ಕನ್ನಡಪ್ರಭ ವಾರ್ತೆ ಕುಶಾಲನಗರ
ರಾಷ್ಟ್ರದಲ್ಲಿ ಸುರಕ್ಷತೆ ಭಾವನೆ ಮೂಡಿಸುವ ಸೈನಿಕರ ತ್ಯಾಗ ಬಲಿದಾನ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದರು.ಕುಶಾಲನಗರದಲ್ಲಿ ಮಾಜಿ ಸೈನಿಕರ ಸಂಘ ಮತ್ತು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆಯ ಆಶ್ರಯದಲ್ಲಿ ಮುಳ್ಳುಸೋಗೆಯ ಸಂಘದ ಕಚೇರಿಯ ಕೆದಂಬಾಡಿ ಸಣ್ಣಪ್ಪ ಸಭಾಂಗಣದಲ್ಲಿ ಏರ್ಪಡಿಸಿದ್ದ 27ನೇ ಕಾರ್ಗಿಲ್ ವಿಜಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಯುದ್ಧ ಹೋರಾಟದಲ್ಲಿ ಭಾಗಿಯಾಗಿ ರಾಷ್ಟ್ರದ ರಕ್ಷಣೆಗೆ ಶ್ರಮಿಸಿದ ಸೈನಿಕರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದರು. ಯುವ ಜನತೆಯಲ್ಲಿ ರಾಷ್ಟ್ರಾಭಿಮಾನ ಬೆಳೆಸುವ ಕೆಲಸವಾಗಬೇಕು ಎಂದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಭಾರತ್ ಸ್ಕೌಟ್ಸ್ ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ. ಪ್ರವೀಣ್ ದೇವರ ಗುಂಡ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ. ಎನ್. ಚಂದ್ರಮೋಹನ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸುಬೇದಾರ್ ಮೇಜರ್ ಎಸ್.ಆರ್. ಮಾದಪ್ಪ ಮಾತನಾಡಿ, ವೀರ ಯೋಧರ ಸೇವೆಯು ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದೆ ಎಂದರು.
ದೇಶದಲ್ಲಿ ಯೋಧರು ಸಶಕ್ತರಾಗಿದ್ದು, ರಾಷ್ಟ್ರ ರಕ್ಷಣೆಗೆ ಕಂಕಣಬದ್ಧರಾಗಿದ್ದಾರೆ ಎಂದರು. ಯುವ ಜನತೆ ದೇಶಭಕ್ತಿ ಹಾಗೂ ಸೇವಾ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಮೇಜರ್ ಮತ್ತು ಹವಾಲ್ದಾರ್‌ಗಳನ್ನು ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಸಂಘದ ಉಪಾಧ್ಯಕ್ಷರು ಹಾಗೂ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಸುಬೇದಾರ್ ರಂಜಿತ್ ಎ.ಕೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯುದ್ಧ ಸನ್ನಿವೇಶದ ಸಂದರ್ಭದ ಸಮಗ್ರ ಮಾಹಿತಿ ಒದಗಿಸಿದರು.
ಹವಾಲ್ದಾರ್ ತಮ್ಮಯ್ಯ ರಾಷ್ಟ್ರಭಕ್ತಿ ಗೀತೆ ಹಾಡಿದರು.ಜಿಲ್ಲಾ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಟಿ.ಜಿ. ಪ್ರೇಮ್ ಕುಮಾರ್, ತರಬೇತಿ ಆಯುಕ್ತರಾದ ಕೆ.ಯು. ರಂಜಿತ್, ಸಹಾಯಕ ಆಯುಕ್ತರಾದ ಸಿ.ಎಂ. ಸುಲೋಚನಾ, ಕೆ.ಬಿ. ಗಣೇಶ್, ಜಿಲ್ಲಾ ಸಂಘಟನಾ ಸಂಸ್ಥೆಯ ಕಾರ್ಯಾಧ್ಯಕ್ಷ ಎ.ಎಸ್. ತಮ್ಮಯ್ಯ, ಕಾರ್ಯದರ್ಶಿ ಎಂ.ಎಸ್. ಗಣೇಶ್ ಇಂದಿರಾ, ಮಾಜಿ ಸೈನಿಕರ ಸಂಘದ ಖಜಾಂಚಿ ಎಂ.ಎಸ್. ನರೇಶ್ ಇದ್ದರು.
ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಲ್ಯಾನ್ಸ್ ನಾಯಕ್ ಎನ್.ಎಸ್. ಕರುಂಬಯ್ಯ ಸ್ವಾಗತಿಸಿದರು. ಪ್ರೇಮ್ ಕುಮಾರ್ ವಂದಿಸಿದರು. ಗೈಡ್ ಶಿಕ್ಷಕಿ ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು.