ಮಹತ್ತಾಗಿ ಯೋಚಿಸಿ ಯೋಜನೆಯಾಗಿ ಪರಿವರ್ತಿಸಿ ಸಾಧಕರ ಸಾಲಿನಲ್ಲಿ ನಿಲ್ಲಿ: ಈಶ್ವರ ರಾವ್

| Published : Mar 24 2024, 01:39 AM IST

ಮಹತ್ತಾಗಿ ಯೋಚಿಸಿ ಯೋಜನೆಯಾಗಿ ಪರಿವರ್ತಿಸಿ ಸಾಧಕರ ಸಾಲಿನಲ್ಲಿ ನಿಲ್ಲಿ: ಈಶ್ವರ ರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಪಂಚದ ಇಂದಿನ ದೃಷ್ಟಿಕೋನ ಬದಲಾಗಿದೆ. ಅದಕ್ಕೆ ತಕ್ಕಂತೆ ನಿಮ್ಮಲ್ಲಿ ಸೂಕ್ಷ್ಮ ಗ್ರಹಿಕೆಗಳು ಇರಬೇಕು. ಗುರಿಯನ್ನು ಇಟ್ಟುಕೊಳ್ಳಿ. ಆ ಗುರಿಯನ್ನು ತಲುಪಲು ಸದಾ ಪ್ರಯತ್ನ ನಡೆಸಿ. ಮಧ್ಯಮ ವರ್ಗದಿಂದ ಬಂದವರು ದೊಡ್ಡ ಕನಸುಗಳನ್ನು ಕಾಣಬೇಕು. ಕನಸುಗಳನ್ನು ಈಡೇರಿಸಿಕೊಳ್ಳಲು ಶ್ರಮ ವಹಿಸಬೇಕು. ಆ ಮೂಲಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಮ್ಮ ಸ್ಥಾನವನ್ನು ಕಂಡುಕೊಳ್ಳಿ

ಕನ್ನಡಪ್ರಭ ವಾರ್ತೆ ಮೈಸೂರು

ನಿಮ್ಮ ಬದುಕನ್ನು ನಿರ್ಧರಿಸುವವರು ನೀವೇ ಆಗಿದ್ದೀರಿ. ಮಹತ್ತಾಗಿ ಯೋಚನೆಯನ್ನು ಮಾಡಿ. ಯೋಚನೆಗಳನ್ನು ಯೋಜನೆಗಳಾಗಿ ಪರಿವರ್ತಿಸಿ. ಸಾಧಕರ ಸಾಲಿನಲ್ಲಿ ನಿಲ್ಲಿ ಎಂದು ಜೆಕೆ ಟೈರ್ ಅಂಡ್ ಇಂಡಸ್ಟ್ರೀಸ್ ಉಪಾಧ್ಯಕ್ಷ ಈಶ್ವರ ರಾವ್‌ ಕರೆ ನೀಡಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಖಾತರಿ ಕೋಶವು ಪದವಿ ವಿದ್ಯಾರ್ಥಿಗಳಿಗಾಗಿ ಶನಿವಾರ ಆಯೋಜಿಸಿದ್ದ ಇಂಟರ್ನ್‌ ಶಿಪ್ ಮತ್ತು ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಪಂಚದ ಇಂದಿನ ದೃಷ್ಟಿಕೋನ ಬದಲಾಗಿದೆ. ಅದಕ್ಕೆ ತಕ್ಕಂತೆ ನಿಮ್ಮಲ್ಲಿ ಸೂಕ್ಷ್ಮ ಗ್ರಹಿಕೆಗಳು ಇರಬೇಕು. ಗುರಿಯನ್ನು ಇಟ್ಟುಕೊಳ್ಳಿ. ಆ ಗುರಿಯನ್ನು ತಲುಪಲು ಸದಾ ಪ್ರಯತ್ನ ನಡೆಸಿ. ಮಧ್ಯಮ ವರ್ಗದಿಂದ ಬಂದವರು ದೊಡ್ಡ ಕನಸುಗಳನ್ನು ಕಾಣಬೇಕು. ಕನಸುಗಳನ್ನು ಈಡೇರಿಸಿಕೊಳ್ಳಲು ಶ್ರಮ ವಹಿಸಬೇಕು. ಆ ಮೂಲಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಮ್ಮ ಸ್ಥಾನವನ್ನು ಕಂಡುಕೊಳ್ಳಿ ಎಂದು ಅವರು ಹೇಳಿದರು.

ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರೊ.ಡಿ. ಆನಂದ್‌ ಮಾತನಾಡಿ, ಇದುವರೆಗೆ ಇಂಟರ್ನ್‌ ಶಿಪ್ ಎಂಬುದು ಕೇವಲ ಕೆಲವೇ ಅಧ್ಯಯನ ಶಿಸ್ತುಗಳಿಗೆ ಮಾತ್ರ ಸೀಮಿತವಾಗಿತ್ತು. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಇದನ್ನು ಎಲ್ಲಾ ಅಧ್ಯಯನ ಶಿಸ್ತುಗಳಿಗೂ ಅಳವಡಿಸಲಾಗಿದೆ. ಇಂಟರ್ನ್‌ ಶಿಪ್ ಅನ್ನು ಹೇಗೆ ನಡೆಸಿಕೊಂಡು ಹೋಗಬಹುದೆಂಬುದಕ್ಕೆ ಕಾಲೇಜಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದರು.

