ಸಾರಾಂಶ
ಚಿಕ್ಕಮಗಳೂರು: ನೆರಳಿನಲ್ಲೇ ಬೆಳೆಯುವುದರಿಂದ ಕಾಫಿ ಕೃಷಿಯಿಂದ ಕಾಡು, ಹಸಿರು ಹೆಚ್ಚಾಗುತ್ತಿದೆ. ಕಾಫಿ ಮೌಲ್ಯವರ್ಧನೆ ಹಾಗೂ ಬ್ರ್ಯಾಂಡಿಂಗ್‌ಗೆ ಹೆಚ್ಚು ಗಮನ ಕೊಡುವುದು ಅಗತ್ಯ. ಅನಿಯಮಿತ ವಿದ್ಯುತ್ ಪೂರೈಕೆಗೆ ಬದ್ಧರಿರುವುದಾಗಿ ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಹೇಳಿದರು.
ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್‌ನ 67ನೇ ವಾರ್ಷಿಕ ಅಧಿವೇಶನವನ್ನು ದಿ ಸೆರಾಯ್ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.ಮರದ ನೆರಳಿನಲ್ಲಿ ಕಾಫಿ ಬೆಳೆಯುವುದು ಭಾರತದಲ್ಲಿ ವಿಶೇಷ. ಇದಕ್ಕೆ ಮೌಲ್ಯ ಹೆಚ್ಚು ಜೊತೆಗೆ ಪರಿಸರಕ್ಕೂ ಉತ್ತಮ ಕೊಡುಗೆ ನೀಡಿದಂತಾಗುತ್ತದೆ. ವಿಯೆಟ್ನಾಂ, ಕಾಂಬೋಡಿಯಾ, ಬ್ರೆಜಿಲ್ ಸೇರಿದಂತೆ ಹೆಚ್ಚು ಕಾಫಿ ಉತ್ಪಾದಿಸುವ ದೇಶಗಳಲ್ಲಿ ಬಯಲಿನಲ್ಲಿ ಕಾಫಿ ಬೆಳೆಯಲಾಗುತ್ತದೆ ಎಂದ ಸಚಿವರು, ಉತ್ತರ ಭಾರತದಲ್ಲೂ ಇತ್ತೀಚಿಗೆ ಕಾಫಿ ಬೆಳೆಯಲಾಗುತ್ತಿದೆ. ಕೇರಳ ಮತ್ತು ಆಂಧ್ರ ಪ್ರದೇಶದಲ್ಲೂ ಕಾಫಿ ಕೃಷಿ ನೋಡಬಹುದು. ಆಂಧ್ರದಲ್ಲಿ ಕಾಫಿ ಬ್ರ್ಯಾಂಡಿಂಗ್ ಉತ್ತಮವಾಗಿದ್ದು, ಅದನ್ನು ನಾವು ಕಲಿಯಬೇಕು ಎಂದರು. ಕರ್ನಾಟಕ ರಾಜ್ಯದಲ್ಲಿ ಚಿಕ್ಕಮಗಳೂರು ಸೇರಿದಂತೆ ನಾಲ್ಕೈದು ಜಿಲ್ಲೆಗಳಲ್ಲಿ ಕಾಫಿ ಬೆಳೆಯಲಾಗುತ್ತಿದ್ದರೂ ದೇಶದಲ್ಲೇ ರಾಜ್ಯದ ಕಾಫಿ ಉತ್ಪಾದನೆ ಅತಿ ಹೆಚ್ಚು ಎಂಬುದು ಹೆಮ್ಮೆಯ ಸಂಗತಿ ಎಂದರು. ಕಾಫಿಯನ್ನು ಕೈಗಾರಿಕೆಯಾಗಿ ನೋಡಬೇಕು. ಯೂರೋಪಿಯನ್ನರು ಭೂಮಿ ನೋಡುವಾಗ ಹವಾಮಾನವನ್ನೂ ಅಭ್ಯಾಸ ಮಾಡಿ ಕಾಫಿ ಗಿಡ ನೆಡುತ್ತಿದ್ದರಿಂದ ಹೆಚ್ಚು ಯಶಸ್ವಿಯಾಗಿದ್ದರು. ಕಾಫಿ ಮಂಡಳಿ ಉದ್ಯಮದ ಅಭಿವೃದ್ಧಿಗೆ ಉತ್ತಮ ಕೆಲಸ ಮಾಡುತ್ತಿದೆ. ಜಪಾನ್ ಮತ್ತು ಕೋರಿಯಾ ಪ್ರವಾಸ ಸಂದರ್ಭದಲ್ಲಿ ಕಾಫಿ ಮಂಡಳಿ ಪ್ರದರ್ಶಿನಿ ಏರ್ಪಡಿದ್ದು ಗಮನಕ್ಕೆ ಬಂತು. ಇಂದು ಕಾಫಿ ಕೃಷಿ ಜೊತೆಗೆ ಹೆಚ್ಚುತ್ತಿದೆ. ಜಪಾನ್‌ನಲ್ಲೂ ಯುವಕರು ಕಾಫಿ ಬಯಸುತ್ತಿದ್ದಾರಂತೆ. ಅಮೇರಿಕಾದ ಟ್ರಂಪ್ ಕಾಫಿ ಬೆಳವಣಿಗೆ ಕಂಡು ತೆರಿಗೆ ತೆಗೆಯುವುದಾಗಿ ಹೇಳಿದ್ದಾರೆಂದರು.
