ಶಹಾಪುರ ಸಪ್ರದ ಕಾಲೇಜು ಜಾಗ ಒತ್ತುವರಿ

| Published : Dec 31 2024, 01:01 AM IST

ಸಾರಾಂಶ

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಮೀನಿನ ಸರ್ವೇ ನಂಬರ್ 504 ಅನ್ನು ಸರ್ವೇ ಮಾಡಿ ಹದ್ದುಬಸ್ತು ಮಾಡಿಕೊಡುವಂತೆ ಹಲವು ಬಾರಿ ಪ್ರಾಂಶುಪಾಲರು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದರೂ ಯಾವೊಬ್ಬ ಅಧಿಕಾರಿಯೂ ಸ್ಪಂದಿಸಿಲ್ಲ. ಈಗ ಜಮೀನು ಉಳ್ಳವರ ಪಾಲಾಗುವ ಕಾಲ ದೂರವಿಲ್ಲ ಎನ್ನಲಾಗುತ್ತಿದೆ.

ಜಮೀನು ಹದ್ದುಬಸ್ತು ಮಾಡಲು ಪ್ರಾಂಶುಪಾಲರು ಪತ್ರ ಬರೆದರೂ ಹಿಂದೇಟು । ಅತಿಕ್ರಮಣಕ್ಕೆ ಅಧಿಕಾರಿಗಳ ಸಾಥ್: ಆರೋಪ ಮಲ್ಲಯ್ಯ ಪೋಲಂಪಲ್ಲಿ

ಕನ್ನಡಪ್ರಭ ವಾರ್ತೆ ಶಹಾಪುರ

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಮೀನಿನ ಸರ್ವೇ ನಂಬರ್ 504 ಅನ್ನು ಸರ್ವೇ ಮಾಡಿ ಹದ್ದುಬಸ್ತು ಮಾಡಿಕೊಡುವಂತೆ ಹಲವು ಬಾರಿ ಪ್ರಾಂಶುಪಾಲರು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದರೂ ಯಾವೊಬ್ಬ ಅಧಿಕಾರಿಯೂ ಸ್ಪಂದಿಸಿಲ್ಲ. ಈಗ ಜಮೀನು ಉಳ್ಳವರ ಪಾಲಾಗುವ ಕಾಲ ದೂರವಿಲ್ಲ ಎನ್ನಲಾಗುತ್ತಿದೆ. ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದ ಸರ್ವೇ ನಂಬರ್ 504 ರಲ್ಲಿ 13 ಎಕರೆ 22 ಗುಂಟೆ ಜಮೀನಿನಲ್ಲಿ ಬೀದರ್-ಬೆಂಗಳೂರು ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ರಸ್ತೆ ಎರಡು ಭಾಗದಲ್ಲಿ ಜಮೀನು ಹಂಚು ಹೋಗಿದೆ. ಅಂದಾಜು 1.5 ರಿಂದ 2 ಎಕರೆ ಜಮೀನು ಹೆದ್ದಾರಿಯ ಉತ್ತರ ದಿಕ್ಕಿನಲ್ಲಿದೆ. ಈ ಜಮೀನನ್ನು ಮೇಲ್ನೋಟಕ್ಕೆ ಅತಿಕ್ರಮಣ ಮಾಡಿರುವುದು ಕಂಡು ಬಂದಿದೆ.

ಜಮೀನನ್ನು ಆದಷ್ಟು ಬೇಗ ಹದ್ದುಬಸ್ತು ಮಾಡಿಕೊಡುವಂತೆ ಕಾಲೇಜಿನ ಪ್ರಾಚಾರ್ಯರು ಅ.13- 2022 ರಂದು ತಾಲೂಕು ದಂಡಾಧಿಕಾರಿಗಳಿಗೆ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪತ್ರ ಬರೆಯುತ್ತಾರೆ. ಇದಕ್ಕೆ ಅಧಿಕಾರಿಗಳಿಂದ ಯಾವುದೇ ರೀತಿಯ ಸ್ಪಂದನೆ ಸಿಗಲಿಲ್ಲ ಎನ್ನಲಾಗುತ್ತಿದೆ.ಹದ್ದುಬಸ್ತು ಮಾಡುವಂತೆ ಪತ್ರ:

