ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಪತ್ರ ಬರೆದು ಎರಡು ತಿಂಗಳಾಗಿದೆ. ಇದುವರೆಗೆ ಅಮೆರಿಕಾ ಮೂಲದ್ದು ಎನ್ನಲಾದ ಸ್ಯಾನ್ಸನ್ ಗ್ರೂಪ್ ಕಂಪನಿಯ ಸುಳಿವೇ ಇಲ್ಲ. ಈವರೆಗೆ ಆ ಕಂಪನಿಯ ಮುಖ್ಯಸ್ಥರು ಯಾರನ್ನೂ ಭೇಟಿಯಾಗಿಲ್ಲ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದೂ ದೃಢಪಟ್ಟಿಲ್ಲ. ಕೈಗಾರಿಕೆ ಸ್ಥಾಪಿಸುವ ಕಂಪನಿಯ ವಿವರವೇ ಇನ್ನೂ ಬಹಿರಂಗವಾಗಿಲ್ಲ. ಅದಕ್ಕೂ ಮೊದಲೇ ಜಾಗದ ವಿಚಾರಕ್ಕೆ ಕಾಂಗ್ರೆಸ್- ಜೆಡಿಎಸ್ ಪಕ್ಷದ ನಾಯಕರು ಪರಸ್ಪರ ಕದನಕ್ಕಿಳಿದಿದ್ದಾರೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ವಿಚಾರವಾಗಿ ಕಾಂಗ್ರೆಸ್- ಜೆಡಿಎಸ್ ನಡುವೆ ರಾಜಕೀಯ ಮೇಲಾಟ ಜೋರಾಗಿದೆ. ಅಮೆರಿಕಾ ಮೂಲದ ಕಂಪನಿಯೊಂದು ಕೈಗಾರಿಕೆ ಸ್ಥಾಪಿಸಲು ೧೦೦ ಎಕರೆ ಭೂಮಿ ಕೊಡಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬರೆದ ಒಂದು ಪತ್ರ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.

ಜಿಲ್ಲೆ ಉದಯವಾದಂದಿನಿಂದ ಇದುವರೆಗೆ ಕೈಗಾರಿಕೆಗಳನ್ನು ಕಂಡಿದ್ದೇ ಇಲ್ಲ. ಬೃಹತ್ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆಗೆ ಯಾರೂ ಒಲವನ್ನೂ ತೋರಲಿಲ್ಲ. ಇದೀಗ ಅಮೆರಿಕಾ ಮೂಲದ್ದು ಎನ್ನಲಾದ ಸ್ಯಾನ್ಸನ್ ಗ್ರೂಪ್ ಕಂಪನಿ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್ ಸ್ಥಾಪನೆಗೆ ಒಲವು ತೋರಿರುವ ವಿಷಯ ತಿಳಿದು ಜಿಲ್ಲೆಯ ಅಭಿವೃದ್ಧಿಯಲ್ಲಿ ಬದಲಾವಣೆಯಾಗುವ ಬಗ್ಗೆ ಜನರು ಅಚ್ಚರಿಯಿಂದ ಎದುರುನೋಡುತ್ತಿದ್ದರೆ. ನಿರುದ್ಯೋಗಿ ಯುವಕ- ಯುವತಿಯರು ಬದುಕನ್ನು ಕಟ್ಟಿಕೊಳ್ಳುವ ದಿನಗಳಿಗೆ ಕಾತರದಿಂದ ಕಾಯುತ್ತಿದ್ದಾರೆ.

ಕಂಪನಿಯ ಸುಳಿವಿಲ್ಲ:

ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಪತ್ರ ಬರೆದು ಎರಡು ತಿಂಗಳಾಗಿದೆ. ಇದುವರೆಗೆ ಅಮೆರಿಕಾ ಮೂಲದ್ದು ಎನ್ನಲಾದ ಸ್ಯಾನ್ಸನ್ ಗ್ರೂಪ್ ಕಂಪನಿಯ ಸುಳಿವೇ ಇಲ್ಲ. ಈವರೆಗೆ ಆ ಕಂಪನಿಯ ಮುಖ್ಯಸ್ಥರು ಯಾರನ್ನೂ ಭೇಟಿಯಾಗಿಲ್ಲ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದೂ ದೃಢಪಟ್ಟಿಲ್ಲ. ಕೈಗಾರಿಕೆ ಸ್ಥಾಪಿಸುವ ಕಂಪನಿಯ ವಿವರವೇ ಇನ್ನೂ ಬಹಿರಂಗವಾಗಿಲ್ಲ. ಅದಕ್ಕೂ ಮೊದಲೇ ಜಾಗದ ವಿಚಾರಕ್ಕೆ ಕಾಂಗ್ರೆಸ್- ಜೆಡಿಎಸ್ ಪಕ್ಷದ ನಾಯಕರು ಪರಸ್ಪರ ಕದನಕ್ಕಿಳಿದಿದ್ದಾರೆ.

