ಸಾರಾಂಶ
ರಾಯಚೂರು: ಮರ್ಯಾದಪುರುಷೋತ್ತಮ ಶ್ರೀರಾಮ ಜನ್ಮಭೂಮಿಯಾದ ಸುಕ್ಷೇತ್ರ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶ್ರೀರಾಮೋತ್ಸವ ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಭಾರತ ದೇಶಕ್ಕೆ ಐತಿಹಾಸಿಕ ದಿನವಾದ ಸೋಮವಾರ ಬಾಲರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಕೈಂಕಾರ್ಯಗಳು ಜರುಗುತಿದ್ದ ಸಮಯದಲ್ಲಿ ರಾಯಚೂರು ನಗರ ಸೇರಿ ಮಾನ್ವಿ, ಸಿರವಾರ, ದೇವದುರ್ಗ, ಲಿಂಗಸುಗೂರು, ಮಸ್ಕಿ ಮತ್ತು ಸಿಂಧನೂರು ತಾಲೂಕುಗಳ ಪಟ್ಟಣ, ಹೋಬಳಿ ಹಾಗೂ ಗ್ರಾಮೀಣ ಭಾಗದಲ್ಲಿ ಶ್ರೀರಾಮ ದೇವರ ಹಾಗೂ ಆಂಜನೇಯ ಸ್ವಾಮಿಗಳ ದೇವಸ್ಥಾನ ಸೇರಿದಂತೆ ಹಿಂದೂ ಧಾರ್ಮಿಕ-ಆಧ್ಯಾತ್ಮಿಕ ಕೇಂದ್ರಗಳಲ್ಲಿ, ಮಠ-ಮಾನ್ಯಗಳಲ್ಲಿ ಮತ್ತು ಮನೆ ಮನಗಳಲ್ಲಿ ಶ್ರೀರಾಮನ ಸ್ಮರಣೆ ಝೇಂಕಾರ ಭಕ್ತಿ-ಭಾವನೆಯ ಕರುಣೆ ಪಸರಿಸುವಂತೆ ಮಾಡಿತ್ತು.ದೊಡ್ಡ ಹಬ್ಬವೇ ಸರಿ: ಪ್ರತಿ ವರ್ಷ ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಾದ ಸಂಕ್ರಾಂತಿ, ಯುಗಾದಿ, ಗಣೇಶ ಚತುರ್ಥಿ, ರಾಮನವವಿ, ಕೃಷ್ಣ ಜನ್ಮಾಷ್ಠಮಿ, ದಸರಾ, ದೀಪಾವಳಿಯಂತೆ ಅಯೋಧ್ಯೆಯಲ್ಲಿ ರಾಮನ ಮಂದಿರದ ಲೋಕಾರ್ಪಣೆ ನಿಮಿತ್ತ ಧಾರ್ಮಿಕ ಕೇಂದ್ರಗಳು ಕೇಸರಿಮಯಗೊಂಡಿದ್ದವು. ಪ್ರಮುಖ ರಸ್ತೆ, ವೃತ್ತಗಳಲ್ಲಿ ಫ್ಲೇಕ್ಸ್ ಬ್ಯಾನರ್‌ಗಳ ಅಬ್ಬರ, ಗುಡಿ-ಗುಂಡಾರಗಳಲ್ಲಿ ಜೈ ಶ್ರೀರಾಮ್ ಘೋಷಣೆ, ಮೆರವಣಿಗೆ, ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆದಿದ್ದು, ನೋಡಿದರೆ ರಾಮ ಮಂದಿರ ಲೋಕಾರ್ಪಣೆಯು ಸಹ ದೊಡ್ಡ ಹಬ್ಬವೇ ಸರಿ ಎನ್ನುವಂತೆ ಭಾಸಗೊಂಡಿತು.
ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿರುವ ರಾಮಮಂದಿರ, ಕೋದಂಡರಾಮ, ರಾಯರ ಮಠ ಸೇರಿದಂತೆ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ಪುನಷ್ಕಾರಗಳು ನಡೆದವು, ಜನರು ಗುಡಿಗಳಿಗೆ ತೆರಳಿ ರಾಮನ ದರ್ಶನ ಪಡೆದರು.ನಗರದ ವೀರಸಾವರ್ಕರ್ ವೃತ್ತದ ಸಮೀಪದಲ್ಲಿ ಥರ್ಮಕೋಲ್ ಬಳಸಿ ಅಯೋಧ್ಯೆಯ ರಾಮ ಮಂದಿರದ ಐಡಿಯಲ್ ನಿರ್ಮಿಸಲಾಗಿತ್ತು ಅದರ ಪಕ್ಕದಲ್ಲಿ ಆಂಜನೇಯಸ್ವಾಮಿ ಮೂರ್ತಿ ಮತ್ತೊಂದು ಬದಿಯಲ್ಲಿ ರಾಯಚೂರು ನಗರದ ಐತಿಹಾಸಿಕ ಕುರುವು ಆನೆಯನ್ನು ವಿವಿಧ ಬಗೆಯ ಹೂವುಗಳಿಂದ ನಿರ್ಮಿಸಲಾಗಿತ್ತು. ಇದರ ಜೊತೆಗೆ ಅಯೋಧ್ಯೆ ಮಂದಿರ ಲೋಕಾರ್ಪಣೆ ನೇರಪ್ರಸಾದ ವ್ಯವಸ್ಥೆಯನ್ನು ಮಾಡಿ, ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ನಗರ ಯಾದವ ಸಮಾಜದ ಆವರಣದಲ್ಲಿರುವ ಕೃಷ್ಣನ ಗುಡಿ ಮುಂಭಾಗದಲ್ಲಿ ಶ್ರೀರಾಮೋತ್ಸವ ಹಿನ್ನೆಲೆಯಲ್ಲಿ ಹೋಮ-ಹವನ ಕಾರ್ಯಕ್ರಮವು ನಡೆಯಿತು. ಇದೇ ವೇಳೆ ಶ್ರೀರಾಮನ ಮೂರ್ತಿಗೆ ಪುಷ್ಪಾರ್ಚನೆ ಸೇವೆ ಮಾಡಲಾಯಿತು. ಅದೇ ರೀತಿ ಸ್ಥಳೀಯ ಗಂಗಾನಿವಾಸ ಬಳಿಯ ಮುಂಗ್ಲಿ ಪ್ರಾಣದೇವರ ಗುಡಿಯಲ್ಲಿ ಹೋಮ-ವಿಶೇಷ ಪೂಜೆ, ಕೈಂಕಾರ್ಯಗಳು ಜರುಗಿದವು. ಗುಡಿ ಸೇರಿ ಅಲ್ಲಿಯ ಸುಮಾರು 25ಕ್ಕೂ ಹೆಚ್ಚು ಅಡಿ ಎತ್ತರದ ಶ್ರೀರಾಮ ಮೂರ್ತಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಸ್ಥಳೀಯ ರಾಯರ ಮಠದಲ್ಲಿ ವೇದ-ಮಂತ್ರಗಳ ಪಠಣೆ, ವಿಶೇಷ ಪೂಜೆ ಸೇವೆಗಳು ನಡೆದವು.ಮಂತ್ರಾಲಯದಲ್ಲಿ: ಸುಕ್ಷೇತ್ರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀರಾಮೋತ್ಸವ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಶೋಭಾಯಾತ್ರೆಯು ನಡೆಯಿತು. ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಶೋಭಾಯಾತ್ರೆಗೆ ಚಾಲನೆ ನೀಡಿ ಬಳಿಕ ಇತ್ತೀಚಗಷ್ಟೇ ಪ್ರತಿಷ್ಠಾಪಿಸಿದ 36 ಅಡಿ ಎತ್ತರದ ಅಭಯ ರಾಮನ ಮೂರ್ತಿಗೆ ವಿಶೇಷ ಪೂಜೆಯನ್ನು ಮಾಡಿ ಭಕ್ತರಿಗೆ ಆಶೀರ್ವಚನವನ್ನು ನೀಡಿದರು. ಇಡೀ ದಿನ ಟಿವಿಗಳ ಮುಂದೆ ಕುಳಿತ ಜನರು ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮನ್ನು ವೀಕ್ಷಿಸಿ ಪುನಿತರಾದರು. ಸಂಜೆ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಶ್ರೀರಾಮೋತ್ಸವದ ದೀಪವನ್ನು ಹಚ್ಚಿ, ಪಟಾಕಿ ಸಿಡಿಸಿ ಪ್ರಧಾನಿ ಮೋದಿ ಕರೆಯಂತೆ ದೀಪಾವಳಿ ಆಚರಿಸಿದರು.
ಭಾವೈಕ್ಯತೆಯ ಬೆಸುಗೆ: ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆಯು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿ ಭಾವೈಕ್ಯತೆಯ ಬೆಸುಗೆಗೆ ಕಾರಣವಾಯಿತ್ತು. ಮಂತ್ರಾಲಯದಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಮುಸ್ಲಿಂ ಬಾಂಧವರು ಶ್ರೀರಾಮಚಂದ್ರರ ಬಾವುಟವನ್ನು ಹಿಡಿದು, ಜೈ ಶ್ರೀರಾಮ್ ಘೋಷಣೆ ಕೂಗಿ ಇಡೀ ಯಾತ್ರೆಯಲ್ಲಿ ಹೆಜ್ಜೆಹಾಕಿದರು. ಅದೇ ರೀತಿ ರಾಯಚೂರು ನಗರದ ಪಟೇಲ್ ರಸ್ತೆಯ ಬಲರಾಮ ಗುಡಿಯಿಂದ ನಡೆದ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಸಹೋದರರು ಪ್ರಸಾದವನ್ನು ಸ್ವೀಕರಿಸಿ ಭಕ್ತಿಯ ಭಾವೈಕೆತೆಯನ್ನು ಪ್ರದರ್ಶಿಸಿದರು.