ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣಿತಶಾಸ್ತ್ರದ ಮಾದರಿಗೆ ಹೆಚ್ಚಿನ ಮಹತ್ವ

| Published : Jun 30 2025, 12:34 AM IST

ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣಿತಶಾಸ್ತ್ರದ ಮಾದರಿಗೆ ಹೆಚ್ಚಿನ ಮಹತ್ವ
Share this Article
  • FB
  • TW
  • Linkdin
  • Email

ಸಾರಾಂಶ

ಕವಿವಿ ಗಣಿತಶಾಸ್ತ್ರ ಇತ್ತೀಚಿಗೆ ಅತ್ಯಾಧುನಿಕ ಪ್ರಯೋಗಾಲಯ ಅಭಿವೃದ್ಧಿಪಡಿಸಿಕೊಂಡಿದ್ದು, ಜಾಗತಿಕ ಮಟ್ಟದ ತಜ್ಞರನ್ನು ಕರೆಯಿಸಿ ಸಮ್ಮೇಳನ ಮಾಡುವ ಮೂಲಕ ಗಣಿತಶಾಸ್ತ್ರ ಪ್ರಚಲಿತ ಪ್ರವೃತ್ತಿಗಳ ಬಗ್ಗೆ ಬೆಳಕು ಚೆಲ್ಲುತ್ತಿರುವುದು ಹೆಮ್ಮೆಯ ಸಂಗತಿ.

ಧಾರವಾಡ: ಇತ್ತೀಚಿನ ದಿನಗಳಲ್ಲಿ ನ್ಯೂರಲ್ ನೆಟ್ವರ್ಕ್ ಯಂತ್ರಾಂಶ ಕಲಿಕೆ, ಕೃತಕ ಬುದ್ಧಿಮತ್ತೆ, ಗಣಿತಶಾಸ್ತ್ರದ ಅನ್ವಿಕೆಗಳು ಹೆಚ್ಚು ಪ್ರಚಲಿತವಾಗುತ್ತಿದ್ದು, ಗಣಿತಶಾಸ್ತ್ರದ ಮಾದರಿಗಳು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಮಹತ್ವ ಪಡೆಯುತ್ತಿವೆ ಎಂದು ಜಾರ್ಖಂಡ್ ಧನಬಾದ್ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ಮತ್ತು ಗಣಿಕಯಂತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಶ್ರೀನಿವಾಸ್ ರಾವ್ ಪೆಂಟಿಯಾಲ ಅಭಿಪ್ರಾಯ ಪಟ್ಟರು.

ಕರ್ನಾಟಕ ವಿಶ್ವವಿದ್ಯಾಲಯ ಗಣಿತಶಾಸ್ತ್ರ ವಿಭಾಗ ಮತ್ತು ಪಾವಟೆ ಇನ್ಸಿಟಿಟ್ಯೂಟ್‌ ಆಫ್ ಮ್ಯಾಥಮೆಟಿಕಲ್ ಸೈನ್ಸ್ ಸಂಯುಕ್ತ ಆಶ್ರಯದಲ್ಲಿ ಸೆನೆಟ್ ಸಭಾಂಗಣದಲ್ಲಿ ಗಣಿತಶಾಸ್ತ್ರ ವಿಶ್ಲೇಷಣೆ ಮತ್ತು ಅದರ ಅನ್ವಿಕೆಗಳ ಕುರಿತು ಆಯೋಜಿಸಲಾಗಿರುವ ಮೂರು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಮ್ಮೇಳನದಲ್ಲಿ ಮಾತನಾಡಿದರು.

ಪುಣೆಯ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದ ಹಿರಿಯ ಪ್ರಾಧ್ಯಾಪಕ, ವಿಜ್ಞಾನಿ ಪ್ರೊ. ಕಿರಣ್ ಎ. ಕುಲಕರ್ಣಿ ಮಾತನಾಡಿ, ಇಂದಿನ ಜಗತ್ತಿನಲ್ಲಿ ಗಣಿತ ಪ್ರಬುದ್ಧ ವಿಷಯವಾಗಿದ್ದು, ಇದರಲ್ಲಿನ ಸಂಶೋಧನೆಗಳು, ಅನ್ವಯಗಳು ಶೈಕ್ಷಣಿಕವಾಗಿ ಮಹತ್ವ ಪಡೆದುಕೊಳ್ಳುತ್ತಿದೆ ಎಂದರು.