ರಾಜ್ಯದ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಸರ್ಕಾರಕ್ಕೆ ಕುಮಾರಸ್ವಾಮಿ ಅವರ ಪತ್ರ ತಲುಪಿದೆಯೇ ವಿನಃ ಅಧಿಕೃತ ಕಂಪನಿಯಿಂದ ಇದುವರೆಗೆ ಯಾವ ಪ್ರಸ್ತಾವನೆ ಬಂದಿಲ್ಲ. ಮುಂದೆ ಪ್ರಸ್ತಾವನೆ ಬಂದರೆ ಭೂಮಿ ಕೊಡಲು ಸಿದ್ಧ ಎಂದು ದೃಢವಾಗಿ ಹೇಳಿದ್ದರೆ, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕೂಡ ಕೈಗಾರಿಕೆ ಸ್ಥಾಪಿಸುವ ಕಂಪನಿ ಮೊದಲು ಅನುಮತಿ ಪಡೆಯಲು ಕೆಐಎಡಿಬಿ ಅರ್ಜಿ ಸಲ್ಲಿಸುವಂತೆ ಹೇಳಿರುವುದೂ ಸತ್ಯ.

ಜೆಡಿಎಸ್ ನಾಯಕರ ವಾದ ಸರಿಯಲ್ಲ:

ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಅಮೆರಿಕಾದ ಕಂಪನಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎನ್ನುವ ಜೆಡಿಎಸ್ ನಾಯಕರ ವಾದ ಸರಿಯಲ್ಲ. ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಕೆಐಎಡಿಬಿ ಅಧ್ಯಕ್ಷರಾಗಿದ್ದವರು. ಅವರಿಗೆ ಕೈಗಾರಿಕೆ ಸ್ಥಾಪನೆಗೆ ಅನುಸರಿಸಬೇಕಾದ ನಿಯಮಗಳು, ಪ್ರಕ್ರಿಯೆಗಳ ಬಗ್ಗೆ ಚೆನ್ನಾಗಿ ಅರಿವಿದೆ. ಅವರೂ ಕೂಡ ರಾಜಕೀಯಕ್ಕಾಗಿ ವಾಸ್ತವವನ್ನು ಮರೆಮಾಚಿ ಮಾತನಾಡುತ್ತಿರುವುದು ಅವರ ಹಿರಿತನಕ್ಕೆ ಶೋಭೆ ತರುವುದಿಲ್ಲ ಎಂಬ ಮಾತುಗಳು ಸಾರ್ವಜನಿಕವಾಗಿ ಕೇಳಿಬರುತ್ತಿವೆ.

ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದರೆಂಬ ನಾಣ್ಣುಡಿಯಂತೆ ಕೈಗಾರಿಕೆ ಸ್ಥಾಪಿಸುವ ಕಂಪನಿಯ ವಿವರವೇ ಗೊತ್ತಿಲ್ಲದೆ ಭೂಮಿಯನ್ನು ಯಾರಿಗೆ ಕೊಡೋದು ಎನ್ನುವುದು ಕಾಂಗ್ರೆಸ್ಸಿಗರ ಪ್ರಶ್ನೆಯಾಗಿದೆ.

ಎಚ್‌ಡಿಕೆ ಕಾಲೆಳೆಯುವ ಪ್ರಯತ್ನ:

ಕಾಂಗ್ರೆಸ್‌ನವರೂ ಕೈಗಾರಿಕೆ ಸ್ಥಾಪನೆ ವಿಷಯವನ್ನು ಮುಂದಿಟ್ಟುಕೊಂಡು ಕುಮಾರಸ್ವಾಮಿ ಅವರ ಕಾಲೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಕೇಂದ್ರ ಸಚಿವರು ಕೈಗಾರಿಕೆ ತರುವ ನಾಟಕವಾಡುತ್ತಿದ್ದಾರೆಂದು ಅಣಕಿಸುತ್ತಿದ್ದಾರೆ. ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ಒಂದೂವರೆ ವರ್ಷದಲ್ಲಿ ಏನನ್ನೂ ತರಲಿಲ್ಲ. ಮೇಕೆದಾಟು ಅಣೆಕಟ್ಟೆಗೆ ಅನುಮತಿ ಕೊಡಿಸಲಿಲ್ಲ. ಮೈಷುಗರ್ ಕಾರ್ಖಾನೆಗೆ ಆರ್ಥಿಕ ನೆರವು ದೊರಕಿಸಿಕೊಡಲಿಲ್ಲ. ಮೈಷುಗರ್ ಪ್ರೌಢಶಾಲೆ ಶಿಕ್ಷಕರಿಗೆ ೫ ಕೋಟಿ ರು. ಠೇವಣಿ ಇಡುವ ಮಾತು ಸುಳ್ಳಾಯಿತು. ಇನ್ನು ಜಿಲ್ಲೆಗೆ ಕೈಗಾರಿಕೆ ತರುವ ಮನಸ್ಸು ಅವರಿಗೆಲ್ಲಿದೆ ಎಂದು ಜರಿಯುತ್ತಲೇ ಇದ್ದಾರೆ.

