ಸಾರಾಂಶ
ಕನ್ನಡಪ್ರಭವಾರ್ತೆ ಪಾವಗಡ
ಸ್ಥಳೀಯ ಠಾಣೆಗಳಲ್ಲಿ ಪೊಲೀಸರ ಪಕ್ಷಪಾತ ಧೋರಣೆ ಆರೋಪಿಸಿ ತಾಲೂಕು ಜೆಡಿಎಸ್ ವತಿಯಿಂದ ಸೋಮವಾರ ಕರೆ ನೀಡಿದ್ದ ಪ್ರತಿಭಟನೆಯನ್ನು ಹಿಂಪಡೆದಿದ್ದು ಇದರ ಬೆನ್ನಲೇ ನಗರದ ಎಸ್‌ಎಸ್‌ಕೆ ಬಯಲು ರಂಗಮಂದಿರಲ್ಲಿ ತಾಲೂಕು ಜೆಡಿಎಸ್ ಮುಖಂಡರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಅವರು ಸಮಸ್ಯೆ ಕುರಿತು ಮಾಹಿತಿ ಪಡೆದ ಬಳಿಕ ಚರ್ಚಿಸಿದರು.ಈ ವೇಳೆ ಇಲ್ಲಿನ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ತಾಲೂಕಿನ ಪೊಲೀಸ್ ಠಾಣೆಗಳಲ್ಲಿ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದು ವಿನಾಕಾರಣ ಜೆಡಿಎಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಕಾನೂನು ಪಾಲಿಸಬೇಕಾದ ಪೊಲೀಸರೇ ಕಾನೂನನ್ನು ಉಲ್ಲಂಘಿಸುವುದು ಸರಿಯಲ್ಲ. ಪಾವಗಡ ಸೇರಿ ವೈ.ಎನ್.ಹೊಸಕೋಟೆ, ತಿರುಮಣಿ ಅರಸೀಕೆರೆ ಈ ನಾಲ್ಕು ಪೊಲೀಸ್ ಠಾಣೆಗಳಿದ್ದು ರಾಜಕೀಯ ಹಸ್ತಕ್ಷೇಪ ಬಳಸಿ ಜೆಡಿಎಸ್ ಬೆಂಬಲಿಗ ಹಾಗೂ ಪಕ್ಷದ ಕಾರ್ಯಕರ್ತರ ಮೇಲೆ ವಿನಾಕಾರಣ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ. ಜೆಡಿಎಸ್ ಕಾರ್ಯಕರ್ತರು ದೂರು ನೀಡಿದರೆ ದೂರು ಸ್ವೀಕರಿಸುವುದಿಲ್ಲ. ಆದರೆ ಪಕ್ಷದ ಕಾರ್ಯಕರ್ತ, ಬೆಂಬಲಿಗರ ವಿರುದ್ಧ ಚಿಕ್ಕ, ಪುಟ್ಟ ವಿಚಾರಕ್ಕೆ ದೂರು ನೀಡಿದರೂ ಅದನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ ಸ್ಥಳೀಯ ಶಾಸಕರ ಕೈಗೊಂಬೆಯಂತೆ ಪೊಲೀಸರು ವರ್ತಿಸುತ್ತಿದ್ದು ಇಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ತಾವು ಮಾಹಿತಿ ಪಡೆದು ಸೂಕ್ತ ಕ್ರಮ ಹಾಗೂ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.ಬಳಿಕ ಸ್ಥಳೀಯ ಪೊಲೀಸ್ ಠಾಣೆಗಳ ವೈಖರಿ ಬಗ್ಗೆ ವಿವರಿಸಿ, ನ್ಯಾಯ ಸಮ್ಮತವಾದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಜೆಡಿಎಸ್ ಘಟಕದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ನೀಡಿದರು.