ಕೇವಲ ಜ್ಞಾನ ಸಂಗ್ರಹಣೆಯು ಶಿಕ್ಷಣವಾಗಲಾರದು. ಅದನ್ನು ಅನ್ವಯಿಸುವುದು ಮುಖ್ಯವಾದುದು. ಹೊರಗಡೆಯ ಪ್ರಪಂಚಕ್ಕೆ ನಾವು ತೆರೆದುಕೊಂಡಾಗಲೇ ನಿಜವಾದ ಅಧ್ಯಯನ ನಡೆಯುವುದು. ಸಮಾಜದೊಂದಿಗಿನ ಸಂವಹನವೇ ಇಂಟರ್ನ್‌ ಶಿಪ್ ಎಂದು ಅವರು ತಿಳಿಸಿದರು.

ಮೈಸೂರಿನ ಪ್ರೊಸೆಟ್ಟ ಬಯೋಕನ್ಫಾಮ್ಯಾಟಿಕ್ಸ್‌ ಸಿಇಒ ಡಾ.ಎಂ. ಧರ್ಮಪ್ರಸಾದ್‌ ಮಾತನಾಡಿ, ಇಂದು ಸಾಧನೆಗೆ ತಾಂತ್ರಿಕ ಕೌಶಲ್ಯ ಮತ್ತು ಮೃದು ಕೌಶಲ್ಯ ಎರಡೂ ಮುಖ್ಯವಾಗಿವೆ. ಸಂವಹನ, ನಾಯಕತ್ವ ಗುಣ ಮೊದಲಾದವುಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು.

ಸಮಸ್ಯೆಯನ್ನು ಗುರುತಿಸಬೇಕು. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಸಮಸ್ಯೆಯನ್ನು ಎಂದಿಗೂ ಸಮಸ್ಯೆಯಾಗಿಯೇ ಬಿಡಬಾರದು. ಪ್ರಪಂಚಕ್ಕೆ ತೆರೆದುಕೊಳ್ಳಿ. ಉದ್ಯೋಗಾಧಾರಿತವಾಗಿ ನಿಮ್ಮ ನಡೆ ಇರಲಿ. ಅದಕ್ಕಾಗಿ ಇರುವ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಉದ್ಯೋಗದಾತರಿಗೆ ನಿಮಗೆ ಹಸಿವಿದೆ ಎಂಬುದು ಗೊತ್ತಾಗಬೇಕು. ಅದನ್ನು ತಲುಪಿಸುವ ಕೆಲಸವನ್ನು ನೀವು ಮಾಡಬೇಕು. ಸೋತರೆ ಎದ್ದೇಳುವುದನ್ನು ಕಲಿಯಿರಿ. ನಿಮ್ಮನ್ನು ಪ್ರೋತ್ಸಾಹಿಸುವ, ಬೆಂಬಲಿಸುವ ವಲಯವನ್ನು ಸೃಷ್ಟಿಸಿಕೊಳ್ಳಿ ಎಂದು ಅವರು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಉದ್ಯೋಗ ಇಲ್ಲದವರನ್ನು ಯಾರೂ ಗುರುತಿಸುವುದಿಲ್ಲ. ಇಂದು ಜೀವನದಲ್ಲಿ ಯಶಸ್ಸು ಕಾಣಲು ಉದ್ಯೋಗದ ಅವಶ್ಯಕತೆ ಇದೆ. ಉತ್ತಮ ಉದ್ಯೋಗ ಬೇಕಾದರೆ ಉತ್ತಮ ಶಿಕ್ಷಣವನ್ನು ಪಡೆಯಬೇಕು. ಅದಕ್ಕಾಗಿ ನಿಮ್ಮನ್ನು ಸಜ್ಜುಗೊಳಿಸಲು ಇಂಟರ್ನ್‌ ಶಿಪ್‌ ನಂತಹ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಉನ್ನತ ಶಿಕ್ಷಣವು ಮೌಲ್ಯಾಧಾರಿತವಾದ ಸಂಶೋಧನೆಗೆ ಹೆಚ್ಚು ಒತ್ತು ಕೊಟ್ಟಿದೆ. ಅದರಲ್ಲಿ ನೀವು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾದರೆ ಇಂಟರ್ನ್‌ ಶಿಪ್‌ ನಲ್ಲಿ ನಿಮ್ಮ ಭಾಗವಹಿಸುವಿಕೆ ಪೂರ್ಣ ಪ್ರಮಾಣದಲ್ಲಿ ಇರಬೇಕು. ನಿಮ್ಮ ಬೆಳವಣಿಗೆಗೆ ಪೂರಕವಾಗುವ ರೀತಿ ಇಂಟರ್ನ್‌ ಶಿಪ್ ತರಬೇತಿಯ ಅಡಿಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಸತತವಾಗಿ ಹಮ್ಮಿಕೊಳ್ಳಲಾಗುವುದು. ಸಂಪನ್ಮೂಲ ವ್ಯಕ್ತಿಗಳು ನಿಮಗೆ ತರಬೇತಿ ನೀಡುತ್ತಾರೆ. ಅಧ್ಯಯನದ ಭಾಗವಾಗಿರುವ ಇದನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಎಸ್. ಪ್ರತಿಭಾ ಸ್ವಾಗತಿಸಿದರು. ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಡಾ.ಎನ್. ರಾಜೇಂದ್ರಪ್ರಸಾದ್ ವಂದಿಸಿದರು. ಎಚ್.ಆರ್. ಪೂಜಾ ಪ್ರಾರ್ಥಿಸಿದರು. ಸಹಾಯಕ ಪ್ರಧ್ಯಾಪಕಿ ಡಾ.ಎಂ. ರಮ್ಯಶ್ರೀ ನಿರೂಪಿಸಿದರು.