ಅಭಿವೃದ್ಧಿ ವಿಷಯದಲ್ಲಿ ಚಿಲ್ಲರೆ ರಾಜಕಾರಣ:

ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಜಿಲ್ಲೆಯ ಜನರ ಜೊತೆ ಚಿಲ್ಲರೆ ರಾಜಕಾರಣ ಮಾಡುತ್ತಿದ್ದರೆ, ನಿರುದ್ಯೋಗಿ ಯುವಕ- ಯುವತಿಯರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ರಾಜ್ಯ ಸರ್ಕಾರದವರೂ ಜಿಲ್ಲೆಗೆ ಕೈಗಾರಿಕೆಗಳನ್ನು ಕೊಡುಗೆಯಾಗಿ ನೀಡುವ, ಸರ್ಕಾರಿ ಸ್ವಾಮ್ಯದಲ್ಲಿರುವ ಮೈಷುಗರ್ ಕಾರ್ಖಾನೆಯನ್ನು ಪ್ರಗತಿಯ ದಿಕ್ಕಿನಲ್ಲಿ ಮುನ್ನಡೆಸುತ್ತಿಲ್ಲ. ಉದ್ಯೋಗಗಳನ್ನೂ ಸೃಷ್ಟಿಸುತ್ತಿಲ್ಲ. ಕೇಂದ್ರ ಸಚಿವರಾಗಿ ಕುಮಾರಸ್ವಾಮಿ ಅವರು ಕೈಗಾರಿಕೆ ತರುವ ಬಗ್ಗೆ ಪತ್ರ ಬರೆದು ಸುಮ್ಮನಾಗಿದ್ದಾರೆ. ಸ್ಯಾನ್ಸನ್ ಕಂಪನಿಯ ವಿವರಗಳನ್ನು ಅವರೂ ಸಹ ಬಹಿರಂಗಪಡಿಸಿಲ್ಲ. ಇದೂ ಗಾಳಿಯಲ್ಲಿ ಹೊಡೆದಿರುವ ಗುಂಡೋ ಎಂಬ ಅನುಮಾನಗಳು ಜನರಲ್ಲಿ ಮೂಡಲಾರಂಭಿಸಿವೆ. ಇದನ್ನು ನೋಡಿದರೆ ಜಿಲ್ಲೆಯ ಅಭಿವೃದ್ಧಿಯಲ್ಲಿ ಹೊಸ ಬದಲಾವಣೆ ತರುವ ದಿಸೆಯಲ್ಲಿ ಕಾಂಗ್ರೆಸ್- ಜೆಡಿಎಸ್ ನಾಯಕರು ಯಾರೂ ಆಸಕ್ತರಾಗಿರುವಂತೆ ಕಂಡುಬರುತ್ತಿಲ್ಲ.

ಆರೋಪ- ಪ್ರತ್ಯಾರೋಪದಲ್ಲೇ ಕಾಲಹರಣ:

ಕಂಪನಿ ಸ್ಥಾಪಿಸುವ ವಿಚಾರದಲ್ಲಿ ಕುಮಾರಸ್ವಾಮಿ ಕೂಡ ರಾಜ್ಯದ ಕೆಐಎಡಿಬಿ ಸಂಸ್ಥೆಯವರೊಂದಿಗೆ ಮಾತುಕತೆ ನಡೆಸುವ, ನಿರ್ದಿಷ್ಟ ಜಾಗವನ್ನು ಜಿಲ್ಲಾಧಿಕಾರಿ ಹಾಗೂ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯವರೊಂದಿಗೆ ಪರಿಶೀಲಿಸುವ ಸಾರ್ವಜನಿಕವಾಗಿ ಕೈಗಾರಿಕೆ ಸ್ಥಾಪನೆ ಕುರಿತಂತೆ ವಿವರ ಬಹಿರಂಗಪಡಿಸುವುದಕ್ಕೂ ಈವರೆಗೆ ಮುಂದಾಗಿಲ್ಲ. ಕೇವಲ ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಆರೋಪ-ಪ್ರತ್ಯಾರೋಪ ಮಾಡುವುದರಲ್ಲೇ ಕಾಲಹರಣ ಮಾಡುತ್ತಿವೆ.

ಕಾಂಗ್ರೆಸ್‌ನಲ್ಲಿ ಎನ್.ಚಲುವರಾಯಸ್ವಾಮಿ, ಜೆಡಿಎಸ್‌ನಿಂದ ಎಚ್.ಡಿ.ಕುಮಾರಸ್ವಾಮಿ ಅವರು ರಾಜಕೀಯ ಬದ್ಧ ವೈರಿಗಳಾಗಿರುವುದರಿಂದ ಜಿಲ್ಲೆಯ ಪ್ರಗತಿ ಕುಂಠಿತಗೊಂಡಿದೆ ಎಂಬ ಭಾವನೆ ಜನರಲ್ಲಿ ಬೇರೂರಿದೆ. ಇಬ್ಬರ ರಾಜಕೀಯ ಕದನದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಬೇಸರಗೊಂಡಿದ್ದಾರೆ. ಅಭಿವೃದ್ಧಿಯ ಬಗ್ಗೆ ಇಬ್ಬರು ನಾಯಕರು ತೋರುತ್ತಿರುವ ಉತ್ಸಾಹ, ಆಸಕ್ತಿಗಿಂತ ಹೆಚ್ಚಾಗಿ ದ್ವೇಷ, ಪ್ರತಿಷ್ಠೆ ಹಾಗೂ ಸಂಘರ್ಷದ ರಾಜಕಾರಣಕ್ಕೇ ಹೆಚ್ಚು ಮಣೆ ಹಾಕುತ್ತಿದ್ದಾರೆಂಬ ಮಾತುಗಳು ಎಲ್ಲೆಡೆ ಕೇಳಿಬರಲಾರಂಭಿಸಿವೆ.

ಕೈಗಾರಿಕೆ ಸ್ಥಾಪನೆಗೆ ಅನುಸರಿಸಬೇಕಾದ ಪ್ರಮುಖ ನಿಯಮಗಳು, ಪ್ರಕ್ರಿಯೆಗಳು:

ಕೈಗಾರಿಕಾ ಉದ್ದೇಶಗಳಿಗಾಗಿ ಭೂಮಿ ಪಡೆಯಲು ಹೂಡಿಕೆದಾರರು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಅಥವಾ ಸಂಬಂಧಿಸಿದ ಏಜೆನ್ಸಿಗಳ ಏಕಕಿಟಕಿ ವ್ಯವಸ್ಥೆಯಡಿ ಅರ್ಜಿ ಸಲ್ಲಿಸಬೇಕು. ಭೂಮಿ ಸ್ವಾಧೀನ ಅಥವಾ ಹಂಚಿಕೆ ಪ್ರಕ್ರಿಯೆಗಳನ್ನು ಅನುಸರಿಸಬೇಕು. ರಾಜ್ಯ ಸರ್ಕಾರದ ಕೈಗಾರಿಕಾ ನೀತಿಯಡಿ ಸಬ್ಸಿಡಿ, ತೆರಿಗೆ ವಿನಾಯಿತಿ ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ನೋಂದಾಯಿಸಿಕೊಳ್ಳಬೇಕು.

ಕೈಗಾರಿಕೆ ಸ್ಥಾಪನೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರ ಅನುಮತಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು. ಕಂಪನಿಗಳ ಕಾಯಿದೆ ೨೦೧೩, ಮತ್ತು ಇತರ ಕಾರ್ಮಿಕ ಕಾಯಿದೆಗಳ ಅಡಿಯಲ್ಲಿ ನೋಂದಣಿ ಮತ್ತು ನಿಯಮಗಳನ್ನು ಪಾಲಿಸಬೇಕು. ಅಗ್ನಿಶಾಮಕ ದಳದ ಅನುಮತಿ, ಭೂ- ಬಳಕೆ ಅನುಮತಿ ಮತ್ತು ಸ್ಥಳೀಯ ಪ್ರಾಧಿಕಾರಗಳಿಂದ ಅಗತ್ಯವಿರುವ ಇತರ ಪರವಾನಗಿಗಳನ್ನು ಪಡೆಯಬೇಕು.