ಕೃಷಿ ಕಾರ್‍ಯಗಳಿಗೆ ನಿರಂತರ ವಿದ್ಯುತ್ ಪೂರೈಕೆಗೆ ಸರ್ಕಾರ ಯೋಜನೆ ರೂಪಿಸಿದೆ. ವಿಶೇಷವಾಗಿ ಮಲೆನಾಡಿನಲ್ಲಿ ಮರ ಗಿಡಗಳು ಬಿದ್ದಾಗ ತೊಂದರೆಯಾಗುತ್ತಿದ್ದು, ದುರಸ್ತಿಗೆ ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ ಎಂದರು.ಅಧ್ಯಕ್ಷ ತೆ ವಹಿಸಿದ್ದ ಕೆಪಿಎ ಅಧ್ಯಕ್ಷ ಎ.ಅರವಿಂದರಾವ್ ಮಾತನಾಡಿ, ಕಾಫಿ, ಟೀ, ಏಲಕ್ಕಿ, ಕಾಳುಮೆಣಸು, ರಬ್ಬರ್ ಸೇರಿದಂತೆ ತೋಟಗಾರಿಕಾ ವಲಯದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಲಾಗುತ್ತಿದೆ. ಹವಾಮಾನ ವೈಪರೀತ್ಯ, ವಿದ್ಯುತ್ ಕಡಿತ, ಸಂಚಾರ ಮತ್ತು ಸಾಗಣಿಗೆ ತೊಂದರೆಯಾಗಿರುವ ರಸ್ತೆಗಳು, ಕಾರ್ಮಿಕರ ಕೊರತೆ, ಬ್ರ್ಯಾಂಡಿಂಗ್‌ನಲ್ಲಿ ಹಿನ್ನಡೆ ತೋಟಗಾರಿಕಾ ವಲಯ ಎದುರಿಸುತ್ತಿರುವ ಸವಾಲುಗಳೆಂದು ವಿವರಿಸಿದರು.
ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಕಾಫಿ ಏಜೆಂಟರಾಗಿ ಈ ಹಿಂದೆ ಕಾರ್‍ಯನಿರ್ವಹಿಸಿದ್ದು, ಈ ವಲಯದ ಸಮಸ್ಯೆ ಅರಿವಿದೆ. ನುರಿತ ಕೆಲಸಗಾರರ ಕೊರತೆ ಅಪಾರ. ಒತ್ತುವರಿ ಸಮಸ್ಯೆ, ಮಾನವ ವನ್ಯಜೀವಿ ಸಂಘರ್ಷ ಸೇರಿದಂತೆ ಅನೇಕ ತೊಂದರೆಗಳು ಬೃಹದಾಕರವಾಗಿದೆ. ಅರಣ್ಯ ಇಲಾಖೆ ದೆವ್ವದ ತರ ಜನರನ್ನು ಕಾಡುತ್ತಿದೆ. ಯಾರನ್ನೂ ಅರಣ್ಯ ಅಧಿಕಾರಿಗಳು ಪರಿಗಣಿಸುತ್ತಿಲ್ಲ. ಮಲೆನಾಡಿನಲ್ಲಿ ವಿಶಿಷ್ಟ ಸಮಸ್ಯೆಗಳಿದ್ದು, ಈ ಭಾಗದ ಶಾಸಕರು ಚಳಿಗಾಲದ ಅಧಿವೇಶನದಲ್ಲಿ ಅವುಗಳ ಚರ್ಚೆಗೆ ಹೆಚ್ಚಿನ ಸಮಯಾವಕಾಶ ಮೀಸಲಿಡುವಂತೆ ಕೋರಲಾಗಿದೆ ಎಂದರು. ಮೂಡಿಗೆರೆ ಶಾಸಕಿ ನಯನಾಮೋಟಮ್ಮ ಮಾತನಾಡಿ, ಕೆಪಿಎ ಸದಸ್ಯರು ಎಲ್ಲ ತೋಟ ಕಾರ್ಮಿಕರಿಗೂ ಜೀವವಿಮೆ ಮಾಡಿಸಿ ಭದ್ರತೆ ಒದಗಿಸಬೇಕು. ಶಾಲೆ, ಆಸ್ಪತ್ರೆಯಂತಹ ಜನೋಪಯೋಗಿ ಕಾರ್‍ಯಗಳಿಗೆ ಸಹಾಯ ಮಾಡಬೇಕು ಎಂದರು. ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಮಲೆನಾಡು ತೋಟಗಾರಿಕಾ ಬೆಳೆಗೆ ಪ್ರಸಿದ್ಧಿ. ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ನೀಡಲಾಗುತ್ತಿದೆ. ದೇಶದ ಆರ್ಥಿಕತೆಗೆ ತೋಟಗಾರಿಕಾ ವಲಯದ ಕೊಡುಗೆ ಹೆಚ್ಚು. ಮಿಶ್ರಬೆಳೆ ಪದ್ಧತಿ ಅನುಸರಿಸುವುದು ಉತ್ತಮ ಎಂದರು.ಇದೇ ವೇಳೆ ತೋಟ ಕಾರ್ಮಿಕರ 55 ಮಕ್ಕಳಿಗೆ 2.92 ಲಕ್ಷ ರು. ವಿದ್ಯಾರ್ಥಿವೇತನ ವಿತರಿಸಲಾಯಿತು. ಕೆಪಿಎ ಸಹ ಕಾರ್‍ಯದರ್ಶಿ ಭವೀಶ್ ನಾಚಪ್ಪ ಮತ್ತಿತರರು ವೇದಿಕೆಯಲ್ಲಿದ್ದರು. ಉಪಾಧ್ಯಕ್ಷ ಸಲ್ಮಾನ್ ಬಷೀರ್ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))