ಗಂಟೆ ಸುಮಾರಿಗೆ ಮುಖ್ಯಮಂತ್ರಿ ಅವರ ನಿವಾಸ ಕಾವೇರಿಗೆ ಆಗಮಿಸಿದ ಡಿ.ಕೆ. ಶಿವಕುಮಾರ್‌, ಸಚಿವರ ಉಪಹಾರ ಕೂಟದಲ್ಲಿ ಭಾಗವಹಿಸಿದರು. ಈ ವೇಳೆ ಮುಖ್ಯಮಂತ್ರಿ ಅವರನ್ನು ಎದುರುಗೊಂಡು ಕಾಲಿಗೆರಗಿ ಆಶೀರ್ವಾದ ಪಡೆದರು. ನಂತರ ಅವರನ್ನು ಆಲಂಗಿಸಿದರು. ಈ ವೇಳೆ ಸಿದ್ದರಾಮಯ್ಯ ‘ಆಲ್‌ ಡಿ ಬೆಸ್ಟ್‌...’ ಎಂದು ಶುಭ ಕೋರಿದರು. ಈ ವೇಳೆ ಭಾವುಕರಾದ ಡಿ.ಕೆ. ಶಿವಕುಮಾರ್‌, ನಿಮ್ಮ ಮಾರ್ಗದರ್ಶನವಿರಲಿ ಎಂದು ಹೇಳಿದರು.

ಅದಾದ ನಂತರದಿಂದ ಸಂಜೆವರೆಗೆ ಡಿ.ಕೆ. ಶಿವಕುಮಾರ್‌ ಅವರು ಸಿದ್ದರಾಮಯ್ಯ ಅವರೊಂದಿಗೆ ಓಡಾಡಿದರು. ಮಧ್ಯಾಹ್ನ 2.45ಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಲು ಲೋಕಭವನಕ್ಕೆ ಹೋದಾಗಲೂ ಜತೆಯಲ್ಲಿದ್ದ ಡಿ.ಕೆ. ಶಿವಕುಮಾರ್‌, ನಂತರ ನಡೆದ ಸುದ್ದಿಗೋಷ್ಠಿಯಲ್ಲಿಯೂ ಸಿದ್ದರಾಮಯ್ಯ ಪಕ್ಕ ಕುಳಿತು ಸಿದ್ದರಾಮಯ್ಯ ಆಡಿದ ಪ್ರತಿ ಮಾತನ್ನು ಸೂಕ್ಷ್ಮವಾಗಿ ಆಲಿಸಿದರು. ಈ ವೇಳೆಯೂ ಡಿ.ಕೆ. ಶಿವಕುಮಾರ್‌ ಮುಖದಲ್ಲಿ ಸಂತಸದ ಬದಲು ಭಾವುಕತೆಯಿತ್ತು.ಕಂಕೇರಿಗೆ ಅಭಿಮಾನಿಗಳ ದಂಡು:

ಸಿದ್ದರಾಮಯ್ಯ ರಾಜೀನಾಮೆ, ಸಚಿವರ ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌ ಹೆಸರು ಪ್ರಸ್ತಾಪದ ಹಿನ್ನೆಲೆಯಲ್ಲಿ ಗುರುವಾರವಿಡೀ ಸದಾಶಿವನಗರದ ಡಿಕೆಶಿ ಅವರ ‘ಕಂಕೇರಿ’ ನಿವಾಸ ಚಟುವಟಿಕೆಯಿಂದ ಕೂಡಿತ್ತು. ಬೆಳಗ್ಗೆ ಡಿ.ಕೆ.ಶಿವಕುಮಾರ್‌ ಕಾವೇರಿ ನಿವಾಸಕ್ಕೆ ತೆರಳುವುದಕ್ಕೆ ಮುಂಚಿನಿಂದಲೇ ಅಭಿಮಾನಿಗಳು ಅವರ ನಿವಾಸದ ಬಳಿ ಜಮಾಯಿಸಿದ್ದರು. ಹೀಗಾಗಿ ನಿವಾಸದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಿ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಿ, ಬ್ಯಾರಿಕೇಡ್‌ ಅಳವಡಿಸಲಾಗಿತ್ತು. ಆದರೂ, ನೂರಾರು ಅಭಿಮಾನಿಗಳು, ಕಾರ್ಯಕರ್ತರು ಜಮಾಯಿಸಿದ್ದರು. ಅವರ ಬಳಿಯಲ್ಲೂ ಮಾತನಾಡದ ಡಿಕೆಶಿ, ಕೈ ಮುಗಿದು, ಕೈ ಬೀಸಿ ಸಂತಸ ವ್ಯಕ್ತಪಡಿಸಿದರು. ಸಚಿವರು, ಶಾಸಕರಿಂದ ಡಿಕೆಶಿಗೆ ಶುಭ ಹಾರೈಕೆ:

