ಸೇಡಂ ಪಟ್ಟಣಕ್ಕೆ ಕಾಚೂರು ಬಾಂದಾರು ನೀರು: ಡಾ. ಶರಣಪ್ರಕಾಶ

| Published : Nov 12 2025, 01:15 AM IST

ಸೇಡಂ ಪಟ್ಟಣಕ್ಕೆ ಕಾಚೂರು ಬಾಂದಾರು ನೀರು: ಡಾ. ಶರಣಪ್ರಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲವೂ ಅಂದುಕೊಂಡತೆ ನಡೆದದ್ದಾದಲ್ಲಿ 2050ರ ವರೆಗೂ ಕುಡಿಯುವ ನೀರಿನ ಸಮಸ್ಯೆ ಜಿಲ್ಲೆಯ ಕಾಗಿಣಾ ತೀರದ ಸೇಡಂ ಪಟ್ಟಣದ ಹತ್ತಿರಕ್ಕೂ ಸುಳಿಯೋದಿಲ್ಲ.

ಕಲಬುರಗಿ: ಎಲ್ಲವೂ ಅಂದುಕೊಂಡತೆ ನಡೆದದ್ದಾದಲ್ಲಿ 2050ರ ವರೆಗೂ ಕುಡಿಯುವ ನೀರಿನ ಸಮಸ್ಯೆ ಜಿಲ್ಲೆಯ ಕಾಗಿಣಾ ತೀರದ ಸೇಡಂ ಪಟ್ಟಣದ ಹತ್ತಿರಕ್ಕೂ ಸುಳಿಯೋದಿಲ್ಲ.

ಈಗಾಗಲೇ ಸಟಪಟನಹಳ್ಳಿ ಬಾಂದಾರಿನಿಂದ ನೀರು ಪೂರೈಕೆ ಇರುವ ಸೇಡಂ ಪಟ್ಟಣಕ್ಕೆ ಪರ್ಯಾಯವಾಗಿ ಕಾಚೂರು ಬಾಂದಾರು ಮೂಲಕವೂ ನೀರನ್ನೆತ್ತಿ ತಂದು ಪೂರೈಸುವ ಮಹತ್ವದ ಯೋಜನೆಗೆ ಡಾ. ಶರಣಪ್ರಕಾಶ ಪಾಟೀಲ್‌ ಮಂಗಳವಾರ ಅಡಿಗಲ್ಲಿಟ್ಟಿದ್ದಾರೆ.

ಕೇಂದ್ರ ಪುರರಸ್ಕೃತ ಅಮೃತ ಯೋಜನೆಯಡಿ ₹47. 85 ಕೋಟಿ ವೆಚ್ಚದ ಈ ಯೋಜನೆಗೆ 2023ರಲ್ಲೇ ಆಡಳಿತಾತ್ಮಕ ಅನುಮೋದನೆ ರಾಜ್ಯ ಸರ್ಕಾರ ನೀಡಿತ್ತು. ಈ ಯೋಜನೆಗೀಗ ಡಾ. ಪಾಟೀಲ್‌ ಸೇಡಂ ಪಟ್ಟಣದ ಊಡಗಿ ರಸ್ತೆಯ 705 ಆಶ್ರಯ ಕಾಲೋನಿಯಲ್ಲಿ ಅಡಿಗಲ್ಲಿಟ್ಟರು.

ಇದು ದೂರದೃಷ್ಟಿಯ ಯೋಜನೆಯಾಗಿದ್ದು 2050ರ ವರೆಗಿನ ಸೇಡಂ ಜನಸಂಖ್ಯೆಯನ್ನ ಲೆಕ್ಕಹಾಕಿ ಯೋಜನೆ ರೂಪಿಸಲಾಗಿದೆ. ಟೆಂಡರ್‌ ಕೂಡಾ ಆಗಿದ್ದು ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಡಾ. ಪಾಟೀಲ್‌ ಹೇಳಿದರು.

ಸೇಡಂ ಪಟ್ಟಣಕ್ಕೆ ಸದ್ಯ ಇರುವ ನೀರಿನ ಪೂರೈಕೆ ಜಾಲ ಈಗಿನ ಜನವಸತಿಗೆ ಸಾಕಾಗುತ್ತಿಲ್ಲವೆಂಬುದು ತಮಗೆ ಮನವರಿಕೆಯಾದ ಮರುಕ್ಷಣವೇ ಕಾಚೂರು ಬಾಂದಾರಿನಿಂದ ನೀರನ್ನು ತಂದು ಪರ್ಯಾಯ ಮಾರ್ಗ ರೂಪಿಸುವ ಚಿಂತನೆಯ ಫಲವೇ ಇಂದಿನ ಸಮಾರಂಭವೆಂದು ಸಚಿವರು ಹಳಿದರು.

ಕಾಚೂರು ಯೋಜನೆ ಅನುಷ್ಠಾನಗೊಂಡಲ್ಲಿ ಸೇಡಂ ನಲ್ಲಿ 36 ಸಾವಿರ ನಲ್ಲಿ ಸಂಪರ್ಕಗಳು ಹೆಚ್ಚಲಿವೆ ಎಂದರು.

ಆಶ್ರಯ ಕಾಲೋನಿ, ಕಲಬುರಗಿ ರಸ್ತೆ, ಚಿಂಚೋಳಿ ರಸ್ತೆ ಸೇರಿದಂತೆ 5 ಕಡೆ ಮೇಲ್‌ಸ್ತರದ ಟ್ಯಾಂಕ್‌ ನಿರ್ಮಾಣವಾಗಲಿವೆ ಎಂದು ಡಾ. ಶರಣಪ್ರಕಾಶ ಹೇಳಿದರು.

ಸೇಡಂನಲ್ಲಿ ಜಿಟಿಟಿಸಿ ಸಂಸ್ಥೆ: ಈಗಿರುವ ಐಟಿಐ ಪಕ್ಕದ ಜಮೀನನ್ನೇ ಈ ಸಂಸ್ಥೆಯ ಸ್ಥಾಪನೆಗೆ ಬಳಸಲು ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ. ಕೌಶಲ್ಯ ಶಿಕ್ಷಣ ಅಗತ್ಯತೆ ತುಂಬಲು ಸೇಡಂನಲ್ಲಿ ಜಿಟಿಟಿಸಿ ಸಂಸ್ಥೆ ಮಹತ್ತರ ಪಾತ್ರ ನಿಭಾಯಿಸಲಿದೆ ಎಂದು ಡಾ. ಶರಣಪ್ರಕಾಶ ಹೇಳಿದರು.

ಕಲಬುರಗಿ ಹೆಲ್ತ್‌ ಹಬ್‌: ಬರುವ ದಿನಗಳಲ್ಲಿ ಅತ್ಯಾಧುನಿಕ ಬರ್ನ್‌ ವಾರ್ಡ್‌, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ನಿಮ್ಹಾನ್‌, ಡಯಾಬೆಟಾಲಜಿ ಸಂಸ್ಥೆಗಳು ಬರಲಿವೆ. ಬಡವರು ಖಾಸಗಿ ಆಸ್ಪತ್ರೆಗೆ ಹೋಗದೆ ಸರ್ಕಾರಿ ಸಂಸ್ಥೆಗಳಲ್ಲಿ ಉತ್ಕೃಷ್ಟ ಸೇವೆ ಹೊಂದಬಹುದಾಗಿದೆ ಎಂದರು.

ಇಂಜಿನಿಯರ್‌ ನರಸಿಂಹ ರೆಡ್ಡಿ, ಪುರಸಭೆ ಅಧ್ಯಕ್ಷ ವಿಜೇಂದ್ರ ರುದನೂರ್‌, ಉಪಾಧ್ಯಕ್ಷೆ ಸೈಜಾದಬಿ ನಾಡೇಪಲ್ಲಿ, ಸಹಾಯಕ ಆಯುಕ್ತ ಪ್ರಭು ರೆಡ್ಡಿ, ತಹಶೀಲ್ದಾರ್‌ ಶ್ರೇಯಾಂಕ್‌ ಧನಶ್ರಿ, ಮುಖಂಡರಾದ ಬಸವರಾಜ ಪಾಟೀಲ್‌ ಊಡಗಿ, ಶಿವಶರಣ ರೆಡ್ಡಿ ಪಾಟೀಲ್‌ ಇದ್ದರು.

ಸೇಡಂ ಒಳ ಚರಂಡಿ ಜಾಲ ಬಲವರ್ಧನೆಸೇಡಂ ಪಟ್ಟಣದಲ್ಲಿ ಒಳ ಚರಂಡಿ ಜಾಲ ಬಲವರ್ಧನೆಗೂ ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯಡಿಯಲ್ಲಿ ಇನ್ನು 800 ಮೀಟರ್‌ ಕಾಮಗಾರಿ ಬಾಕಿ ಇದೆ. ಇದು ಜೋಡಣೆಯಾದಲ್ಲಿ ಒಳ ಚರಂಡಿ ಸಮಸ್ಯೆಯೂ ಬಗೆಹರಿಯಲಿದೆ. ₹56 ಕೋಟಿ ಯೋಜನೆ ಇದಾಗಿದ್ದು, ಈಗಾಗಲೇ ಎಸ್‌ಟಿಪಿ ಕೂಡ ಆಗಿದೆ ಎಂದು ಸಚಿವ ಡಾ. ಶರಣಪ್ರಕಾಶ ಹೇಳಿದರು.

ಸೇಡಂ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೆಸೇಡಂ ಅಭಿವೃದ್ಧಿಗೆ ಸಾಕಷ್ಟು ಕೆಲಸಗಳು ಸಾಗಿವೆ. ಇಲ್ಲಿನ ಪುರಸಭೆ ನಗರಸಭೆಯಾಗಿ ಮೇಲ್ದರ್ಗೆಗೇರಿಸುವ ಪ್ರಕ್ರಿಯೆ ಸಾಗಿದೆ. ಇದಲ್ಲದೆ ಸೇಡಂ ರಸ್ತೆ ಸಂಪರ್ಕ ಬಲವರ್ಧನೆಗೆ ಈಗಾಗಲೇ ₹500 ಕೋಟಿ ವಿವಿಧ ಕಾಮಗಾರಿ ತರಲಾಗಿದೆ ಎಂದು ಸಚಿವರು ಹೇಳಿದರು.

ಸೇಡಂ ತಾಲೂಕು ಆಸ್ರತ್ರೆಗೆ ₹5 ಕೋಟಿ ಮಂಜೂರುಸೇಡಂ ತಾಲೂಕು ಆಸ್ಪತ್ರೆಯಲ್ಲಿನ ಹಾಸಿಗೆ ಸಂಖ್ಯೆ 100 ರಿಂದ 150 ಕ್ಕೆ ಹೆಚ್ಚಿಸಲಾಗಿದೆ. ಇಲ್ಲಿ ಅಭಿವೃದ್ಧಿ ಕೆಲಸಗಲಿಗೆ ಇನ್ನೂ ₹5 ಕೋಟಿ ಮಂಜೂರಾಗಿದೆ. ಸೇಡಂನಲ್ಲಿಯೂ ಆರೋಗ್ಯ ಜಾಲ ಬಲವರ್ಧನೆಯೇ ತಮ್ಮ ಗುರಿ, ಬಡವರು ಖಾಸಗಿ ಆಸ್ಪತ್ರೆಗೆ ಹೋಗದೆ ಸರ್ಕಾರಿ ಸೇವೆಯನ್ನು ಹೊಂದುವಂತೆ ಕರೆ ನೀಡಿದರು.