ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗೆ ಹೋಲಿಸಿದರೆ ವಿಜಿ ಜಿ ರಾಮ್ ಜಿ ಒಳ್ಳೆಯ ಯೋಜನೆಯಾಗಿದೆ. ಒಳ್ಳೆಯ ಉದ್ದೇಶದಿಂದ ಮನ್‌ರೆಗಾ ಆರಂಭವಾದರೂ ಅದರಲ್ಲಿ ಸಾಕಷ್ಟು ದುರುಪಯೋಗಕ್ಕೆ ಅವಕಾಶಗಳಿದ್ದವು. ವಿಕಸಿತ ಭಾರತದ ಗುರಿ ಇಟ್ಟುಕೊಂಡು ವಿಜಿ ಜಿ ರಾಮ್ ಜಿ ಯೋಜನೆ ರೂಪಿಸಲಾಗಿದೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗೆ ಹೋಲಿಸಿದರೆ ವಿಜಿ ಜಿ ರಾಮ್ ಜಿ ಒಳ್ಳೆಯ ಯೋಜನೆಯಾಗಿದೆ. ಒಳ್ಳೆಯ ಉದ್ದೇಶದಿಂದ ಮನ್‌ರೆಗಾ ಆರಂಭವಾದರೂ ಅದರಲ್ಲಿ ಸಾಕಷ್ಟು ದುರುಪಯೋಗಕ್ಕೆ ಅವಕಾಶಗಳಿದ್ದವು. ವಿಕಸಿತ ಭಾರತದ ಗುರಿ ಇಟ್ಟುಕೊಂಡು ವಿಜಿ ಜಿ ರಾಮ್ ಜಿ ಯೋಜನೆ ರೂಪಿಸಲಾಗಿದೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ರಾಯಭಾಗ ಭಾಗದಲ್ಲಿ ಶಾಲಾ ಮಕ್ಕಳನ್ನು ನಿಲ್ಲಿಸಿ ಜಾಬ್ ಕಾರ್ಡ್ ಕೊಟ್ಟು ಫೋಟೋ ತೆಗೆಸಲಾಗಿದೆ. ಅವರನ್ನೂ ಕೂಲಿ ಕಾರ್ಮಿಕರೆಂದು ತೋರಿಸಿ ದುಡ್ಡು ಹೊಡೆಯಲಾಗಿದೆ. ಹೀಗೆ ತಾನೆ ಇವರು ಟೋಪಿ ಹಾಕುವುದು. ಇದನ್ನು ಸರಿಪಡಿಸುವುದಕ್ಕೆ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದರು.
ರಾಜ್ಯ ಸರ್ಕಾರದವರು ಯಾಕೆ ಇದರ ಬಗ್ಗೆ ಹೊಟ್ಟೆ ಉರಿ ಮಾಡುತಿದ್ದಾರೋ ಗೊತ್ತಿಲ್ಲ. ಮಹಾತ್ಮಗಾಂಧಿ ಅವರ ಹೆಸರನ್ನು ಬದಲಾಯಿಸುತ್ತಿದ್ದಾರೆ ಎಂದು ಬಡಿದುಕೊಳ್ಳುತಿದ್ದಾರೆ. ಈ ಯೋಜನೆಗೆ ಕೇಂದ್ರ ಸರ್ಕಾರ 90ರಷ್ಟು ಕೊಡುತ್ತಿತ್ತು. ಈಗ ಶೇ. 60 ರಷ್ಟು ಅನುದಾನವನ್ನು ಕೇಂದ್ರ ಕೊಡುತ್ತದೆ. ಶೇ. 40ರಷ್ಟು ಅನುದಾನವನ್ನು ರಾಜ್ಯ ಕೊಡಬೇಕು. ಇದಕ್ಕೆ ನಾವು ಶೇ. 40 ಕೊಡಬೇಕಲ್ಲ ಎನ್ನುವುದು ಹೊಟ್ಟೆ ಉರಿ. ಇಲ್ಲಿ ಸುಮ್ಮನೆ ಜಾಬ್ ಕಾರ್ಡ್ ಮಾಡಿ ದುಡ್ಡು ಹೊಡೆಯುವುದಕ್ಕೆ ಅವಕಾಶವಿಲ್ಲ ಎನ್ನುವುದು ಇವರ ಸಮಸ್ಯೆ.