ಕಾಲೇಜು ಪ್ರಾಂಶುಪಾಲರು ಮೇ 20- 2023 ರಂದು ಕಾಲೇಜು ಜಮೀನು ಹದ್ದುಬಸ್ತು ಮಾಡಿ ಕೊಡುವಂತೆ ಜಿಲ್ಲಾಧಿಕಾರಿಯವರಿಗೆ ನೇರವಾಗಿ ಪತ್ರ ಬರೆಯುತ್ತಾರೆ. ಕಾಲೇಜಿನ ಪ್ರಮುಖರ ಪತ್ರಕ್ಕೆ ಅಪರ ಜಿಲ್ಲಾಧಿಕಾರಿಗಳು ಜೂನ್ 3- 2023 ರಂದು ಉಪನಿರ್ದೇಶಕರು ಭೂ ದಾಖಲೆಗಳ ಇಲಾಖೆಗೆ ಹದ್ದುಬಸ್ತು ಮಾಡಿಕೊಡುವಂತೆ ಪತ್ರ ಬರೆಯುತ್ತಾರೆ. ಇದುವರೆಗೂ ಜಮೀನು ಸುತ್ತಳತೆಯಾಗದೆ ಭೂಮಿ ಅನ್ಯರ ಪಾಲಾಗುತ್ತಿದೆ. ಅರ್ಜಿ ಉಲ್ಲೇಖ:

ಕಾಲೇಜು ಜಮೀನು 13.22 ಎಕರೆಯ ಬೀದರ್-ಬೆಂಗಳೂರು ರಾಜ್ಯ ಹೆದ್ದಾರಿ ಹಾದು ಹೋಗಿದೆ ಇದು ನಗರದ ಹೊಸ ತಹಸೀಲ್ ಕಚೇರಿಯ ಪಕ್ಕದಲ್ಲಿ ಹಾಗೂ ಪ್ರತಿಷ್ಠಿತ ಬಡಾವಣೆಗಳ ಆಸುಪಾಸು ಇರುವುದರಿಂದ ಈ ಜಮೀನು ಕೋಟಿಗಳ ಲೆಕ್ಕದಲ್ಲಿ ಬೆಲೆಬಾಳುತ್ತದೆ. ಇದರಿಂದ ಪ್ರತಿಷ್ಠಿತರ ಕಣ್ಣು ಇದರ ಮೇಲಿದೆ. ಕಾಲೇಜಿನ ಪ್ರಾಚಾರ್ಯರು ಜಮೀನು ಒತ್ತುವರಿಯಾಗಿದೆ ಎಂದು ತಮ್ಮ ಅರ್ಜಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.ಜಮೀನು ಅತಿಕ್ರಮಣಕ್ಕೆ ಅಧಿಕಾರಿಗಳ ಸಾಥ್ ಆರೋಪ:

ಕಾಲೇಜು ಭೂಮಿಯನ್ನು ಅತಿಕ್ರಮಣ ಮಾಡುತ್ತಿದ್ದರೂ ಪ್ರವಾದಿಗಳಿಗೆ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ. ತಹಸೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸದೆ ಇರುವುದು ಅತಿಕ್ರಮಣಕ್ಕೆ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ ಎಂಬ ಗುಸು ಗುಸು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಆಡಳಿತ ಸೌಧ ಕಟ್ಟಡ ಜಾಗಕ್ಕೆ ತರಾತುರಿ ಅಳತೆ:

