ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಇಲ್ಲಿನ ಜೈಜವಾನ್ ಮಾಜಿ ಯೋಧರ ಸಂಘದ ವತಿಯಿಂದ ಪತ್ರಿಕಾಭವನದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ವಕೀಲರಾದ ನಿಧಿ ಲಿಂಗಪ್ಪ ಮಾತನಾಡಿ, 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ 527 ಮಂದಿ ಸೈನಿಕರನ್ನು ಕಳೆದುಕೊಂಡಿದ್ದೇವೆ. ಅಂದು ನಡೆದ ಯುದ್ದದಿಂದ ಹಲವಾರು ಸೈನಿಕರನ್ನು ಕಳೆದುಕೊಂಡಿದ್ದರೆ, ಸಾಕಷ್ಟು ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಶತ್ರು ರಾಷ್ಟ್ರ ಪಾಕಿಸ್ತಾನವನ್ನು ಬಳಸಿಕೊಂಡು ಅಮೆರಿಕಾ ಪಾಕಿಸ್ತಾನಕ್ಕೆ ಯುದ್ಧ ಸಾಮಾಗ್ರಿಗಳನ್ನು ನೀಡುವ ಮೂಲಕ ಕಾರ್ಗಿಲ್‌ನಲ್ಲಿ ಯುದ್ಧಕ್ಕೆ ಪ್ರಚೋದನೆ ನೀಡಿತು. ಪ್ರಪಂಚದ ಅತ್ಯಂತ ಎತ್ತರದ ಸುಮಾರು ಮೈನಸ್ 40 ಡಿಗ್ರಿ ಉಷ್ಣಾಂಶದ ಸ್ಥಳದಲ್ಲಿ ಯುದ್ಧ ಮಾಡಬೇಕಾದ ಅನಿವಾರ್ಯತೆ ಅಂದು ಎದುರಾಗಿತ್ತು. ಕಾರ್ಗಿಲ್ ವಿಜಯದ ನಂತರ ಅಕ್ಕಪಕ್ಕದ ರಾಷ್ಟ್ರಗಳು ಭಾರತದತ್ತ ಹೆದರಿಕೆಯಿಂದ ನೋಡುವಂತಾಯಿತು ಎಂದರು. ಕೇವಲ ಹಾಡುಗಾರಿಕೆಯಂತಹ ಮನೋರಂಜನೆಯ ಕಾರ್ಯಕ್ರಮಗಳಿಂದ ಯಾರಲ್ಲೂ ದೇಶಪ್ರೇಮ ಹುಟ್ಟುವುದಿಲ್ಲ. ಶಿಕ್ಷಣದ ವ್ಯವಸ್ಥೆ ಬದಲಾಗಬೇಕು. ದೇಶದೊಳಗೆ ಒಗ್ಗಟ್ಟಿರಬೇಕು. ಜಾತಿ ಧರ್ಮಗಳ ನಡುವೆ ತಿಕ್ಕಾಟ ನಿಲ್ಲಿಸಬೇಕು. ಶಿಕ್ಷಣ ಕೇವಲ ಪುಸ್ತಕಗಳಿಗೆ ಮೀಸಲಾಗಬಾರದು. ವಿದ್ಯಾರ್ಥಿಗಳ ಮನಸ್ಸನ್ನು ಸದೃಢಗೊಳಿಸಿದಲ್ಲಿ ಮಕ್ಕಳ ಮನಸ್ಥಿತಿ ಬದಲಾಗುತ್ತದೆ. ದೇಶವನ್ನು ಒಗ್ಗಟ್ಟಾಗಿ ಇಡಲು ಪರಸ್ಪರ ಗೌರವ ನೀಡುವ ಮನೋಭಾವ ಬೆಳೆಸಬೇಕು. ದೇಶದೊಳಗೆ ದೇಶವಿರೋಧಿ ಮನಸ್ಥಿತಿಯನ್ನು ಮಟ್ಟಹಾಕಿ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಕಾರ್ಯಕ್ರಮವನ್ನು ನಡೆಸಿದರೂ, ಯುವಜನರನ್ನು ಹೆಚ್ಚು ಸೇರಿಸಿ ಕಾರ್ಯಕ್ರಮ ನಡೆಸುವಂತಾಗಬೇಕು ಎಂದರು. ಜೈಜವಾನ್ ಮಾಜಿ ಯೋಧರ ಸಂಘದ ಅಧ್ಯಕ್ಷ ಈರಪ್ಪ ಮಾತನಾಡಿ, ಸೈನಿಕರು ತಮ್ಮ ಸೇವಾವಧಿ ಮುಗಿದ ನಂತರ ಸುಮ್ಮನಾಗದೆ, ಸಮಾಜಕ್ಕೆ ಮತ್ತು ದೇಶಕ್ಕೆ ಒಳಿತಾಗುವ ಕೆಲಸ ಎಲ್ಲರು ಮಾಡಬೇಕು. ಕಾರ್ಯಕ್ರಮಗಳು ಕೇವಲ ಮನೋರಂಜನೆಗೆ ಮಾತ್ರ ಸೀಮಿತವಾಗುವುದು ಬೇಡ. ಕಾರ್ಯಕ್ರಮದ ಮೂಲಕ ಸಮಾಜಕ್ಕೆ ಒಳ್ಳೆ ಸಂದೇಶ ಮತ್ತು ಒಳಿತಾಗುವ ಕೆಲಸ ಎಲ್ಲರು ಮಾಡಬೇಕು. ಪೋಷಕರು ಬಾಲ್ಯದಲ್ಲಿಯೇ ತಮ್ಮ ಮಕ್ಕಳಿಗೆ ತಿಳಿಹೇಳುವ ಮೂಲಕ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡಬೇಕು ಎಂದರು.ಹಿಂದೂ ಜಾಗರಣ ವೇದಿಕೆಯ ಬೋಜೇಗೌಡ ಮತ್ತು ಪದಾಧಿಕಾರಿಗಳು, ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್ ಮತ್ತು ಪದಾಧಿಕಾರಿಗಳು, ಮೋಟಾರು ಮಾಲೀಕರು ಮತ್ತು ಕೆಲಸಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.