ಹೀಗಾಗಿ ಈ ಯೋಜನೆ ಬಗ್ಗೆ ಕಾಂಗ್ರೆಸ್ ನವರು ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ದೇವರಾಜು ಅರಸು ಅವರನ್ನು ಜನರು ಈಗಲೂ ಗುಣಗಾನ ಮಾಡುತ್ತಾರೆ. ಅಂದರೆ ಅವರ ವ್ಯಕ್ತಿತ್ವ ಅಂತಹದ್ದು. ಅವರ ಕೊಡುಗೆ ಎಂತಹದ್ದು ಇರಬಹುದು. ದೇವರಾಜು ಅರಸು ಅವರನ್ನು ದೇವರು ಅಂತ ಹೇಳುತ್ತಾರೆ. ಅಂದರೆ ಅವರ ಕೊಡುಗೆ ಎಂತಹದ್ದು ಎಂದು ಅರ್ಥ ಮಾಡಿಕೊಳ್ಳಬಹುದು. ಆದರೆ ಸುಮ್ಮನೆ ಕುಂತರೂ ಟೈಮ್ ಆಗಿಬಿಡುತ್ತವೆ. ಇವರು ಸುಮ್ಮನೆ ಆ ಕುರ್ಚಿಯಲ್ಲಿ ಕುಳಿತಿದ್ದಾರೆ ಅಷ್ಟೇ ಎಂದು ಸಿದ್ದರಾಮಯ್ಯ ಬಗ್ಗೆ ಟೀಕಿಸಿದರು.ಸಣ್ಣ ಸಣ್ಣ ಸಮುದಾಯದ ಜನರನ್ನು ಕರೆತಂದು ನಾಯಕರನ್ನಾಗಿ ಮಾಡಿದರು. ಜೀತದ ಆಳಾಗಿ ದುಡಿಯುತ್ತಿದ್ದವರಿಗೆ ಭೂಮಿಯ ಒಡೆಯನನ್ನಾಗಿ ಮಾಡಿದರು. ಹಾಗಾಗಿ ಜನರು ಇಂದಿಗೂ ದೇವರಾಜು ಅರಸು ಅವರನ್ನು ನೆನಪಿಸಿಕೊಳ್ಳುತ್ತಾರೆ. ದೇವರಾಜು ಅರಸು ಅವರು ಸಾಮಾನ್ಯ ಹೋಲಿಕೆಗಳಿವೆ ಮೀರಿದವರು. ಅವರಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ ಎಂದು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು.
ರಾಜ್ಯಕ್ಕೆ ನಿಮ್ಮದೇನು ಕೊಡುಗೆ ಹೇಳಿ. ಮೊದಲ ಬಾರಿ ಸಿಎಂ ಐದು ವರ್ಷ ಪೂರೈಸಿದ್ದೀರ. ಕರ್ನಾಟಕದ ಇತಿಹಾಸದಲ್ಲೇ ಅತಿ ಹೆಚ್ಚು ಸಾಲ ಮಾಡಿದವರು ನೀವು. ಈಗಲೂ ಎರಡನೇ ಬಾರಿಯೂ ಅತಿ ಹೆಚ್ಚು ಸಾಲ ಮಾಡುತ್ತಿದ್ದೀರಿ. ಇದು ನಿಮ್ಮ ಕೊಡುಗೆ. ಅನ್ನ ಭಾಗ್ಯ ಕೂಡ ನಿಮ್ಮದಲ್ಲ. ನಿಮ್ಮ ಯುಪಿಎದು ಅಲ್ಲ. ಇನ್ನು ಈಗ ರಾಜ್ಯಕ್ಕೆ ದಿವಾಳಿ ಭಾಗ್ಯ ಕೊಟ್ಠಿದ್ದೀರಾ. ಶಕ್ತಿ ಯೋಜನೆ ಮೂಲಕ ಕೆಎಸ್ಆರ್ ಟಿಸಿಗೆ ದಿವಾಳಿ ಭಾಗ್ಯ ಸಿಕ್ಕಿದೆ. ಕರೆಂಟ್ ಕೊಡುತ್ತೇವೆ ಎಂದು ಕೊಡುತ್ತಿಲ್ಲ.ಗೃಹಲಕ್ಷ್ಮಿ ಎಂದು ಹೇಳಿ ಎರಡು ತಿಂಗಳು ಮುಳುಗಿಸಿದ್ದೀರಾ. ಅಕ್ಕಿ ಕೊಡುವ ಬದಲು ದುಡ್ಡು ಕೊಡ್ತೇನೆ ಎಂದು ಆ ದುಡ್ಡೇ ಬರಲಿಲ್ಲ. ಈಗ ಕೇಂದ್ರ ಅಕ್ಕಿ ಕೊಡುತ್ತೇನೆ ಎಂದರೂ ಖರೀದಿಸಲು ನೀವು ರೆಡಿ ಇಲ್ಲ. ಯುವ ನಿಧಿ ಕೊಡುತ್ತೇವೆ ಎಂದು ಎರಡೂವರೆ ವರ್ಷವಾದರೂ ಇಂದಿಗೂ ಕೊಟ್ಟಿಲ್ಲ. ನಿಮ್ಮದೇನಿದ್ದರೂ ಈ ರೀತಿ ಟೋಪಿ ಹಾಕುವ ಭಾಗ್ಯ ಅಷ್ಟೇ ಎಂದು ವ್ಯಂಗ್ಯವಾಡಿದರು.
ಕರ್ನಾಟಕದ ಅರ್ಥ ವ್ಯವಸ್ಥೆಯನ್ನು ಹಾಳು ಮಾಡಿ ಕೀರ್ತಿ ನಿಮಗೆ ಸಿಗುತ್ತದೆ ಅಷ್ಟೇ. ದೇವರಾಜು ಅರಸು ನೀವಾಗಲು ಸಾಧ್ಯವಿಲ್ಲ. ಅರಸು ಅವರ ಅತ್ತಿರಕ್ಕೂ ನಿಮಗೆ ಬರಲು ಆಗುವುದಿಲ್ಲ. ದೇವರಾಜು ಅರಸು ಅವರು ಎಲ್ಲರನ್ನೂ ಪ್ರೀತಿಸುತ್ತಿದ್ದರು.ನೀವು ಒಬ್ಬ ಹುಟ್ಟು ಜಾತಿವಾದಿ. ಬರೀ ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳುತ್ತಾ ಇರುವವರು.
ನೀವೆನಿದ್ದರೂ ಬಿಟ್ಠಿ ಭಾಗ್ಯಗಳ ಹೆಸರು ಹೇಳುತ್ತಾ? ನಿಮಗೆ ಖುರ್ಚಿ ಭಾಗ್ಯ ಮಾಡಿಕೊಂಡಿದ್ದೀರಿ ಎಂದು ಟೀಕಿಸಿದರು.ನಾನು ಚಾಮರಾಜ ಕ್ಷೇತ್ರದ ಆಕಾಂಕ್ಷಿ:
ರಾಜ್ಯ ರಾಜಕಾರಣದಲ್ಲಿ ಪ್ರತಾಪ ಸಿಂಹ ಸ್ಪರ್ಧೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರಾಷ್ಟ್ರ ರಾಜಕಾರಣದಲ್ಲಿ ಇಲ್ಲ ಎಂದ ಮೇಲೆ ರಾಜ್ಯ ರಾಜಕಾರಣದಲ್ಲೇ ಇರಬೇಕಲ್ವಾ. 2019 ರಲ್ಲಿ ಗೆದ್ದು ನಂತರದ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಜನರಿಗೆ ಟಿಕೆಟ್ ಸಿಕ್ಕಿಲ್ಲ. ಅವರಲ್ಲಿ ಕೆಲವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಲಾಗಿದೆ. ಹೀಗಾಗಿ ಕೇಂದ್ರ ಮಟ್ಟದಲ್ಲಿ ಜವಾಬ್ದಾರಿ ಇಲ್ಲದಿದ್ದಾಗ ಪಕ್ಷ ರಾಜ್ಯದಲ್ಲಿ ಜವಾಬ್ದಾರಿ ಕೊಡುತ್ತದೆ. ನಾನು ಕೂಡ ರಾಜ್ಯದ ಜನರೊಂದಿಗೆ ಇರಬೇಕೆಂದು ತೀರ್ಮಾನ ಮಾಡಿದ್ದೆ.ನಾನು ಮೈಸೂರಿನಲ್ಲೇ ವಾಸ ಮಾಡುವುದು. ಚಾಮರಾಜ ಕ್ಷೇತ್ರದಲ್ಲಿ ಅತಿ ಹೆಚ್ಚು ಪ್ರಜ್ಞಾವಂತ ಮತದಾರರು ಇದ್ದಾರೆ. ಹೀಗಾಗಿ ಅಲ್ಲಿ ಆಕಾಂಕ್ಷಿ ಇದ್ದೇನೆ ಎಂದರು.
ಗೋಷ್ಠಿಯಲ್ಲಿ ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ತಳೂರು ಕಿಶೋರ್ ಕುಮಾರ್ ಇದ್ದರು.