ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅಧಿಸೂಚಿತ ಬೆಳೆಗಳಾದ ಸೋಯಾ ಅವರೆ, ಜೋಳ (ನೀರಾವರಿ), ಉದ್ದು, ಹೆಸರು (ಮಳೆ ಆಶ್ರಿತ) ಬೆಳೆಗಳಿಗೆ ರೈತರು ವಿಮೆಗೆ ನೋಂದಣಿ ಮಾಡಿಕೊಳ್ಳಲು ಜುಲೈ 15 ಕೊನೆಯ ದಿನವಾಗಿದೆ. ಕೊನೆಯ ದಿನಾಂಕಕ್ಕೆ ಕಾಯದೇ ಬೆಳೆವಿಮೆ ಮಾಡಿಸುವಂತೆ ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ರೈತಲ್ಲಿ ಮನವಿ ಮಾಡಿಕೊಂಡಿದ್ದಾರೆ.ಬೆಳೆ ವಿಮೆ ನೋಂದಣಿಗೆ ಬ್ಯಾಂಕ್, ಆರ್ಥಿಕ ಸಂಸ್ಥೆಗಳು, ಸಾಮಾನ್ಯ ಸೇವಾ ಕೇಂದ್ರ (ಸಿಎಸ್ಸಿ) ಅಥವಾ ಗ್ರಾಮ ಒಮ್ ಕೇಂದ್ರಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಸಬಹುದಾಗಿದೆ. ಅಧಿಸೂಚಿತ ಬೆಳೆಗಳಿಗೆ ಬೆಳೆಸಾಲ ಪಡೆದ ರೈತರಿಗೆ ಈ ಯೋಜನೆ ಕಡ್ಡಾಯವಾಗಿದೆ. ಬೆಳೆಸಾಲ ಪಡೆದ ರೈತರು ಯೋಜನೆಯಡಿ ಭಾಗವಹಿಸಲು ಇಚ್ಚಿಸದಿದ್ದಲ್ಲಿ ಸಂಬಂಧಿಸಿದ ಬ್ಯಾಂಕಿನಲ್ಲಿ ನಿಗದಿತ ಅವಧಿಯೊಳಗೆ ಲಿಖಿತವಾಗಿ ಆಯ್ಕೆ ನಿರಾಕರಣೆ ಸಲ್ಲಿಸಬೇಕು. ಹಾಗೂ ಬೆಳೆಸಾಲ ಪಡೆಯದ ರೈತರು ನೋಂದಣಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸ್ವಯಂ ಘೋಷಣೆ ಸಲ್ಲಿಸಿ ನೋಂದಣಿ ಪ್ರಕ್ರಿಯೆ ಪೂರೈಸಬೇಕು.

ಈ ಯೋಜನೆಯಡಿ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಬೆಳೆ ಮುಳುಗಡೆ ಹಾಗೂ ಗುಡುಗು-ಮಿಂಚಿನಿಂದ ಉಂಟಾಗುವ ಬೆಂಕಿ ಅವಘಡಗಳಿಂದ ಸಂಬಂಧಿಸುವ ಬೆಳೆ ಹಾನಿಯನ್ನು ಪರಿಶೀಲಿಸಿ ನಷ್ಟ ಪರಿಹಾರ ನೀಡಲು ಅವಕಾಶ ಕಲ್ಪಿಸಲಾಗಿದೆ. ಅಧಿಸೂಚಿತ ಬೆಳೆಗಳಿಗೆ ನಿಗಧಿಪಡಿಸಿದ ರೈತರ ಪಾಲಿನ ವಿಮಾ ಕಂತನ್ನು ಪಾವತಿಸಿ ಯೋಜನೆಯ ಸದುಪಯೋಗ ಪಡೆಯುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.