ಡಿ.ಕೆ.ಶಿವಕುಮಾರ್‌ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅರಿತ ಸಚಿವರು, ಶಾಸಕರ ದಂಡೇ ಅವರ ನಿವಾಸಕ್ಕಾಗಮಿಸಿತ್ತು. ಸಚಿವರಾದ ರಾಮಲಿಂಗಾರೆಡ್ಡಿ, ಮಂಕಾಳ ವೈದ್ಯ, ಶಾಸಕರಾದ ಆರ್‌.ವಿ.ದೇಶಪಾಂಡೆ, ನಾಗೇಂದ್ರ, ಭರತ್‌ ರೆಡ್ಡಿ, ಕಂಪ್ಲಿ ಗಣೇಶ್‌, ಭೀಮಣ್ಣ ನಾಯ್ಕ್‌, ಡಾ.ಎಚ್‌.ಡಿ.ರಂಗನಾಥ್‌, ವಿಧಾನಪರಿಷತ್‌ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್‌, ಎಂಎಲ್ಸಿ ರವಿ ಸೇರಿ ಹಲವರು ಕಂಕೇರಿ ನಿವಾಸಕ್ಕೆ ಆಗಮಿಸಿ ಡಿ.ಕೆ.ಶಿವಕುಮಾರ್‌ ಅವರಿಗೆ ಶುಭ ಕೋರಿದರು.ಸಿದ್ದರಾಮಯ್ಯ ಬೆನ್ನಲ್ಲೇ ರಾತ್ರಿ ದೆಹಲಿ ಪ್ರಯಾಣ:

ಸಿದ್ದರಾಮಯ್ಯ ಅವರು ದೆಹಲಿಗೆ ಪ್ರಯಾಣ ಬೆಳಸಿದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್‌ ಅವರು ದೆಹಲಿಗೆ ತೆರಳಿದರು. ಸಿದ್ದರಾಮಯ್ಯ ಸಂಜೆ 4.30ಕ್ಕೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದರೆ, ರಾತ್ರಿ 7.40 ಡಿ.ಕೆ.ಶಿವಕುಮಾರ್‌ ದೆಹಲಿಗೆ ಪ್ರಯಾಣ ಬೆಳೆಸಿದರು. ಅವರಿಗೆ ಶಾಸಕ ಎನ್‌.ಎ.ಹ್ಯಾರೀಸ್‌ ಸಾಥ್‌ ನೀಡಿದರು.

ಪ್ರಮಾಣ ವಚನಕ್ಕೆ ಡಿಕೆಶಿ ಸಿದ್ಧತೆ?:

ಮುಖ್ಯಮಂತ್ರಿಯಾಗಿ ತಮ್ಮ ಹೆಸರು ಘೋಷಣೆಯಾಗುವುದು ಬಹುತೇಕ ಖಚಿತ ಎಂಬುದು ತಿಳಿದಿರುವ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸೂಕ್ತ ದಿನಾಂಕ ಮತ್ತು ಸಮಯ ನಿಗದಿಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಅದಕ್ಕಾಗಿ ಖ್ಯಾತ ಜ್ಯೋತಿಷಿ ದ್ವಾರಕಾನಾಥ್‌ ಅವರಿಗೆ ಪ್ರಮಾಣ ವಚನಕ್ಕೆ ಸೂಕ್ತವಾಗುವಂತಹ ದಿನ ಮತ್ತು ಸಮಯವನ್ನು ಸೂಚಿಸುವಂತೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟೈಮ್ ಲೈನ್‌:

ನಿನ್ನೆ ಡಿ.ಕೆ.ಶಿವಕುಮಾರ್‌ ದಿನಚರಿ

ಬೆಳಗ್ಗೆ 9.20: ಮನೆಯಿಂದ ಕಾವೇರಿ ನಿವಾಸಕ್ಕೆ ಪ್ರಯಾಣ

ಬೆಳಗ್ಗೆ 9.30: ಕಾವೇರಿ ನಿವಾಸಕ್ಕೆ ಆಗಮಿಸಿ ಉಪಹಾರ ಸಭೆಯಲ್ಲಿ ಭಾಗಿ

ಬೆಳಗ್ಗೆ 11.40: ಕಾವೇರಿ ನಿವಾಸದಿಂದ ಸದಾಶಿವನಗರದತ್ತ ಪ್ರಯಾಣ

ಮಧ್ಯಾಹ್ನ 2.30: ಲೋಕಭವನದತ್ತ ಪ್ರಯಾಣ

ಮಧ್ಯಾಹ್ನ 3.00: ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗಿ

ಸಂಜೆ 4.00: ಸದಾಶಿವನಗರದ ನಿವಾಸತ್ತ ಪ್ರಯಾಣ

ಸಂಜೆ 6.30: ದೆಹಲಿ ಪ್ರಯಾಣಕ್ಕಾಗಿ ವಿಮಾನ ನಿಲ್ದಾಣದತ್ತ ಸಂಚಾರ

ರಾತ್ರಿ 7.40: ದೆಹಲಿಗೆ ವಿಮಾನದ ಮೂಲಕ ಪ್ರಯಾಣ