ಸಾರಾಂಶ
- ಚರ್ಚಿಸಿ, ಫಲಾನುಭವಿಗಳ ಪಟ್ಟಿ ಅಂತಿಮ: ಪಿಡಿಒ ಹೇಳಿಕೆ- - - ಹರಿಹರ: ತಾಲೂಕಿನ ಕೆ.ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ಲೆಗೊಂದಿ ಗ್ರಾಮದ ವಸತಿ ರಹಿತ ಮಾದಿಗ ಹಾಗೂ ಹಿಂದುಳಿದ ವರ್ಗದ ಕುಟುಂಬದವರಿಗೆ ಶೀಘ್ರವೆ ನಿವೇಶನಗಳನ್ನು ಹಂಚಿಕೆ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಹರಿಹರ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಆಗ್ರಹಿಸಿದರು. ಕೆ.ಬೇವಿನಹಳ್ಳಿ ಗ್ರಾಪಂ ಕಚೇರಿಯಲ್ಲಿ ಶುಕ್ರವಾರ ನಡೆದ ಕಡ್ಲೆಗೊಂದಿ ಗ್ರಾಮಸಭೆ ನಂತರ ಗ್ರಾಪಂ ಆಡಳಿತಕ್ಕೆ ಮನವಿ ಮಾಡಿದ ಅವರು, ವಸತಿ ಸೌಲಭ್ಯ ಒದಗಿಸಲು ಆಗ್ರಹಿಸಿ ಈ ಹಿಂದೆ ತಾಲೂಕು ಕಚೇರಿ ಎದುರು ಸಂಘಟನೆಯಿಂದ 57 ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿ ತಾಲೂಕು ಆಡಳಿತದ ಗಮನ ಸೆಳೆಯಲಾಗಿತ್ತು. ಗ್ರಾಮದಲ್ಲಿ ಮಾದಿಗ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ 120 ವಸತಿರಹಿತ ಕುಟುಂಬಗಳಿಗೆ ನಿವೇಶನ ಕಲ್ಪಿಸಲು ಗ್ರಾಮದ ಸರ್ಕಾರಿ ಜಮೀನನ್ನು ಗ್ರಾಪಂ, ತಾಪಂ ಹಾಗೂ ತಾಲೂಕು ಆಡಳಿತದವರು ಗುರುತಿಸಿದ್ದಾರೆ. ಆದಷ್ಟು ಬೇಗ ಮುಂದಿನ ಪ್ರಕ್ರಿಯೆಗಳನ್ನು ಕೈಗೊಂಡು, ಫಲಾನುಭವಿಗಳಿಗೆ ನಿವೇಶನಗಳ ಹಂಚಿಕೆ ಮಾಡಬೇಕು ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀಬಾಯಿ ಮಾತನಾಡಿ, ನಿರ್ವಸತಿಕರು ಈಗಾಗಲೇ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಒಂದು ಮನೆಯಲ್ಲಿ 1ಕ್ಕಿಂತ ಹೆಚ್ಚು ಕುಟುಂಬಗಳಿವೆ. ಪ್ರತ್ಯೇಕ ನಿವೇಶನ ನೀಡುವಂತೆ ಆಗ್ರಹಗಳು ಕೇಳಿಬಂದಿವೆ. ಈ ಕುರಿತು ಸ್ಥಳ ಪರಿಶೀಲಿಸಿ, ಹಿರಿಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸಭೆಯಲ್ಲಿ ಚರ್ಚಿಸಿ, ