ಕನ್ನಡಪ್ರಭ ವಾರ್ತೆ ಗದಗ
ಕನ್ನಡದ ಕಂಪು ನಾಡಿನ ಎಲ್ಲೆಡೆ ಪಸರಿಸಬೇಕು. ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿ ಬಿಂಬಿಸುವ ಕಾರ್ಯಕ್ರಮಗಳು ದಿನವೂ ನಡೆಯಬೇಕು ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ ತಿಳಿಸಿದರು.ನಗರದ ಸ್ವತಂತ್ರ ವಿತರಣಾ ಕೇಂದ್ರದಲ್ಲಿ ಗದಗ ಮನರಂಜನಾ ಕೂಟ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಸಂಗೀತ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ನಾಡು ಏಕೀಕರಣಕ್ಕೆ ಆಲೂರು ವೆಂಕಟರಾಯರು, ಬಿಎಂಶ್ರೀ, ಕುವೆಂಪು ಮುಂತಾದ ಮಹನೀಯರ ತ್ಯಾಗ ಮತ್ತು ಪರಿಶ್ರಮ ಬಗೆಗೆ ಪ್ರತಿಯೊಬ್ಬ ಕನ್ನಡಿಗರಲ್ಲಿ ನಾಡು-ನುಡಿಯ ಬಗ್ಗೆ ಅಭಿಮಾನ, ಗೌರವ ಮತ್ತು ಜಾಗೃತಿ ಮೂಡಿಸುವ ಮೂಲಕ ರಾಜ್ಯೋತ್ಸವ ನಿಜವಾದ ಅರ್ಥದಲ್ಲಿ ಕನ್ನಡಮಯವಾಗಬೇಕು. ರಾಜ್ಯೋತ್ಸವವು ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ, ಕನ್ನಡ ನಾಡಿನ ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಕಲೆ ಹಾಗೂ ನಾಡಿಗೆ ಅಪಾರ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸುವ ಅರ್ಥಪೂರ್ಣ ದಿನವಾಗಬೇಕು ಎಂದರು.
ಗದಗ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕ ವಿನೋಧಕುಮಾರ ಮೇದಾರ, ಐಪಿಪಿಬಿ ಮ್ಯಾನೇಜರ್ ಮಂಜುನಾಥ, ರೋಣ ಅಂಚೆ ನಿರೀಕ್ಷಕ ವೆಂಕಟೇಶರಡ್ಡಿ ಕೊಳ್ಳಿ, ಪ್ರಧಾನ ಅಂಚೆ ಪಾಲಕ ಏಕನಾಥ ಮೆಣನಸಿನಕಾಯಿ, ಸ್ವತಂತ್ರ ವಿತರರಣಾ ಕೇಂದ್ರ ಮೇಲ್ವಿಚಾರಕ ಡಿ.ಜಿ. ಮ್ಯಾಗೇರಿ ಮಾತನಾಡಿದರು.ಶರಣಪ್ಪ ನಾಯ್ಕರ, ಸೌಮ್ಯ ಹುಯಿಲಗೋಳ, ವಿನೂತ ಕಪ್ಪತನವರ, ಕವಿತಾ ರಡ್ಡೆರ, ವೀರೇಶ ಅಂಗಡಿ, ಮೇಘನಾ ಕುಲಕರ್ಣಿ, ವಾಣಿ ಯಳಗಂಟಿ, ಭೀಮಣ್ಣ ದೊಡ್ಡಮನಿ, ರವಿ ಜಾಧಚ, ವೀರನಗೌಡ ಸಂಗೀತ ಸ್ಪರ್ಧೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಇದೇ ವೇಳೆ ಇಂಡಿಯಾ ಫೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವ್ಯಾಪಾರಿ ಗ್ರಾಹಕರಿಗಾಗಿ ಡಿಜಿಟಲ್ ಪಾವತಿಗಾಗಿ ಡಕ್ ಪೇ ಸೌಂಡ್ ಬಾಕ್ಸ್ ವಿತರಣೆ ಮಾಡಲಾಯಿತು.
ಪ್ರಧಾನ ಅಂಚೆ ಕಚೇರಿ ಹಾಗೂ ಸಿಬ್ಬಂದಿ ಇದ್ದರು. ವೆಂಕಟೇಶ ಆಕಳವಾಡಿ ನಿರೂಪಿಸಿದರು. ಸೋಮು.ಎಸ್ ಸ್ವಾಗತಿಸಿ, ವಂದಿಸಿದರು.