ಕವಿವಿ ಪ್ರಭಾರ ಕುಲಪತಿ ಪ್ರೊ. ಆರ್.ಎಲ್. ಹೈದರಾಬಾದ್ ಮಾತನಾಡಿ, ಕವಿವಿ ಗಣಿತಶಾಸ್ತ್ರ ಇತ್ತೀಚಿಗೆ ಅತ್ಯಾಧುನಿಕ ಪ್ರಯೋಗಾಲಯ ಅಭಿವೃದ್ಧಿಪಡಿಸಿಕೊಂಡಿದ್ದು, ಜಾಗತಿಕ ಮಟ್ಟದ ತಜ್ಞರನ್ನು ಕರೆಯಿಸಿ ಸಮ್ಮೇಳನ ಮಾಡುವ ಮೂಲಕ ಗಣಿತಶಾಸ್ತ್ರ ಪ್ರಚಲಿತ ಪ್ರವೃತ್ತಿಗಳ ಬಗ್ಗೆ ಬೆಳಕು ಚೆಲ್ಲುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಮಾಜಿ ಕುಲಪತಿ ಎಚ್.ಬಿ. ವಾಲಿಕಾರ, ಪ್ರಭಾರ ಕುಲಸಚಿವ ಪ್ರೊ. ಎ.ಎ. ಮೂಲಿಮನಿ ಮಾತನಾಡಿದರು. ಅಂತಾರಾಷ್ಟ್ರೀಯ ಸಮ್ಮೇಳನದ ಇಕ್ಮ 2025 ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಗಣಿತಶಾಸ್ತ್ರ ವಿಭಾಗದ ನೂತನ ಗಣಕಯಂತ್ರ ಪ್ರಯೋಗಾಲಯ ಉದ್ಘಾಟಿಸಲಾಯಿತು. ವಿವಿಧ ದೇಶಗಳ 22 ಪ್ರಾಧ್ಯಾಪಕರು ಸೇರಿದಂತೆ ಒಟ್ಟು 22 ಜನ ಅಧ್ಯಾಪಕರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಅಮೇರಿಕಾದ ಅಬ್ಬೊಟ್ಟ್ ಪ್ರಯೋಗಾಲಯದ ಹಿರಿಯ ವಿಶ್ಲೇಷಕ ಡಾ. ಶಶಿಧರ್ ಕಲ್ಲೂರ, ದಕ್ಷಿಣ ಅಮೇರಿಕಾದ ಚಿಲಿಯ ಪ್ರೊ. ಸಂತೋಷ್ ಎಸ್. ನಂದಿ, ದಕ್ಷಿಣ ಅಮೇರಿಕಾದ ಪ್ರೊ. ಡೇವಿಡ್ ಲರೊಜೆ, ಶ್ರೀಲಂಕಾದ ಡಾ. ಕನೀಕಾ ವಿ. ಉಪಸ್ಥಿತರಿದ್ದರು.

ಪ್ರೊ. ಎಚ್.ಎಸ್. ರಮಣೆ ಸ್ವಾಗತಿಸಿದರು, ಕವಿವಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಪಾವಟೆ ಇನ್ಸಿಟಿಟ್ಯೂಟ್ ನಿರ್ದೇಶಕ ಪ್ರೊ. ಎಸ್.ಸಿ. ಶಿರಾಳಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಆರ್.ಎಸ್. ದೇವನಾಳ, ಡಾ. ಆಶಾ ಎಸ್.ಕೆ. ಉಪಸ್ಥಿತರಿದ್ದರು. ಪ್ರೊ. ಪಿ.ಜಿ. ಪಾಟೀಲ್ ವಂದಿಸಿದರು.