ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ನಗರದಾದ್ಯಂತ ಪ್ರಮುಖ ಸ್ಥಳಗಳಲ್ಲಿ ರಸ್ತೆ ಬದಿ ಗೂಡಂಗಡಿಗಳಲ್ಲಿ ಆಹಾರ ಪದಾರ್ಥ ಸೇರಿದಂತೆ ಬೀದಿ ವ್ಯಾಪಾರ ಹೆಚ್ಚುತ್ತಿದೆ. ಇದರಿಂದ ಸಾರ್ವಜನಿಕರಿಗೆ ಓಡಾಟಕ್ಕೆ ಮಾತ್ರವಲ್ಲದೆ, ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿರುವ ಬಗ್ಗೆ ದೂರುಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜು.29ರಿಂದ ಟೈಗರ್ ಕಾರ್ಯಾಚರಣೆ ಪುನರಾರಂಭಿಸಲಾಗುವುದು ಎಂದು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.ಮೇಯರ್ ಕೊಠಡಿಯಲ್ಲಿ ಬುಧವಾರ ಫೋನ್ ಇನ್ ಕಾರ್ಯಕ್ರಮದಲ್ಲಿ ಈ ಕುರಿತು ಹಲವಾರು ದೂರುಗಳ ಹಿನ್ನೆಲೆಯಲ್ಲಿ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದ್ದಾರೆ.ತಳ್ಳು ಗಾಡಿಗಳನ್ನು ಹೊರತುಪಡಿಸಿ ನಗರದ ವಿವಿಧ ಕಡೆಗಳಲ್ಲಿ ರಸ್ತೆ ಬದಿಗಳಲ್ಲಿ ಟೆಂಟ್ ಸೇರಿದಂತೆ ಶಾಶ್ವತ ವ್ಯವ್ಥೆಯೊಂದಿಗೆ ವ್ಯಾಪಾರ ನಡೆಸುತ್ತಿರುವವರನ್ನು ಕಟ್ಟುನಿಟ್ಟಾಗಿ ತೆರವುಗೊಳಿಸಲಾಗುವುದು ಎಂದು ಅವರು ಹೇಳಿದರು.
ನಗರ ವ್ಯಾಪ್ತಿಯ ಲೇಡಿಗೋಶನ್ ಬಳಿ ಎರಡು ಕಡೆ, ಸುರತ್ಕಲ್, ಮಣ್ಣಗುಡ್ಡ, ಕಾವೂರು ಸೇರಿ ಐದು ಕಡೆ ವ್ಯಾಪಾರ ವಲಯಗಳನ್ನು (ವೆಂಡಿಂಗ್ ಝೋನ್) ಗುರುತಿಸಲಾಗಿದೆ. ಒಂದು ತಿಂಗಳೊಳಗೆ ಬೀದಿ ಬದಿ ವ್ಯಾಪಾರಿಗಳು ಈ ಜಾಗದಲ್ಲಿಯೇ ವ್ಯಾಪಾರ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.ಮಣ್ಣಗುಡ್ಡ ಪ್ರದೇಶದ ವ್ಯಾಪಾರ ವಲಯಕ್ಕೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿದೆ ಎಂದು ಸ್ಥಳೀಯ ಕಾರ್ಪೊರೇಟರ್ ಈ ಸಂದರ್ಭ ತಿಳಿಸಿದರು.
ಇತ್ತೀಚೆಗೆ ಕೆಪಿಟಿ ಬಳಿ ಬೀದಿಬದಿ ವ್ಯಾಪಾರವನ್ನು ತೆರವುಗೊಳಿಸಿದಾಗ ಕದ್ರಿ ಠಾಣೆಯ ಪೊಲೀಸರೇ ಪಾಲಿಕೆ ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸುವುದಾಗಿ ಹೇಳಿದ್ದಾರೆ. ಪೊಲೀಸರು ಸಹಕರಿಸದಿದ್ದರೆ ಯಶಸ್ವಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗದು. ಹೀಗಾಗಿ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿ ಪೊಲೀಸ್ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದರು.ಅನುದಾನ ಸಿಕ್ಕಿದರೆ ಕೆಲಸ:
ಗುಜ್ಜರೆಕೆರೆ ಅಭಿವೃದ್ಧಿಯಾಗಿದ್ದರೂ ತೀರ್ಥ ಕೆರೆಗೆ ಮುಕ್ತಿ ಸಿಕ್ಕಿಲ್ಲ. ಚರಂಡಿ ನೀರು ಕೆರೆಗೆ ಸೇರುವುದು ನಿಂತಿಲ್ಲ ಎಂದು ನೇಮು ಕೊಟ್ಟಾರಿ ಎಂಬವರು ದೂರಿದಾಗ, ಮಹಾತ್ಮಗಾಂಧಿ ವಿಕಾಸ ಯೋಜನೆಯಡಿ ಈ ಕೆರೆಯ ಸಮಸ್ಯೆ ಬಗೆಹರಿಸಲು ಯೋಜನೆ ಇದೆ. ಆದರೆ ರಾಜ್ಯ ಸರ್ಕಾರದಿಂದ ಅನುದಾನ ಬಾರದೆ ತೊಂದರೆ ಆಗಿದೆ. ಇದಕ್ಕೆ ಶೀಘ್ರವೇ ಅಗತ್ಯ ಹಣ ಮೀಸಲಿಟ್ಟು ಕ್ರಮ ವಹಿಸುವುದಾಗಿ ಮೇಯರ್ ಹೇಳಿದರು.ವಾಮಂಜೂರಿನ ತಿರುವೈಲ್ ವಾರ್ಡ್‌ನಲ್ಲಿ ಡ್ರೈನೇಜ್ ವ್ಯವಸ್ಥೆ ಆಗಿ ಎರಡು ವರ್ಷವಾಗಿದ್ದರೂ ಮನೆಗಳಗೆ ಸಂಪರ್ಕ ಒದಗಿಸಿಲ್ಲ ಎಂದು ಆಸ್ಟಿನ್ ಡಿಸೋಜಾ ದೂರಿದಾಗ, ತಕ್ಷಣ ಕ್ರಮ ವಹಿಸುವುದಾಗ ಮೇಯರ್ ಭರವಸೆ ನೀಡಿದರು.
