ಪತ್ರಕರ್ತರ ಸಂಘದಿಂದ ಸದಸ್ಯರಿಗೆ ಅಪಘಾತ ವಿಮೆ ಬಾಂಡ್‌ ವಿತರಣೆ

| Published : Dec 31 2024, 01:01 AM IST

ಪತ್ರಕರ್ತರ ಸಂಘದಿಂದ ಸದಸ್ಯರಿಗೆ ಅಪಘಾತ ವಿಮೆ ಬಾಂಡ್‌ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ತನ್ನ ಸದಸ್ಯರ ಬಹು ವರ್ಷದ ಬೇಡಿಕೆಯಂತೆ ಅಪಘಾತ ವಿಮೆ ಮಾಡಿಸಿದ್ದು, ನಗರದ ಗಾಂಧಿಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ತನ್ನ ಸದಸ್ಯರಿಗೆ ವಿಮಾ ಬಾಂಡ್‌ಗಳನ್ನು ವಿತರಣೆ ಮಾಡಲಾಯಿತು. ಇದೇ ವೇಳೆ ಈ ವರ್ಷದ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಬಿ. ಮದನ್ ಗೌಡ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಎಚ್.ಬಿ. ಮದನ್ ಗೌಡರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ಉತ್ತಮವಾಗಿದೆ ಎಂದು ಬಣ್ಣಿಸಿದರು. ಪತ್ರಕರ್ತರ ಗ್ರಾಮಿಣ ಬಸ್‌ಪಾಸ್ ಇನ್ನೊಂದು ವಾರದಲ್ಲಿ ಸಿಗಲಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ತನ್ನ ಸದಸ್ಯರ ಬಹು ವರ್ಷದ ಬೇಡಿಕೆಯಂತೆ ಅಪಘಾತ ವಿಮೆ ಮಾಡಿಸಿದ್ದು, ನಗರದ ಗಾಂಧಿಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ತನ್ನ ಸದಸ್ಯರಿಗೆ ವಿಮಾ ಬಾಂಡ್‌ಗಳನ್ನು ವಿತರಣೆ ಮಾಡಲಾಯಿತು. ಇದೇ ವೇಳೆ ಈ ವರ್ಷದ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಬಿ. ಮದನ್ ಗೌಡ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಪತ್ರಕರ್ತರಿಗೆ ಬಾಂಡ್‌ ವಿತರಣೆ ಮಾಡಿದ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರದ ಜೊತೆ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು. ಪತ್ರಕರ್ತರ ಜೊತೆ ಖಂಡಿತವಾಗಿಯೂ ಬೆನ್ನೆಲುಬಾಗಿ ನಾವು ಇರುತ್ತೇವೆ. ನಿಮ್ಮ ಸಲಹೆ, ಸಹಕಾರ ನಮಗೆ ಇರಬೇಕು. ನಾವು ತಪ್ಪುದಾರಿಗೆ ಹೋದರೆ ತಿದ್ದುವ ಕೆಲಸ ಮಾಡುವುದು ತಂದೆ ತಾಯಿ ಬಿಟ್ಟರೇ ಪತ್ರಕರ್ತರು ಮಾತ್ರ ಎಂದು ಹೇಳುವುದಕ್ಕೆ ನನಗೆ ಹೆಮ್ಮೆ ಆಗುತ್ತದೆ ಎಂದರು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ವಿ. ಶಿವಾನಂದ್ ತಗಡೂರು ಮಾತನಾಡಿ, ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಎಚ್.