ಎಂ.ಕೆ.ಹರಿಚರಣತಿಲಕ್‌

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕೆಶಿಪ್ ಅಧಿಕಾರಿಗಳ ಅಸಡ್ಡೆಯಿಂದ ಮಾಗಡಿ-ಜಲಸೂರು ರಾಜ್ಯ ಹೆದ್ದಾರಿ ತಾಲೂಕು ವ್ಯಾಪ್ತಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಮೃತ್ಯು ಮಾರ್ಗವಾಗಿ ಬದಲಾಗುತ್ತಿದೆ.

ಬೆಂಗಳೂರು ಮಹಾ ನಗರದ ಕಡೆಯಿಂದ ಕೇರಳದ ಜಲಸೂರು ತಲುಪುವ ರಾಜ್ಯ ಹೆದ್ದಾರಿ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 50 ಕಿ.ಮೀ ಉದ್ದ ಹಾದುಹೋಗಿದೆ. ತಾಲೂಕು ವ್ಯಾಪ್ತಿಯಲ್ಲಿ ಬಹತೇಕ ಕಾಮಗಾರಿ ಮುಗಿದಿದ್ದು ನಿತ್ಯ ನೂರಾರು ವಾಹನಗಳು ರಸ್ತೆಯಲ್ಲಿ ಅತಿ ವೇಗವಾಗಿ ಸಂಚರಿಸುತ್ತಿವೆ. ಗ್ರಾಮೀಣ ಪ್ರದೇಶದ ರೈತರು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಯಲ್ಲಿರುವ ತಮ್ಮ ಕೃಷಿ ಜಮೀನುಗಳಿಗೆ ತೆರಳಲು ಅಲ್ಲಲ್ಲಿ ಅಂಡರ್‌ಪಾಸ್ ಗಳನ್ನು ನಿರ್ಮಿಸಿದ್ದರೂ ಅವು ವೈಜ್ಞಾನಿಕವಾಗಿ ರೂಪುಗೊಳ್ಳದ ಕಾರಣ ಅವು ರೈತರ ಪಾಲಿಗೆ ಸಮಸ್ಯೆಯಾಗಿಯೇ ಉಳಿದಿವೆ.

ಜಲಸೂರು ರಾಜ್ಯ ಹೆದ್ದಾರಿ ಪಟ್ಟಣದ ಹೊರವಲಯದಲ್ಲಿ ಮೈಸೂರು-ಅರಸೀಕೆರೆ ಮುಖ್ಯ ರಸ್ತೆಯನ್ನು ಸಂಪರ್ಕಿಸುತ್ತದೆ. ಈ ಭಾಗದಲ್ಲಿ ಕೆಶಿಪ್ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಒಂದು ಸರ್ಕಲ್ ನಿರ್ಮಿಸಿದೆ. ಈ ವೃತ್ತಕ್ಕೆ ಹೊಂದಿಕೊಂಡಂತೆ ಹೇಮಾವತಿ ವಿತರಣಾ ನಾಲೆ ಹಾದುಹೋಗಲು ಕೆಶಿಪ್ ಒಂದು ಮೇಲ್ಗಾಲುವೆ ನಿರ್ಮಿಸಿದ್ದು ರಸ್ತೆಯ ಎರಡೂ ಬದಿಯಲ್ಲಿ ಸೈಡ್ ವಾಲ್ ನಿರ್ಮಿಸಿದೆ. ಕಳಪೆ ಕಾಮಗಾರಿಯಿಂದಾಗಿ ನಾಲೆಯಲ್ಲಿ ನೀರು ಹರಿಯುವ ಸಂದರ್ಭದಲ್ಲಿ ನೀರು ಸೈಡ್‌ವಾಲ್ ಮೂಲಕ ಲೀಕೇಜ್ ಆಗುತ್ತಿದೆ. ಕೆಶಿಪ್ ಲೀಕೇಜ್ ಸರಿಪಡಿಸುವ ಕೆಲಸವನ್ನು ಇದುವರೆಗೂ ಮಾಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.