ಕಾಲೇಜಿನ ಜಮೀನು ಸರ್ವೇ ನಂಬರ್ 504 ರ 13.22 ಎಕರೆ ಜಮೀನಿನ ಜಾಗದಲ್ಲಿ ತಾಲೂಕು ಆಡಳಿತ ಕಚೇರಿ ಕಟ್ಟಡಕ್ಕೆ 4 ಎಕರೆ ಜಮೀನು, ಅಧಿಕಾರಿಗಳ ಯಾವುದೇ ಆದೇಶ ಇಲ್ಲದಿದ್ದರೂ ತರಾತುರಿಯಲ್ಲಿ ಒಂದೇ ದಿನದಲ್ಲಿ ಸರ್ವೆ ಕಾರ್ಯ ಮಾಡಿ ಮುಗಿಸುತ್ತಾರೆ. ಆದರೆ, ಕಾಲೇಜು ಪ್ರಾಂಶುಪಾಲರು ಕಳೆದ 3-4 ವರ್ಷಗಳಿಂದ ಕಾಲೇಜಿನ ಜಮೀನು ಹದ್ದುಬಸ್ತು ಮಾಡಿಕೊಡುವಂತೆ ಅಧಿಕಾರಿಗಳಿಗೆ ಪತ್ರ ಬರೆದರೂ ಯಾವೊಬ್ಬ ಅಧಿಕಾರಿಯೂ ಇದರ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ ಏಕೆ? ಪ್ರಭಾವಿ ವ್ಯಕ್ತಿಗಳಿಗೆ ಮಣೆ ಹಾಕಲು ಸದರಿ ಜಮೀನು ಹದ್ದುಬಸ್ತು ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ ಎನ್ನುತ್ತಾರೆ ಬಿಜೆಪಿ ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ್ ಯಾಳಗಿ.ಜಮೀನು ಸಂರಕ್ಷಣೆಗೆ ಒತ್ತಾಯ :

ಸರ್ಕಾರದ ಆಸ್ತಿ ಸಂರಕ್ಷಿಸಬೇಕಾದ ಅಧಿಕಾರಿಗಳೇ ಪ್ರಭಾಬಿಗಳ ಪ್ರಭಾವಕ್ಕೆ ಒಳಗಾಗಿ ಜಮೀನು ಹದ್ದುಬಸ್ತು ಮಾಡಲು ಹಿಂಜರಿಯುತ್ತಿದ್ದಾರೆ. ಸರ್ಕಾರ ತಮ್ಮ ಆಸ್ತಿಯನ್ನು ತಾವೇ ರಕ್ಷಿಸಿಕೊಳ್ಳದಿದ್ದರೆ ಅದರ ರಕ್ಷಣೆ ಯಾರು ಮಾಡಬೇಕು. ಕೋಟಿಗಳ ಲೆಕ್ಕದಲ್ಲಿ ಬೆಲೆಬಾಳುವ ಈ ಜಮೀನು ಉಳ್ಳವರ ಪಾಲಾಗುವ ಮೊದಲು ಹದ್ದುಬಸ್ತು ಮಾಡಿ ಸರ್ಕಾರದ ಆಸ್ತಿ ಸಂರಕ್ಷಿಸಬೇಕು ಎಂದು ಕರ್ನಾಟಕ ರಾಜ್ಯಕುಳುವ ಮಹಾಸಂಘದ ಜಿಲ್ಲಾಧ್ಯಕ್ಷ ಬಸವರಾಜ್ ಭಜಂತ್ರಿ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಬೀದರ್-ಬೆಂಗಳೂರು ರಾಜ್ಯ ಹೆದ್ದಾರಿಯ ಉತ್ತರ ದಿಕ್ಕಿಗೆ ನಮ್ಮ ಕಾಲೇಜಿನ 1.5 ರಿಂದ 2 ಎಕರೆ ಜಮೀನು ಇದೆ. ಅದನ್ನು ಹದ್ದುಬಸ್ತು ಮಾಡಿ ಕೊಡುವಂತೆ ಅಧಿಕಾರಿಗಳಿಗೆ ಸಾಕಷ್ಟು ಸಲ ಪತ್ರ ಬರೆಯಲಾಗಿದೆ. ಆದರೂ ಇನ್ನು ಜಮೀನು ಅಳತೆ ಕಾರ್ಯ ನಡೆದಿಲ್ಲ.

ಡಾ. ಸಂಗಣ್ಣ ರಾಂಪುರೆ, ಪ್ರಾಚಾರ್ಯರು, ಸಪ್ರದ ಕಾಲೇಜು ಶಹಾಪುರ