ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹಣ್ಣು ಮತ್ತು ತರಕಾರಿಗಳ ಸೇವನೆ ಆರೋಗ್ಯದ ದೃಷ್ಟಿಯಿಂದ ಅತ್ಯವಶ್ಯವಾಗಿದೆ. ಆದರೆ ಬಹಳ ಬೇಗ ಕೆಡುವುದರಿಂದ ಇವುಗಳ ಸಂರಕ್ಷಣೆ ಮತ್ತು ಮೌಲ್ಯವರ್ಧನೆ ಮಾಡಿದರೆ ರೈತರು ಈ ಬೆಳೆ ಬೆಳೆಯುವಲ್ಲಿ ಸಾಕಷ್ಟು ಆಸಕ್ತಿ ತೋರಿಸುತ್ತಾರೆ ಎಂದು ರಾಜ್ಯ ಸರ್ಕಾರ ಕೃಷಿ ಬೆಳೆ ಆಯೋಗ ಅಧ್ಯಕ್ಷ ಡಾ. ಅಶೋಕ ದಳವಾಯಿ ಅಭಿಪ್ರಾಯಪಟ್ಟರು.ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಡಾ.ಎಸ್.ಬಿ. ದಂಡಿನ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನದ ಪ್ರಥಮ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಮುಖ್ಯ ಅತಿಥಿಯಾದ ಮಾಡಿದರು.
ಔಷಧೀಯ ಬೆಳೆಗಳು ಇಂದು ಮತ್ತೆ ಜನಪ್ರೀಯವಾಗುತ್ತಿವೆ. ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆ ಮತ್ತು ರೈತರಿಗೆ ಮಾರುಕಟ್ಟೆಯ ಬಗ್ಗೆ ಮಾಹಿತಿ ಒದಗಿಸಿದರೆ ರೈತರ ಆದಾಯವೃದ್ಧಿಗೆ ಅನುಕೂಲವಾಗಬಹುದು ಎಂದು ಹೇಳಿದರು.ಉದ್ಯೋಗ ಸೃಷ್ಟಿಸುವಲ್ಲಿ ಮತ್ತು ರೈತರಿಗೆ ಹೆಚ್ಚಿನ ಆದಾಯ ತರುವಲ್ಲಿ ದ್ವಿತೀಯ ಕೃಷಿಯ ಕುರಿತು ಉಪನ್ಯಾಸ ನೀಡಿ, ನಮ್ಮ ದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಮೌಲ್ಯವರ್ಧನೆಗೆ ವಿಫುಲ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಿದರು.
ಮಾಜಿ ಸಚಿವರಾದ ಎ.ಬಿ. ಪಾಟೀಲ ಉದ್ಘಾಟಿಸಿ ಡಾ.ಎಸ್.ಬಿ. ದಂಡಿನ ಅವರು ರೇಷ್ಮೆ ಮತ್ತು ತೋಟಗಾರಿಕೆ ಕ್ಷೇತ್ರಕ್ಕೆ ಕೊಡಮಾಡಿದ ಸೇವೆ ಸ್ಮರಿಸಿ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅವರ ಹೆಸರಿನಲ್ಲಿ ಸ್ಥಾಪಿಸಿದ ಪ್ರತಿಷ್ಠಾನ ಹೆಚ್ಚೆಚ್ಚು ಕಾರ್ಯಕ್ರಮ ಹಮ್ಮಿಕೊಂಡು ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕೆಂದು ಕೇಳಿಕೊಂಡರು.ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಡಾ.ಎಸ್.ಬಿ. ದಂಡಿನ ಪ್ರತಿಷ್ಠಾನ ಅಡಿಯಲ್ಲಿ ಸಾಕಷ್ಟು ಸಂಶೋಧನಾ ಕಾರ್ಯಕ್ರಮ ಬರಲಿ ಮತ್ತು ಅವುಗಳಿಂದ ಸಮಾಜಕ್ಕೆ ಪ್ರಯೋಜನವಾಗಲಿ ಎಂದು ಹಾರೈಸಿದರು.
ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಆಲೂರ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ನಿವೃತ್ತ ಉಪ ಮಹಾನಿರ್ದೇಶಕ ಡಾ. ಕೃಷ್ಣಕುಮಾರ ಅವರು ಪ್ರತಿಷ್ಠಾನ ಕೈಗೊಳ್ಳಬೇಕಾದ ಕಾರ್ಯಗಳನ್ನು ವಿವರಿಸಿದರು.ಅಧ್ಯಕ್ಷತೆ ವಹಿಸಿದ್ದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ್ ಮಾತನಾಡಿ, ಡಾ.ಎಸ್. ಬಿ. ದಂಡಿನ ಹೆಸರಿನಲ್ಲಿ ಸ್ಥಾಪಿಸಿದ ಪ್ರತಿಷ್ಠಾನ ಧ್ಯೇಯೋದ್ಧೇಶಗಳು ಮತ್ತು ಪ್ರತಿಷ್ಠಾನ ಪ್ರಾರಂಭವಾದ ಒಂದು ವರ್ಷದಲ್ಲಿ ಹಮ್ಮಿಕೊಂಡ ವಿವಿಧ ಕಾರ್ಯಕ್ರಮ ವಿವರಿಸಿದರು.ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸಂಸ್ಥಾಪನಾ ಕುಲಪತಿ ಡಾ.ಎಸ್.ಬಿ. ದಂಡಿನ ಮಾತನಾಡಿದರು. ಪ್ರತಿಷ್ಠಾನ ಕಾರ್ಯದರ್ಶಿ ಡಾ.ಆನಂದ ಮಾಸ್ತಿಹೊಳಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಎಸ್.ಬಿ.ದಂಡಿನ ಪ್ರತಿಷ್ಠಾನ ಸದಸ್ಯರು, ಅಭಿಮಾನಿಗಳು, ಪ್ರಾಧ್ಯಾಪಕರು, ರೈತರು, ನಿವೃತ್ತ ವಿಜ್ಞಾನಿಗಳು, ಅನೇಕ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ರೇಷ್ಮೆ ಇಲಾಖೆಯ ಸಿಬ್ಬಂದಿ ಮತ್ತು ನಿವೃತ್ತ ನಿರ್ದೇಶಕರು, ಕಾರ್ಮಿಕರು, ತೋವಿವಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.