ರಸ್ತೆ ಬಂದ್ ಮಾಡಿದ ರೈಲ್ವೆ: ಪಡೀಲ್ ಜಲ್ಲಿಗುಡ್ಡ ರಸ್ತೆ ಕಾಮಗಾರಿ ರೈಲ್ವೆಯಿಂದ ನಡೆಯುತ್ತಿದೆ. ಅಲ್ಲಿ ರಸ್ತೆಯನ್ನು ಬಂದ್ ಮಾಡಿದ ಕಾರಣ ಸುಮಾರು 700 ಮನೆಗಳಿಗೆ ತೊಂದರೆಯಾಗುತ್ತಿದೆ ಎಂದು ಕಮಾಲಾಕ್ಷ ಎಂಬವರು ದೂರಿದರು.ಅದು ರೈಲ್ವೆ ಇಲಾಖೆಯ ಆಸ್ತಿ ಆಗಿದ್ದು, ಅವರಿಗೆ ಅಲ್ಲಿ ಕೆಲಸ ಮಾಡುವ ಅಧಿಕಾರ ಇದೆ ಎಂಬುದಾಗಿ ಇತ್ತೀಚೆಗೆ ಸಂಸದರ ನೇತೃತ್ವದ ಸಭೆಯಲ್ಲಿ ರೈಲ್ವೇ ಅಧಿಕಾರಿಗಳು ಉತ್ತರಿಸಿದ್ದಾರೆ. ಈಗಾಗಲೇ ಸ್ಥಳೀಯ ಸಮಸ್ಯೆಗಳ ನಿವಾರಣೆಯ ನಿಟ್ಟಿನಲ್ಲಿ ಎರಡು ಸಮಿತಿಗಳನ್ನು ರಚಿಸಲಾಗಿದ್ದು, ಮುಂದಿನ ತಿಂಗಳು ನಡೆಯಲಿರುವ ಸಭೆಯಲ್ಲಿ ಸಂಸದರು, ಶಾಸಕರ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಮೇಯರ್ ಹೇಳಿದರು.
ಉಪ ಮೇಯರ್ ಸುನೀತಾ, ಆಯುಕ್ತ ಆನಂದ್, ಉಪ ಆಯುಕ್ತ ಗಿರೀಶ್ ನಂದನ್, ಸ್ಥಾಯಿ ಸಮಿತಿ ಅಧ್ಯಕ್ಷರು ಇದ್ದರು. ಎಲೆಕ್ಟ್ರಿಕ್ ರಿಕ್ಷಾ ಪಾರ್ಕಿಂಗ್‌ಗೆ ಒತ್ತಾಯನಗರದಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾಗಳ ನೋಂದಣಿ ಆಗುತ್ತಿದೆ. ಸುಮಾರು 600 ರಷ್ಟು ಎಲೆಕ್ಟ್ರಿಕ್ ಆಟೋರಿಕ್ಷಾಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ದುಡಿಮೆಗೆ ತೊಂದರೆಯಾಗಿದೆ. ಸಾಲದ ಕಂತು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಫೋನ್ ಇನ್ ಕಾರ್ಯಕ್ರಮದ ವೇಳೆ ಹಲವರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಸುಧೀರ್ ಶೆಟ್ಟಿ, ಆರ್‌ಟಿಒ ಹಾಗೂ ಜಿಲ್ಲಾಧಿಕಾರಿ ಮೂಲಕ ವಲಯ ನಿರ್ಧಾರ ಮಾಡಿ ಪರ್ಮಿಟ್ ನೀಡಲಾಗುತ್ತದೆ. ರಿಕ್ಷಾ ಖರೀದಿಸಿದವರು ಎಲ್ಲೂ ಪಾರ್ಕಿಂಗ್ ಮಾಡಬಹುದು. ಸದ್ಯ ನಗರ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್ ರಿಕ್ಷಾಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರಿದ ಸುಮಾರು ಆರು ಸಾವಿರದಷ್ಟುಇರುವ ಇತರೆ ರಿಕ್ಷಾದವರಿಗೆ ಈಗಾಗಲೇ ಬಾಡಿಗೆ ಇಲ್ಲದೆ ತೊಂದರೆ ಆಗುತ್ತಿದೆ ಎಂಬ ದೂರು ಇದೆ. ಈ ಬಗ್ಗೆ ಆರ್‌ಟಿಒ ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದರು.