ಕಾಲಕಾಲಕ್ಕೆ ಸಮೃದ್ಧಿ ಮಳೆಯಾಗಿದ್ದು, ತಾಲೂಕಿನಾದ್ಯಂತ ಹುಣಸೆಕಾಯಿ ಮರಗಳು ಉತ್ತಮವಾಗಿ ಕಾಪು ಕಟ್ಟಿವೆ.

ಕುರುಗೋಡು: ಈ ವರ್ಷ ಕಾಲಕಾಲಕ್ಕೆ ಸಮೃದ್ಧಿ ಮಳೆಯಾಗಿದ್ದು, ತಾಲೂಕಿನಾದ್ಯಂತ ಹುಣಸೆಕಾಯಿ ಮರಗಳು ಉತ್ತಮವಾಗಿ ಕಾಪು ಕಟ್ಟಿವೆ. ಕಳೆದ ನಾಲ್ಕು ವರ್ಷಗಳಿಂದ ಮಳೆಯ ಅಭಾವ ಮತ್ತು ರೋಗಬಾಧೆಯಿಂದ ಹುಣಸೆಮರಗಳು ಕಾಪು ಕಟ್ಟದೇ ಬರಡಾಗಿದ್ದವು. ಹುಣಸೆಕಾಯಿ ಚಟ್ನಿ ಪ್ರಿಯರಿಗೆ ನಿರಾಸೆ ಮೂಡಿಸಿತ್ತು.

ಈ ವರ್ಷ ಹುಣಸೆಮರಗಳಲ್ಲಿ ಅಧಿಕ ಪ್ರಮಾಣದ ಕಾಯಿ ಹಿಡಿದಿದ್ದು, ಕಳೆದ ಎರಡು ವಾರಗಳಿಂದ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಗ್ರಾಹಕರು ಖರೀದಿಯಲ್ಲಿ ತೊಟಗಿರುವುದು ಇಲ್ಲಿನ ವಾರದ ಮಾರುಕಟ್ಟೆಯಲ್ಲಿ ಕಂಡುಬಂತು.

ತಾಲೂಕಿನ ಸಿಂಧಿಗೇರಿ, ಬೈಲೂರು, ದಮ್ಮೂರು, ಲಕ್ಷ್ಮಿಪುರ, ಗೆಣಿಕೆಹಾಳು, ಮುಷ್ಟಗಟ್ಟೆ, ಶ್ರೀನಿವಾಸಕ್ಯಾಂಪ್, ಗುತ್ತಿಗನೂರು, ರ‍್ವಾಯಿ, ಪಟ್ಟಣಸೆರಗು, ಎಚ್.ವೀರಾಪುರ ಗ್ರಾಮಗಳ ರೈತರು ತಮ್ಮ ಜಮೀನು ಬದುವಿನಲ್ಲಿ ಒಂದೆರಡು ಹುಣಸೆ ಮರ ಬೆಳೆದಿರುವುದು ಕಂಡುಬಂದರೆ, ಕೆಲವು ರಸ್ತೆಗಳ ಎರಡೂ ಬದಿಯಲ್ಲಿ ಬೆಳೆದಿರುವುದು ಕಂಡುಬರುತ್ತವೆ.

ಈ ಬಾರಿ ತಾಲ್ಲೂಕಿನ ಬಹುತೇಕ ಕಡೆ ಹಣಸೆಕಾಯಿ ಸೊಂಪಾಗಿ ಕಾಪು ಕಟ್ಟಿದ್ದು ಉತ್ತಮ ಇಳುವರಿ ಬರುತ್ತಿದೆ.

ಮಾರಾಟಗಾರರು ರೈತರ ಜಮೀನುಗಳಲ್ಲಿನ ಹುಣಸೆಮರ ಒಂದಕ್ಕೆ ₹೨೦೦೦ ರಿಂದ ₹೨,೫೦೦ ಮುಂಗಡ ಹಣ ನೀಡಿ ಗುತ್ತಿಗೆ ಪಡೆಯುತ್ತಿದ್ದಾರೆ.

ಪಟ್ಟಣದಲ್ಲಿ ಪ್ರತಿ ಗುರುವಾರ ಜರುಗಿವ ವಾರದ ಸಂತೆಯಲ್ಲಿ ಒಂದು ಮಣಕ್ಕೆ (೧೨ ಕೆಜಿ) ₹೨೫೦ ರಿಂದ ₹೩೦೦ ಬೆಲೆಗೆ ಮಾರಾಟಮಾಡುತ್ತಿದ್ದಾರೆ. ಕಳೆದ ವರ್ಷ ಇಳುವರಿ ಕಡಿಮೆ ಇತ್ತು ಬೆಲೆ ಹೆಚ್ಚಿತ್ತು. ಈ ವರ್ಷ ಇಳುವರಿಯ ಜತೆಗೆ ಮಾರುಕಟ್ಟೆಯಲ್ಲಿ ಹುಣಸೆ ಉತ್ತಮ ಬೆಲೆ ದೊರೆಯುತ್ತಿದೆ ಎಂದು ದೊಡ್ಡಬಸಮ್ಮ ಮಾಹಿತಿ ಹಂಚಿಕೊಂಡರು.

ಕುರುಗೋಡು ಪಟ್ಟಣದ ಗುರುವಾರ ಜರುಗುವ ವಾರದ ಸಂತೆಯಲ್ಲಿ ಹುಣಸೆಕಾಯಿ ಖರೀದಿಯಲ್ಲಿ ತೊಡಗಿರುವ ಗ್ರಾಹಕರು.