ಇತ್ತೀಚಿಗಷ್ಟೇ ಮೈಸೂರು- ಬೆಂಗಳೂರು ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿ ವಾಹನಗಳಿಗೆ ವೇಗದ ಮಿತಿ ಆಳವಡಿಸಲಾಯಿತು ಆದರೂ ಸಹ ಅಪಘಾತಗಳ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರಿನಂತಹ ಮಹಾ ನಗರಗಳಲ್ಲಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಆದರೆ, ಮಂಡ್ಯದಲ್ಲಿ ಅಂತಹ ರಸ್ತೆಗಳು ಹೆಚ್ಚು ಇಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನಾವು ಬದುಕಬೇಕು ಹಾಗೂ ಉಳಿದವರನ್ನು ಬದುಕಲು ಬಿಡಬೇಕು ಎಂಬ ಧ್ಯೇಯದೊಂದಿಗೆ ಎಲ್ಲರೂ ರಸ್ತೆ ನಿಯಮಗಳನ್ನು ಪಾಲಿಸುವ ಸಂಕಲ್ಪ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್ ಹೇಳಿದರು.

ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ನಡೆದ ೩೭ನೇ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾಚರಣೆ ರಸ್ತೆ ಸುರಕ್ಷೆ -ಜೀವದ ರಕ್ಷೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿಗಷ್ಟೇ ಮೈಸೂರು- ಬೆಂಗಳೂರು ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿ ವಾಹನಗಳಿಗೆ ವೇಗದ ಮಿತಿ ಆಳವಡಿಸಲಾಯಿತು ಆದರೂ ಸಹ ಅಪಘಾತಗಳ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರಿನಂತಹ ಮಹಾ ನಗರಗಳಲ್ಲಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಆದರೆ, ಮಂಡ್ಯದಲ್ಲಿ ಅಂತಹ ರಸ್ತೆಗಳು ಹೆಚ್ಚು ಇಲ್ಲ. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ರಸ್ತೆ ಸುರಕ್ಷತಾ ಮಾಸಾಚರಣೆಗೆ ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸಬೇಕು ಎಂದರು.

೧೮ ವರ್ಷ ಮೇಲ್ಪಟ್ಟವರಿಗೆ ಮಾತ್ರ ವಾಹನ ಪರವಾಗಿ ನೀಡಲಾಗುತ್ತದೆ. ಆದರೆ, ತಂದೆ ತಾಯಿಗಳು ತಮ್ಮ ಮಕ್ಕಳು ವಾಹನ ಚಾಲನೆಯನ್ನು ಕಲಿಯಲಿ ಎಂಬ ಉದ್ದೇಶದಿಂದ ಅಪ್ರಾಪ್ತ ಮಕ್ಕಳಿಗೆ ವಾಹನವನ್ನು ನೀಡುತ್ತಿದ್ದಾರೆ. ಇದರಿಂದ ಅದೆಷ್ಟು ಅಪ್ರಾಪ್ತ ಮಕ್ಕಳು ಅಪಘಾತಕ್ಕೆ ಬಲಿಯಾಗಿದ್ದಾರೆ ಎಂಬ ಬಡ್ಗಿೆ ತಂದೆ-ತಾಯಿ ಜಾಗೃತಿ ವಹಿಸಬೇಕು. ಅಪ್ರಾಪ್ತ ಮಕ್ಕಳಿಗೆ ವಾಹನ ಪರವಾನಿಗಿ ಇಲ್ಲದೆ ವಾಹನಗಳನ್ನು ನೀಡುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ಇದರಡಿ ೨೫,೦೦೦ ರು. ದಂಡ ಹಾಗೂ ಪೋಷಕರಿಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು ಎಂದರು.

ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ಆಟೋ ಚಾಲಕರು ತಮ್ಮ ಸಹೋದ್ಯೋಗಿಗಳಿಗೆ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸಬೇಕು. ಸಿಗ್ನಲ್‌ಗಳನ್ನು ಜಂಪ್ ಮಾಡಿ ಕಷ್ಟಪಟ್ಟು ದುಡಿದ ಹಣವನ್ನು ದಂಡಕ್ಕೆ ನೀಡಬೇಡಿ. ಕಾನೂನು ಸೇವಗಳ ಪ್ರಾಧಿಕಾರದ ಮೂಲಕ ಕಳೆದ ಎರಡು ಲೋಕ ಅದಾಲತ್‌ಗಳಲ್ಲಿ ಸಂಚಾರಿ ದಂಡವನ್ನು ಶೇ ೫೦ ರಷ್ಟು ಪಾವತಿ ಮಾಡುವಂತೆ ಅವಕಾಶ ಅರ್ಪಿಸಲಾಯಿತು ಸಾಕಷ್ಟು ಜನರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡವನ್ನು ತೆತ್ತಿದರು ಎಂದರು.

ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ಸರ್ಕಾರಕ್ಕೆ ದಂಡವನ್ನು ಕಟ್ಟುವ ಅನಿವಾರ್ಯತೆ ಇರುವುದಿಲ್ಲ. ವಾಹನ ಚಲಾವಣೆ ಮಾಡುವಾಗ ಎಚ್ಚರಿಕೆ ವಹಿಸಿ ಜಾಗೃತವಾಗಿ ವಾಹನ ಚಲಾಯಿಸಿ. ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತಗಳನ್ನು ಕಡಿಮೆ ಮಾಡೋಣ ಎಂದು ಸಲಹೆ ನೀಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಈ.ಸಿ.ತಿಮ್ಮಯ್ಯ ಮಾತನಾಡಿ, ಜಿಲ್ಲೆಯಲ್ಲಿ ೨೦೨೫ ನೇ ಸಾಲಿನಲ್ಲಿ ೪೯೬ ಮಾರಣಾಂತಿಕ ಅಪಘಾತಗಳು ಸಂಭವಿಸಿ ೫೪೭ ಜನರು ಸಾವನ್ನಪ್ಪಿದ್ದಾರೆ. ೩೦೦೦ಕ್ಕೂ ಹೆಚ್ಚು ಸಣ್ಣಪುಟ್ಟ ಅಪಘಾತಗಳು ಸಂಭವಿಸಿದೆ. ಇದರಿಂದ ಅನೇಕರು ಕಾಲು, ಕೈ, ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ಇವೆಲ್ಲ ಪ್ರಕರಣಗಳನ್ನು ಅವಲೋಕಿಸಿದಾಗ ಹೆಚ್ಚಿನ ಪ್ರಕರಣಗಳಲ್ಲಿ ಯುವಜನತೆ ಅಪಘಾತಗಳಿಗೆ ಒಳಗಾಗಿದ್ದಾರೆ ಎಂದರು.

ಅನೇಕ ಅಪಘಾತಗಳು ಸಂಚಾರಿ ನಿಯಮಗಳನ್ನು ಪಾಲಿಸದೆ ಹೋದ ಸಂದರ್ಭದಲ್ಲಿ ಸಂಭವಿಸಿದೆ. ವಾಹನ ಚಲಾಯಿಸುವಾಗ ನಾವು ನಮ್ಮ ಬಗ್ಗೆ ಯೋಚಿಸಬೇಕು ಹಾಗೂ ನಮ್ಮ ಕುಟುಂಬದ ಕುರಿತಾಗಿಯೂ ಯೋಚಿಸಬೇಕು. ವಾಹನವನ್ನು ನಿಧಾನವಾಗಿ ಚಲಾಯಿಸಬೇಕು. ಅತಿಯಾದ ವೇಗದಲ್ಲಿ ವಾಹನ ಚಲಾಯಿಸುವುದರಿಂದ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೂ ಅಪಾಯ ಉಂಟಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ೧೮ ವರ್ಷದ ಬಳಿಕ ವಾಹನಗಳನ್ನು ನೀಡುವಂತೆ ಸಲಹೆ ನೀಡಿದರು.

ಪ್ರಾದೇಶಿಕ ಸಾರಿಗೆ ನಂತರ ರಸ್ತೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸದಂತೆ ಪ್ರಮಾಣವಚನ ಬೋಧಿಸಿ. ಪ್ರಾದೇಶಿಕ ಸಾರಿಗೆ ಕಚೇರಿಯ ಆವರಣದಲ್ಲಿ ಸಸಿಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ಮೋಟಾರ್ ವಾಹನ ಅಧೀಕ್ಷಕರಾದ ಚಿಕ್ಕಮಾದೇಗೌಡ, ಅಶೋಕ್, ನಿವೃತ್ತ ಅಧೀಕ್ಷಕ ಪ್ರಸಾದ್ ಮಂಗಲ ಯೋಗೇಶ್ ಇತರರಿದ್ದರು.