ಸಿದ್ದಾಪುರ ಪಟ್ಟಣದ ತಾಲೂಕು ಮಾರ್ಕೆಟಿಂಗ್ ಸೊಸೈಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೇಡ್ತಿ, ವರದಾ, ಅಘನಾಶಿನಿ ಮತ್ತು ವೇದಾವತಿ ನದಿ ಜೋಡಣೆ ಕೈ ಬಿಡುವಂತೆ ಆಗ್ರಹಿಸಿ ಜ. ೧೧ರಂದು ಶಿರಸಿಯಲ್ಲಿ ಆಯೋಜಿಸಿರುವ ಬೃಹತ್ ಜನ ಸಮಾವೇಶದ ನದಿ ಜೋಡಣೆ ವಿರೋಧಿ ಹೋರಾಟದ ಪೂರ್ವಸಿದ್ಧತಾ ಸಭೆಯಲ್ಲಿ ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮಿಗಳು ಪಾಲ್ಗೊಂಡಿದ್ದರು.
ಸಿದ್ದಾಪುರ: ಅಘನಾಶಿನಿ ನದಿ ಜೋಡಣೆ ವಿರೋಧಿ ಹೋರಾಟದಲ್ಲಿ ತಾಲೂಕಿನ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಅತಿ ಮುಖ್ಯ. ಈ ಯೋಜನೆಯಿಂದ ನಮ್ಮ ಪರಿಸರದ, ಭೂಮಿಯ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮಿಗಳು ಕರೆ ನೀಡಿದರು.
ಅವರು ಪಟ್ಟಣದ ತಾಲೂಕು ಮಾರ್ಕೆಟಿಂಗ್ ಸೊಸೈಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೇಡ್ತಿ, ವರದಾ, ಅಘನಾಶಿನಿ ಮತ್ತು ವೇದಾವತಿ ನದಿ ಜೋಡಣೆ ಕೈ ಬಿಡುವಂತೆ ಆಗ್ರಹಿಸಿ ಜ. ೧೧ರಂದು ಶಿರಸಿಯಲ್ಲಿ ಆಯೋಜಿಸಿರುವ ಬೃಹತ್ ಜನ ಸಮಾವೇಶದ ನದಿ ಜೋಡಣೆ ವಿರೋಧಿ ಹೋರಾಟದ ಕುರಿತಾದ ಪೂರ್ವಸಿದ್ಧತಾ ಸಭೆಯ ಸಾನ್ನಿಧ್ಯವಹಿಸಿ ಮಾತನಾಡಿ, ಇದೇ ಪರಿಸ್ಥಿತಿ ಹಿಂದೆ ಬಂದಾಗ ನಮ್ಮ ಪೂರ್ವಜರು ಹೋರಾಡಿ ನೆಲ ಜಲವನ್ನು ನಮಗೆ ಉಳಿಸಿ ಕೊಟ್ಟಿದ್ದಾರೆ. ನಮ್ಮ ಮುಂದಿನ ಪೀಳಿಗೆಗೆ ಅದನ್ನು ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಶುದ್ಧವಾದ ಅಘನಾಶಿನಿ ನದಿ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿಲ್ಲ. ಇದರಿಂದ ಪ್ರಕೃತಿ, ಪರಿಸರದ ಕುರಿತಾಗಿ ಹಲವು ಪ್ರಯೋಜನಗಳಿವೆ ಎಂದು ವಿಜ್ಞಾನಿಗಳು ವೈಜ್ಞಾನಿಕವಾದ ಮಾಹಿತಿ ನೀಡಿದ್ದಾರೆ. ನಾವು ಪರಿಸರದ ಮೇಲೆ ಮಾಡುವ ದೌರ್ಜನ್ಯದಿಂದ ಪ್ರಾಣಿಗಳು ಮನುಷ್ಯನ ವಾಸ ಸ್ಥಾನದ ಕಡೆ ಬರುತ್ತಿವೆ. ಈ ಯೋಜನೆಯಿಂದ ಸುಮಾರು ೩೦೦ ವಿಧದ ಸಸ್ಯ ಪ್ರಭೇದಗಳು ನಶಿಸುವ ಪ್ರಮೇಯ ಬಂದೊದಗುತ್ತದೆ. ನದಿಯ ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತಿದೆ ಎನ್ನುವ ಕಾರಣ ನೀಡಿ ಅದಕ್ಕೆ ಅಣೆಕಟ್ಟು ಕಟ್ಟಿ ಬಯಲುಸೀಮೆಗೆ ನೀರು ನೀಡಲು ಸರ್ಕಾರ ಮುಂದಾಗಿದೆ. ನದಿಗಳ ನೀರು ಸಮುದ್ರಕ್ಕೆ ಸೇರದಿದ್ದರೆ ಸಮುದ್ರದ ಮೀನುಗಳಿಗೆ, ಅಲ್ಲಿರುವ ಸಸ್ಯಗಳಿಗೆ ತೊಂದರೆ ಆಗುತ್ತದೆ. ಭೂಮಿಯಲ್ಲಿರುವ ಯಾವ ನೀರೂ ವ್ಯರ್ಥವಾಗುವುದಿಲ್ಲ. ಆದ್ದರಿಂದ ನಮ್ಮ ನದಿಯನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಜನಪ್ರತಿನಿಧಿಗಳ, ಅಧಿಕಾರಿಗಳ ಸರ್ಕಾರ ಇಲ್ಲಿನ ಜನರನ್ನು ಮುಳುಗಿಸಲು ಕಾರ್ಯಕ್ಕೆ ಮುಂದಾಗಿದೆ. ಪಕ್ಷಾತೀತ, ಜಾತ್ಯತೀತವಾಗಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಒಗ್ಗೂಡಿ ಹೋರಾಡಿದರೆ ಮಾತ್ರ ಸರ್ಕಾರಕ್ಕೆ ನಮ್ಮ ಧ್ವನಿ ಕೇಳುತ್ತದೆ. ಸರ್ಕಾರ ನಮ್ಮ ಜಿಲ್ಲೆಗೆ ಅವಶ್ಯಕತೆ ಇರುವ ಯೋಜನೆಗಳನ್ನು ನೀಡದೆ ನಮ್ಮ ಅರಣ್ಯ ಸಂಪತ್ತನ್ನು ನಾಶ ಪಡಿಸುವ ಯೋಜನೆಗಳನ್ನು ನೀಡಲು ಮುಂದಾಗುತ್ತಿರುವುದು ಬೇಸರದ ಸಂಗತಿ ಎಂದರು.ಸ್ಥಳೀಯ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಹೋರಾಟ ಸಮಿತಿ ಸಂಚಾಲಕ ಗೋಪಾಲಕೃಷ್ಣ ತೆಂಗಾರಮನೆ ಬೇಡ್ತಿ - ವರದಾ ಮತ್ತು ಅಘನಾಶಿನಿ - ವೇದಾವತಿ ನದಿ ಜೋಡಣೆ ಯೋಜನೆಯ ರೂಪುರೇಷೆಗಳನ್ನು ವಿವರಿಸಿದರು. ಎಂ.ಜಿ. ಹೆಗಡೆ ಗೆಜ್ಜೆ ಮತ್ತು ಟಿಎಂಎಸ್ ಉಪಾಧ್ಯಕ್ಷ ಎಂ.ಜಿ. ನಾಯ್ಕ ಹಾದ್ರಿಮನೆ, ಶ್ಯಾಮಲಾ ಹೆಗಡೆ ಹೂವಿನಮನೆ ಮಾತನಾಡಿದರು.
ರಾಘವೇಂದ್ರ ಶಾಸ್ತ್ರಿ, ಎನ್.ವಿ. ಹೆಗಡೆ ಮುತ್ತಿಗೆ, ಆರ್.ಎಂ. ಪಾಟೀಲ, ಆರ್.ಎಸ್. ಹೆಗಡೆ ಹರಗಿ, ಪಿ.ಬಿ. ಹೊಸೂರು, ಎಂ.ಐ. ನಾಯ್ಕ ಕೆಳಗಿನಸಸಿ, ಕೆ.ಕೆ. ನಾಯ್ಕ ಸುಂಕತ್ತಿ, ನಾಗಪತಿ ಗೌಡ ಹುತ್ಗಾರ ಇದ್ದರು. ಜಿ.ಜಿ. ಹೆಗಡೆ ಬಾಳಗೋಡ ಕಾರ್ಯಕ್ರಮ ನಿರೂಪಿಸಿದರು.