ಬಿ. ಮದನ್ ಗೌಡರು ಇದುವರೆಗೂ ಒಳಿತಾಗುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವರ ಪಾತ್ರ ಮಹತ್ವವಾಗಿದೆ. ಸಾಂಸ್ಕೃತಿಕ ವಲಯಕ್ಕೆ ಹೋದರೇ ಅಲ್ಲೂ ಕೂಡ ತಮ್ಮ ಸಂಘಟನೆ ಇರುತ್ತದೆ. ಹಲ್ಮಿಡಿ ಶಾಸನ ಎಂದರೇ ಅನೇಕರಿಗೆ ಗೊತ್ತಿರಲಿಲ್ಲ. ಅದಕ್ಕೊಂದು ಮಹತ್ವ ಕೊಟ್ಟವರು ಮದನ್ ಗೌಡರು. ಅವರು ಕಸಾಪ ಅಧ್ಯಕ್ಷರಾದ ವೇಳೆ ಹಲ್ಮಿಡಿಗೆ ನಿರಂತರವಾಗಿ ಹೋಗಿ ಬಂದು ಈಗ ಗಮನಸೆಳೆದಿದ್ದಾರೆ ಎಂದರು. ಎಚ್.ಬಿ. ಮದನ್ ಗೌಡರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ಉತ್ತಮವಾಗಿದೆ ಎಂದು ಬಣ್ಣಿಸಿದರು. ಪತ್ರಕರ್ತರ ಗ್ರಾಮಿಣ ಬಸ್‌ಪಾಸ್ ಇನ್ನೊಂದು ವಾರದಲ್ಲಿ ಸಿಗಲಿದೆ. ಇದು ಮೂರು ದಶಕಗಳ ಹೋರಟಕ್ಕೆ ಫಲ ಸಿಕ್ಕಿದೆ ಎಂದು ಹೇಳಿದರು. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎಚ್. ಆರ್‌. ಸ್ವಾಮಿ ಮಾತನಾಡಿ, ಕನ್ನಡ ಎಂದರೇ ಕೇವಲ ಭಾಷೆಯಲ್ಲ. ಅದರಲ್ಲಿ ನೆಲ, ಜಲ ಇವೆಲ್ಲವೂ ಕೂಡ ಕನ್ನಡ. ಯಾರ್ಯಾರು ಭಾಷೆಯ ಉಳಿವಿಗಾಗಿ ದುಡಿದಿದ್ದಾರೆ ಅವರನ್ನೆಲ್ಲಾ ಗೌರವಿಸಬೇಕು ಸನ್ಮಾನಿಸಬೇಕು. ಕೊರಚ ಸಮುದಾಯದವರಲ್ಲಿ ಊಟ, ದೇವರು ಎನ್ನುವುದಕ್ಕೆ ಆ ಭಾಷೆಗಳಲ್ಲಿ ಪದಗಳೇ ಇಲ್ಲ. ಕನ್ನಡದಲ್ಲೆ ಹೇಳಬೇಕು. ಯಾವುದೇ ಬುಡಕಟ್ಟುಗಳಿಗೆ ದೇವರುಗಳ ಅಸ್ತಿತ್ವ ಇಲ್ಲ. ಅವರೆಲ್ಲಾ ಪ್ರಕೃತಿಯ ಆರಾಧಕರು. ಅವರುಗಳೆಲ್ಲಾ ಗಿಡಕ್ಕೆ ಪೂಜೆ ಮಾಡಿ ಗಿಡಕ್ಕೆ, ಉತ್ತಕ್ಕೆ ಪೂಜೆ ಮಾಡಿ ಮರಿ ಒಡೆಯುವವರು. ಇವರಿಗೆ ದೇವರುಗಳ ಕಲ್ಪನೆಯೇ ಇಲ್ಲ. ಇವತ್ತು ಎಲ್ಲಾ ದಲಿತರ ಮನೆಯಲ್ಲಿ ಸತ್ಯನಾರಾಯಣ ಬಂದಿದ್ದಾನೆ. ಜೊತೆಗೆ ಅಂಬೇಡ್ಕರ್ ಕೂಡ ಇರುವುದು ಬಹಳ ಆಶ್ಚರ್ಯ. ಹಳೆ ಸಂಸ್ಕೃತಿ ಮರೆತು ಈಗಿನ ಸಂಸ್ಕೃತಿಗೆ ಬಂದಿದ್ದಾರೆ. ಈ ರೀತಿ ಅನೇಕ ಬುಡಕಟ್ಟುಗಳೂ ನಮ್ಮಲ್ಲಿ ಇದೆ. ಅಧ್ಯಯನ ಮಾಡುವವರು ಅದೇ ಸಮುದಾಯದವರು ಆದರೂ ಕೂಡ ಸಮಸ್ಯೆಗಳಿವೆ. ನಮ್ಮ ಸಮುದಾಯವನ್ನು ವೈಭವೀಕರಿಸುವುದೇ ಹೆಚ್ಚು. ಪಿ.ಎಚ್.ಡಿ. ನಾನೂ ಮಾಡಿದ್ದೇನೆ, ಆದರೆ ಅದರಿಂದ ಯಾವ ಉಪಯೋಗವಿಲ್ಲ. ನಾನು ಇಡೀ ಕರ್ನಾಟಕ ಸುತ್ತಲಾಗಿದ್ದು, ಈ ಸಮುದಾಯಗಳು ನಿಮಗೆ ಎಲ್ಲೂ ಸಿಗುವುದಿಲ್ಲ. ಕೊರಚ ಬುಡಕಟ್ಟು ವರ್ಗದವರ ಹುಡುಕಿಕೊಂಡು ಹೋದರೇ ಈತನು ಪೊಲೀಸನೆಂದು ನಮ್ಮ ಮೇಲೆ ಆಕ್ರಮಣ ಮಾಡುತ್ತಾರೆ. ನನಗೆ ಬುಡಕಟ್ಟು ಭಾಷೆ ಬಂದಿದ್ದರಿಂದ ನಾನು ಬಚಾವ್ ಆಗಿರುವುದಾಗಿ ನಡೆದ ಘಟನೆ ಬಗ್ಗೆ ಇದೇ ವೇಳೆ ತೋಡಿಕೊಂಡರು.

ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ದೈಹಿಕ ಭದ್ರತೆ ಒದಗಿಸುವಲ್ಲಿ ವಿಮಾ ಯೋಜನೆ ಉತ್ತಮವಾಗಿದೆ. ಸಮಾಜದ ಅಂಕು ಡೊಂಕುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಪತ್ರಕರ್ತರ ಪಾತ್ರ ಅಪಾರವಾಗಿದೆ. ಆದರೆ ಆರ್ಥಿಕವಾಗಿ ಹಿಂದುಳಿದಿರುವ ಪತ್ರಕರ್ತರಿಗೆ ವಿಮಾ ಸೌಲಭ್ಯದಂತಹ ಯೋಜನೆಗಳು ಆತ್ಮಸ್ಥೈರ್ಯ ತುಂಬಲಿವೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯಾ ಕಾಲಘಟ್ಟದಲ್ಲಿ ಅದರದ್ದೇ ಆದ ಉತ್ತಮ ಕೆಲಸ ಮಾಡಿದೆ. ಇನ್ನು ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು ಎರಡನೇ ಬಾರಿ ಅಧ್ಯಕ್ಷರಾಗಿ ಪತ್ರಕರ್ತರಿಗೆ ಅನುಕೂಲಕರ ಕೆಲಸ ಮಾಡುತ್ತಿದ್ದು, ಪತ್ರಕರ್ತರ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಕೀರ್ತಿಯನ್ನು ರಾಜ್ಯದಲ್ಲಿ ಮುಟ್ಟುವಂತೆ ಮಾಡಿದ್ದಾರೆ. ಎಚ್.ಬಿ. ಮದನ್ ಗೌಡರು ಮತ್ತು ಟಿ.ವಿ. ಶಿವಾನಂದ ತಗಡೂರು ಇಬ್ಬರೂ ಪತ್ರಕರ್ತರ ಸಂಘದಲ್ಲಿ ಕಣ್ಣು ಇದ್ದಂತೆ ಎಂದು ಇದೇ ವೇಳೆ ಬಣ್ಣಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್, ಪತ್ರಕರ್ತರಿಗೆ ವಿಮಾ ಬಾಂಡ್ ಸೌಲಭ್ಯ ಕಲ್ಪಿಸಲು ಜಿಲ್ಲಾ ಪತ್ರಕರ್ತರ ಸಂಘ ಮುಂದಾಗಿ ಯಶಸ್ವಿಗೊಳಿಸಿದೆ. ಈ ಯೋಜನೆ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್‌ ಅವರದ್ದಾಗಿದ್ದು, ಇಂದು ಈ ಕನಸನ್ನು ಈಡೇರಿಸಲಾಗಿದೆ. ಇದಕ್ಕಾಗಿ ಹಲವರು ಆರ್ಥಿಕ ನೆರವು ನೀಡಿದ್ದಾರೆ ಎಂದು ಸ್ಮರಿಸಿದರು.

ರಾಜ್ಯಸಭಾ ಮಾಜಿ ಸದಸ್ಯ ಹನುಮಂತಯ್ಯ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ವಿಶೇಷ ಆಹ್ವಾನಿತರಾದ ರವಿನಾಕಲಗೂಡು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್.ಟಿ. ಮೋಹನ್, ಕೆ.ಎಂ. ಹರೀಶ್, ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್‌, ಇತರರು ಉಪಸ್ಥಿತರಿದ್ದರು.