ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎಷ್ಟೇ ದೊಡ್ಡಮಟ್ಟದ ಸಾಧನೆ ಮಾಡಿದರೂ ಸಹ ಬಾಲ್ಯದಲ್ಲಿ ಅವರಿಗೆ ವಿದ್ಯೆ ಕಲಿಸಿದ ಗುರು ಮತ್ತು ಶಾಲೆಯನ್ನು ಮರೆಯಬಾರದು, ತಾವು ಓದಿದ ಶಾಲೆಯ ಅಭಿವೃದ್ದಿಗೆ ಶ್ರಮಿಸುವ ಜತೆಗೆ ಶಾಲೆಯ ಬೆಳವಣಿಗೆಗೆ ಸಹಕಾರಿಯಾಗಿ ನಿಲ್ಲಬೇಕು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪ್ರತಿಯೊಬ್ಬ ವಿದ್ಯಾರ್ಥಿಗಳು ಓದಿದ ಶಾಲೆಗೆ ಹಾಗೂ ವಿದ್ಯೆ ಕಲಿಸಿದ ಗುರುಗಳನ್ನು ಸ್ಮರಿಸುವ ಕೆಲಸ ಮಾಡಬೇಕು ಎಂದು ರೋಟರಿ ಶಾಲೆ ಮುಖ್ಯಶಿಕ್ಷಕ ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ರೋಟರಿ ಶಾಲೆಯಲ್ಲಿ ನಡೆದ 2001-10ನೇ ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎಷ್ಟೇ ದೊಡ್ಡಮಟ್ಟದ ಸಾಧನೆ ಮಾಡಿದರೂ ಸಹ ಬಾಲ್ಯದಲ್ಲಿ ಅವರಿಗೆ ವಿದ್ಯೆ ಕಲಿಸಿದ ಗುರು ಮತ್ತು ಶಾಲೆಯನ್ನು ಮರೆಯಬಾರದು, ತಾವು ಓದಿದ ಶಾಲೆಯ ಅಭಿವೃದ್ದಿಗೆ ಶ್ರಮಿಸುವ ಜತೆಗೆ ಶಾಲೆಯ ಬೆಳವಣಿಗೆಗೆ ಸಹಕಾರಿಯಾಗಿ ನಿಲ್ಲಬೇಕು. ರೋಟರಿ ಶಾಲೆಯಲ್ಲಿ 2001 ರಿಂದ 2010ರವೆರೆಗೆ ವಿದ್ಯಾಭ್ಯಾಸ ಮಾಡಿದ ಹಿರಿಯ ವಿದ್ಯಾರ್ಥಿಗಳು ತಾವು ಓದಿದ ಶಾಲೆ ಮತ್ತು ಗುರುಗಳನ್ನು ಸ್ಮರಿಸಿ ಗುರುವಂದನಾ ಕಾರ್ಯಕ್ರಮದ ಮೂಲಕ ಗುರುಗಳಿಗೆ ಅಭಿನಂದನೆ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸವಾಗಿದೆ. ಪ್ರತಿ ಶಾಲೆಗಳಲ್ಲೂ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದರು.ಶಿಕ್ಷಕ ಶಿವರಾಮೇಗೌಡ ಮಾತನಾಡಿ, ಶಾಲೆಯಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮದ ಮೂಲಕ ಗುರುಗಳನ್ನು ಅಭಿನಂಧಿಸುವ ಮೂಲಕ ಮೌಲ್ಯ, ಸಂಸ್ಕಾರವನ್ನು ಹೆಚ್ಚಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಓದಿ ದೊಡ್ಡಮಟ್ಟಕ್ಕೆ ಬೆಳೆದರು ನಮಗೆ ನೀವು ಎಂದಿಗೂ ನಮ್ಮ ವಿದ್ಯಾರ್ಥಿಗಳೇ ಎಂಬ ಭಾವನೆ ಸದಾ ನಮ್ಮೊಡನೆ ಇರುತ್ತದೆ. ಹಿರಿಯ ವಿದ್ಯಾರ್ಥಿಗಳಿಂದ ಓದಿದ ಶಾಲೆಗೆ ಬೆಳವಣಿಗೆಗೆ ಪೂರಕವಾಗಿ ಸದಾ ನೆರವಾಗಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ತಿಮ್ಮೇಗೌಡ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇದೇವೇಳೆ ಎಲ್ಲಾ ಶಿಕ್ಷಕರನ್ನು ಅಭಿನಂಧಿಸಿದರು. ಜತೆಗೆ ಪ್ರೊಜೆಕ್ಟರ್ ಹಾಗೂ ಮ್ಯೂಜಿಕಲ್ ಸೆಟ್‌ನ್ನು ಹಿರಿಯ ವಿದ್ಯಾರ್ಥಿಗಳು ಸೇರಿ ಕೊಡುಗೆಯಾಗಿ ಶಾಲೆಗೆ ವಿತರಣೆ ಮಾಡಿದರು.ಸಮಾರಂಭದಲ್ಲಿ ಆಡಳಿತ ಮಂಡಳಿ ನಿರ್ದೇಶಕ ಅಶೋಕ್ ಜೈನ್, ರಮೇಶ್, ದೈ.ಶಿ ಹೇಮಂತ್‌ಕುಮಾರ್, ಹಿರಿಯ ವಿದ್ಯಾರ್ಥಿಗಳಾದ ಪ್ರದೀಪ್‌ಕುಮಾರ್, ಮನೋಜ್, ರಜತ್, ವರುಣ್, ಶಶಿಕಾಂತ್, ರಕ್ಷಿತ್, ನಯನ, ಶೀಥಲ್, ಉದಯಚಂದ್ರಿಕ, ಲಾವಣ್ಯ, ಶರಣ್‌ಕುಮಾರ್, ದೃಪತುಂಗ, ನಿತೀಶ್, ಅಭಿಷೇಕ್, ಹರ್ಷಿತ್, ಕಾವ್ಯ ಇತರರಿದ್ದರು.