ಈ ವೇಳೆ ಸಮಸ್ಯೆ ಅಲಿಸಿದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಶೋಕ್ ಪ್ರತಿಕ್ರಿಯಿಸಿ ಪೊಲೀಸ್ ಇಲಾಖೆ ನ್ಯಾಯ ಸಮ್ಮತವಾಗಿ ಕೆಲಸ ಮಾಡಬೇಕಿದ್ದು, ಯಾವುದೇ ಸಮಸ್ಯೆಯಿದ್ದಲ್ಲಿ ಬಗೆಹರಿಸಲು ಇಲಾಖೆ ಬದ್ದವಾಗಿದೆ. ಮಟ್ಕಾ, ಇಸ್ಪೀಟ್, ಜೂಜಾಟ, ಬಿಲ್ಲೆ ಎತ್ತುವುದು ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲಿದ್ದೇವೆ. ಯಾವುದೇ ಕಾರಣಕ್ಕೂ ಕಾನೂನು ಬಾಹೀರ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದರು.ಪೊಲೀಸ್ ಠಾಣೆಗಳಲ್ಲಿ ಜನಸ್ನೇಹಿ ವಾತಾವರಣ ಸೃಷ್ಟಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವರ ಸಭೆ ಕರೆದು ಈಗಾಗಲೇ ತಿಳಿಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ. ಯಾವುದೇ ಕಾರಣಕ್ಕೂ ತಾರತಮ್ಯ ಅನುಸರಿಸುವುದಿಲ್ಲ. ಈ ಬಗ್ಗೆ ಮರು ಪರಿಶೀಲನೆ ನಡೆಸಲಾಗುವುದು. ಪಕ್ಷಪಾತ ಧೋರಣೆಗೆ ನಮ್ಮಲ್ಲಿ ಅವಕಾಶವಿಲ್ಲ. ಜಿಲ್ಲೆಯ ಪೊಲೀಸ್ ಇಲಾಖೆಯ ವರಿಷ್ಟಾಧಿಕಾರಿಯಾಗಿ 10 ತಿಂಗಳು ಕಳೆದಿದೆ. ಅಂತಹ ಯಾವುದೇ ಪ್ರವೃತ್ತಿಗೆ ಅವಕಾಶವಿಲ್ಲ. ತೋರುವುದೂ ಇಲ್ಲ. ಸಮಸ್ಯೆ ಇದ್ದಲ್ಲಿ ನನ್ನ ಸಂಖ್ಯೆಗೆ ನೇರವಾಗಿ ಕರೆ ನೀಡಿ ಮಾಹಿತಿ ನೀಡಿ ಎಂದು ಕರೆ ನೀಡಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಅಂಜಿನಪ್ಪ, ನ್ಯಾಯ ಸಮ್ಮತವಾಗಿದ್ದರೂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮನ್ನಣೆ ಇಲ್ಲ. ಪರಿಶೀಲಿಸುವಂತೆ ಎಸ್‌ಪಿಗೆ ಮನವಿ ಮಾಡಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಎನ್.ಎ.ಈರಣ್ಣ ಜೆಡಿಎಸ್ ಕಾರ್ಯಕರ್ತರ ಮೇಲಿನ ಪ್ರಕರಣ ಕುರಿತು ಗಮನ ಸೆಳೆದರು. ಮುಖಂಡ ಬಲರಾಮರೆಡ್ಡಿ, ಕಾರ್ಯಾಧ್ಯಕ್ಷ ಸಾರವಾಟಪುರ ಗೋವಿಂದಬಾಬು, ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್, ತಾ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಂಜುನಾಥ ಚೌದರಿ, ಪಕ್ಷದ ನಾಗಲಮಡಿಕೆ ಹೋಬಳಿ ಅಧ್ಯಕ್ಷ ರಾಜಗೋಪಾಲ್, ವೈ.ಎನ್ .ಹೊಸಕೋಟೆ ಹೋಬಳಿ ಅಧ್ಯಕ್ಷ ಸತ್ಯನಾರಾಯಣ, ನಿಡಗಲ್ ಹೋಬಳಿ ಅಧ್ಯಕ್ಷ ಹನುಮಂತರಾಯಪ್ಪ, ತಾ. ಜೆಡಿಎಸ್ ರೈತ ಘಟಕದ ಅಧ್ಯಕ್ಷ ಗಂಗಾಧರ್ ನಾಯ್ಡ್,ಯುವ ಮುಖಂಡ ನೆರಳೇಕುಂಟೆ ಭರತ್ ಕುಮಾರ್, ಪುರಸಭೆಯ ಮಾಜಿ ಸದಸ್ಯರಾದ ಮನು ಮಹೇಶ್, ಜಿ.ಎ.ವೆಂಕಟೇಶ್, ಗುಟ್ಟಹಳ್ಳಿ ಮಣಿ, ನಾಗೇಂದ್ರ, ನಾರಾಯಣಪ್ಪ ಇತರೆ ಆನೇಕ ಮಂದಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.