ಸಾರಾಂಶ
ಜುಲೈ ೧೨ರಂದು ಪಟ್ಟಣದ ಸಾರ್ವಜನಿಕ ಸಮುದಾಯ ಭವನದಲ್ಲಿ ಶಿವಮೊಗ್ಗದ ನೀನಾಸಂ ಕಲಾವಿದರಿಂದ ಹಾರ್ಟ್ ಲ್ಯಾಂಪ್ ನಾಟಕವನ್ನು ಅಭಿನಯಿಸಲಾಗುವುದು ಮತ್ತು ನಾಗರಿಕ ಬಂಧುಗಳು ಈ ನಾಟಕವನ್ನು ವೀಕ್ಷಿಸುವಂತೆ ಕರೆ ನೀಡಿದರು.
ಕನ್ನಪ್ರಭ ವಾರ್ತೆ ಹೊಳೆನರಸೀಪುರ
ಶಿಕ್ಷಕಿಯಾಗಿ, ಲೇಖಕಿಯಾಗಿ, ವಕೀಲರಾಗಿ ಸಮಾಜದ ಅಸಮಾನತೆ ವಿರುದ್ಧ ನಿರಂತರ ಹೋರಾಟ ಮಾಡುವ ಜತೆಗೆ ತಮ್ಮ ಹಾರ್ಟ್ ಲ್ಯಾಂಪ್ ಕೃತಿಗೆ ಬೂಕರ್ ಪ್ರಶಸ್ತಿ ಗೆದ್ದ ಜಿಲ್ಲೆಯ ಬಾನು ಮುಸ್ತಾಕ್ ರನ್ನು ಗೌರವಿಸಬೇಕಾದದ್ದು ಪ್ರಜ್ಞಾವಂತ ಸಮಾಜದ ಜವಾಬ್ದಾರಿ ಎಂದು ಜಿಪಂ ಮಾಜಿ ಸದಸ್ಯ ಎಚ್.ವೈ.ಚಂದ್ರಶೇಖರ್ ಅಭಿಪ್ರಾಯಪಟ್ಟರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾನ ಮನಸ್ಕರ ವೇದಿಕೆಯಿಂದ ಆಯೋಜಿಸಿದ್ದ ಹಾರ್ಟ್ ಲ್ಯಾಂಪ್ ಕೃತಿಯ ನಾಟಕ ಪ್ರದರ್ಶನ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಲೇಖಕರು ಪಡೆದ ಪ್ರಶಸ್ತಿ ಕನ್ನಡ ಸಾಹಿತ್ಯ ಲೋಕದ ಶ್ರೀಮಂತಿಕೆಯನ್ನು ರಾಷ್ಟ್ರಮಟ್ಟದಲ್ಲಿ ರಾರಾಜಿಸುವಂತೆ ಮಾಡುವ ಜತೆಗೆ ನಮ್ಮ ಜಿಲ್ಲೆಯನ್ನು ಮತ್ತೊಮ್ಮೆ ರಾಷ್ಟ್ರ ಗುರುತಿಸುವಂತೆ ಮಾಡಿದ್ದಾರೆ ಎಂದರು.
ದಂಡೋರ ಸಮಿತಿಯ ರಾಜ್ಯ ಕಾರ್ಯದರ್ಶಿ ಟಿ.ಆರ್.ವಿಜಯಕುಮಾರ್ ಪ್ರಾಸ್ತವಿಕ ನುಡಿಗಳನ್ನಾಡಿ, ಬಾನು ಮುಸ್ತಾಕ್ ಅವರ ಕೃತಿಗೆ ಜಾಗತಿಕ ಮಟ್ಟದಲ್ಲಿ ಗೌರವ ಸಿಕ್ಕಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ನಮ್ಮ ದೇಶದ ಪ್ರಧಾನಮಂತ್ರಿಗಳು ಅಂತಾರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ವಿಜೇತ ಲೇಖಕಿಯನ್ನು ಅಭಿನಂದಿಸದೇ ಇರುವುದು ಖಂಡನೀಯ ಎಂದರು.ಜುಲೈ ೧೨ರಂದು ಪಟ್ಟಣದ ಸಾರ್ವಜನಿಕ ಸಮುದಾಯ ಭವನದಲ್ಲಿ ಶಿವಮೊಗ್ಗದ ನೀನಾಸಂ ಕಲಾವಿದರಿಂದ ಹಾರ್ಟ್ ಲ್ಯಾಂಪ್ ನಾಟಕವನ್ನು ಅಭಿನಯಿಸಲಾಗುವುದು ಮತ್ತು ನಾಗರಿಕ ಬಂಧುಗಳು ಈ ನಾಟಕವನ್ನು ವೀಕ್ಷಿಸುವಂತೆ ಕರೆ ನೀಡಿದರು.
ಪುರಸಭಾ ಸದಸ್ಯರಾದ ಉಮೇಶ್, ಬೌದ್ಧ ಮಹಾಸಭಾ ಮುಖಂಡರಾದ ಡಾ. ವೆಂಕಟೇಶ್ ಮೂರ್ತಿ, ಮಾದಿಗ ದಂಡೋರ ಸಮಿತಿಯ ಕೆ.ಎಂ.ನಾಗರಾಜು, ಸತೀಶ್, ಮಹೇಶ್, ರಾಮದಾಸ್, ವಕೀಲ ಮಂಜುನಾಥ್, ಶಶಿಧರ್, ಸುಪ್ರೀತ್ ಪಾಸ್ವಾನ್, ಜಗದೀಶ್, ಆನಂದ್, ಚಿನ್ನಸ್ವಾಮಿ, ಜವರೇಶ, ಕರಿಯಪ್ಪ ಹಾಗೂ ಇತರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ದಲಿತ ಸಂಘರ್ಷ ಸಮಿತಿ, ದಂಡೋರ ಸಮಿತಿ ಹಾಗೂ ಇತರೆ ಸಂಘ ಸಂಸ್ಥೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.