ಈ ನಡುವೆ ಸೈಡ್ ವಾಲ್‌ನ ರಸ್ತೆಯಂಚಿನಲ್ಲಿ ನೀರು ಸುಲಲಿತವಾಗಿ ಹರಿದು ಹೋಗಲು ಕಿರು ಚರಂಡಿ ನಿರ್ಮಿಸಿದೆ. ಚಲಿಸುವ ವಾಹನಗಳು ಅರಿವಿಲ್ಲದೆ ಕಿರು ಚರಂಡಿಗೆ ಬೀಳದಂತೆ ಕಿರು ಚರಂಡಿಯ ಉದ್ದಕ್ಕೂ ಕಲ್ಲಿನ ತಡೆ ನಿರ್ಮಿಸಿದೆ. ಆದರೆ ಕಲ್ಲಿನ ತಡೆಗಳು ಕುಸಿದು ಕಿರು ಚರಂಡಿಗೆ ಬಿದ್ದಿವೆ. ಕೆಶಿಪ್ ಅಧಿಕಾರಿಗಳು ಇದುವರೆಗೂ ಸಮಸ್ಯೆಯನ್ನು ಸರಿಪಡಿಸಿ ವಾಹನಗಳ ಸುಗಮ ಸಂಚಾರಕ್ಕೆ ಶಾಸಕ ಹೆಚ್.ಟಿ.ಮಂಜು ಇತ್ತೀಚೆಗೆ ಕೆಶಿಪ್‌ನ ಉನ್ನತ ಅಧಿಕಾರಿಗಳ ತಂಡವನ್ನು ಕರೆತಂದು ಜಲಸೂರು ಹೆದ್ದಾರಿಯ ನೈಜ ಸಮಸ್ಯೆಗಳನ್ನು ಪರಿಚಯಿಸಿ ಅವುಗಳನ್ನು ಸರಿಪಡಿಸುವಂತೆ ಆಗ್ರಹಿಸಿದ್ದರು. ಶಾಸಕರ ಪರಿಶೀಲನೆಯ ಅನಂತರ ಒಂದಷ್ಟು ಕಡೆ ಸರಿಪಡಿಸುವ ನಾಟಕ ಮಾಡಿದ ಅಧಿಕಾರಿಗಳು ಮುಖ್ಯ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನವನ್ನು ಇದುವರೆಗೂ ಮಾಡಿಲ್ಲ.

ಕೆಶಿಪ್ ರಸ್ತೆಯಿಂದಾಗಿ ತಾಲೂಕು ವ್ಯಾಪ್ತಿಯಲ್ಲಿ ಇದುವರೆಗೂ ಹತ್ತಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಜನರ ಪಾಲಿಗೆ ಮೃತ್ಯು ಸಂಚಾರ ಮಾರ್ಗವಾಗುತ್ತಿರುವ ಜಲಸೂರು ಹೆದ್ದಾರಿಯನ್ನು ಕೆಶಿಪ್ ಅಧಿಕಾರಿಗಳು ಕರ್ತವ್ಯ ಪ್ರಜ್ಞೆ ಮೆರೆದು ಸಂಚಾರ ಸ್ನೇಹಿಯನ್ನಾಗಿಸಬೇಕಾಗಿದೆ.ಎಂಜಿನಿಯರ್‌ಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಜನರ ಜೀವನ್ನು ನಿರ್ಲಕ್ಷಿಸಿ ಕಳಪೆ ಕಾಮಗಾರಿಯ ಮೂಲಕ ಜನರ ಪ್ರಾಣ ತೆಗೆಯುತ್ತಿರುವ ಕೆಶಿಪ್ ಎಂಜಿನಿಯರ್‌ಗಳ ವಿರುದ್ಧ ಕ್ರಮ ಜರುಗಿಸುವಂತೆ ತಾಲೂಕು ಒಕ್ಕಲಿಗರ ವೇದಿಕೆಯ ಕಾರ್ಯದರ್ಶಿ ಗೌರೀಶ್ ಆಗ್ರಹಿಸಿದ್ದಾರೆ. ಜಲಸೂರು ಹೆದ್ದಾರಿ ಹಾದು ಹೋಗಿರುವ ಕಡೆಯಲ್ಲಿ ರಸ್ತೆಯ ಅಕ್ಕ-ಪಕ್ಕದ ಗ್ರಾಮಗಳ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಹತ್ತಾರು ರೈತರ ಮಕ್ಕಳು ಹೆದ್ದಾರಿಗೆ ಬಲಿಯಾಗಿದ್ದಾರೆ. ಕೆಶಿಪ್ ಅಧಿಕಾರಿಗಳು ಸಮಸ್ಯೆಗಳನ್ನು ಗಮನಿಸಿ ಅವುಗಳನ್ನು ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ ಎಂದು ದೂರಿರುವ ಗೌರೀಶ್ ಕರ್ತವ್ಯ ಲೋಪ ಎಸಗಿರುವ ಎಂಜಿನಿಯರ್‌ಗಳ ವಿರುದ್ಧ ಕ್ರಮ ಜರುಗಿಸಿ ಹೆದ್ದಾರಿ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿದ್ದಾರೆ.