ಸಾರಾಂಶ
ರಾಮಮೂರ್ತಿ ನವಲಿ
ಗಂಗಾವತಿ:ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಈ ಘಟನೆ ಬೆನ್ನಲ್ಲೆ ಇದೀಗ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದರೆ ಸ್ಪರ್ಧಿಸಲು ಆಕಾಂಕ್ಷಿಗಳು ಚಿಂತಿಸಿದ್ದಾರೆ. ಈ ಕುರಿತು ತಮ್ಮ ಕಾರ್ಯಕರ್ತರು ಹಾಗೂ ತಮ್ಮ ಬೆಂಬಲಿಗರೊಂದಿಗೆ ಅನೌಪಚಾರಿಕೆ ಚರ್ಚೆಗಳು ಸಹ ನಡೆದಿವೆ.2023ರಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಕೆಆರ್‌ಪಿಪಿ ಪಕ್ಷ ಕಟ್ಟಿ ಸ್ಪರ್ಧಿಸಿ ಗೆಲುವು ಸಾಧಿಸಿ ಕ್ಷೇತ್ರದ ಜನತೆಗೆ ಮೂಲಭೂತ ಸೌಕರ್ಯ ಮತ್ತು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟಿದ್ದ ಜನಾರ್ದನ ರೆಡ್ಡಿಯ ಕನಸುಗಳು ಭಗ್ನಗೊಂಡಿವೆ. ಪ್ರಮುಖವಾಗಿ ಆಂಜನೇಯ ಜನ್ಮ ಸ್ಥಳ ಅಂಜನಾದ್ರಿ ಅಭಿವೃದ್ಧಿ, ಗಂಗಾವತಿಯಿಂದ ಅಂಜನಾದ್ರಿ ವರಿಗೆ ಡಬಲ್ ರಸ್ತೆ, ಅಮೃತ ಸಿಟಿ ಯೋಜನೆ, ವಿದ್ಯುತ್ ದೀಪ ಸೇರಿದಂತೆ ಹಲವಾರು ಯೋಜನೆಗಳನ್ನು ರೂಪಿಸಿದ್ದರು. ಈಗಾಗಲೇ ರಾಜ್ಯ ಸರ್ಕಾರದ ಕೆಲ ಯೋಜನೆಗಳು ಪ್ರಗತಿಯಲ್ಲಿದ್ದರೂ ಸಹ ಜನಾರ್ದನ ರೆಡ್ಡಿ ಅವರು ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರಿಂದ ವಿವಿಧ ಯೋಜನೆಗಳು ಕಾರ್ಯರೂಪಕ್ಕೆ ಬರಬಹುದೇ ಎನ್ನುವ ಪ್ರಶ್ನೆ ಜನರಲ್ಲಿ ಉಂಟಾಗಿದೆ.
ಉಪ ಚುನಾವಣೆ ನಿರೀಕ್ಷೆ:2023ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಪರಾಭಗೊಂಡಿರುವ ಅಭ್ಯರ್ಥಿಗಳು ಇದೀಗ ಉಪ ಚುನಾವಣೆ ಎದುರು ನೋಡುತ್ತಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಮಾಜಿ ಶಾಸಕ ಬಿಜೆಪಿಯ ಪರಣ್ಣ ಮುನವಳ್ಳಿ, ವಿಪ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಶ್ರೀನಾಥ, ಬಿಜೆಪಿಯ ನೆಕ್ಕಂಟಿ ಸೂರಿಬಾಬು ಉಪಚುನಾವಣೆ ಎದುರಾದರೆ ಸ್ಪರ್ಧಿಸುವ ತಯಾರಿ ನಡೆಸಿದ್ದಾರೆ.ಕಳೆದ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ 66,213 ತಮ ಪಡೆದು 8,117 ಮತಗಳ ಅಂತರದಿಂದ ಜಯಗಳಿಸಿದ್ದರು. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 57947 ಮತ ಪಡೆದು ಪರಾಭವಗೊಂಡಿದ್ದರು, ಅದರಂತೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಬಿಜೆಪಿಯಿಂದ ಸ್ಪರ್ಧಿಸಿ 29,367 ಮತ ಪಡೆದಿದ್ದರು. ಒಟ್ಟು 11 ಅಭ್ಯರ್ಥಿಗಳು ಸ್ಪರ್ಧಿಯಲ್ಲಿದ್ದರು.ತಡೆಯಾಜ್ಞೆ ಸಿಕ್ಕರೆ ನಿರಾಸೆ:
ಸಿಬಿಐ ಕೋರ್ಟ್‌ನಿಂದ ಶಿಕ್ಷೆಗೆ ಗುರಿಯಾಗಿರುವ ಜನಾರೆಡ್ಡಿ ಶಿಕ್ಷೆಗೆ ತಡೆಯಾಜ್ಞೆ ತಂದರೆ ಅನರ್ಹತೆಯಿಂದ ಪಾರಾಗುತ್ತಾರೆ. ಆಗ ಉಪ ಚುನಾವಣೆಯ ನಿರೀಕ್ಷೆಯಲ್ಲಿದ್ದವರ ಕನಸು ನುಚ್ಚುನೂರಾಗಲಿದೆ.ಒಟ್ಟಿನಲ್ಲಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಸೇರಿದಂತೆ ಮತದಾರರಲ್ಲಿ ಉಪ ಚುನಾವಣೆಯ ಚರ್ಚೆಯನ್ನು ಹುಟ್ಟುಹಾಕಿರುವುದು ಸತ್ಯ.ಒಂದು ವೇಳೆ ಉಪ ಚುನಾವಣೆ ನಡೆದರೆ ಪಕ್ಷದ ವರಿಷ್ಠರು ಮತ್ತು ತಮ್ಮ ತಂದೆ, ಮಾಜಿ ಸಂಸದ ಎಚ್.ಜಿ.ರಾಮುಲು ಅವರ ಸೂಚನೆ ಮೇರೆಗೆ ಸ್ಪರ್ಧಿಸುವೆ. ಚುನಾವಣೆಗಿಂತ ಕ್ಷೇತ್ರದ ಅಭಿವೃದ್ಧಿ ಮುಖ್ಯವಾಗಿದೆ.ಎಚ್.ಆರ್. ಶ್ರೀನಾಥ ವಿಪ ಮಾಜಿ ಸದಸ್ಯ
ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಪ್ರಕಟವಾಗಿರುವ ಶಿಕ್ಷೆಗೆ ತಡೆಯಾಜ್ಞೆ ಸಿಕ್ಕು ಜೈಲಿನಿಂದ ಹೊರಬಂದು ಶಾಸಕ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಹೀಗಾಗಿ ಉಪ ಚುನಾವಣೆ ನಡೆಯುವ ಪ್ರವೇಯವೇ ಬರುವುದಿಲ್ಲ.ಬಸವರಾಜ್ ದಢೇಸೂಗೂರು ಬಿಜೆಪಿ ಜಿಲ್ಲಾಧ್ಯಕ್ಷ ಕೊಪ್ಪಳ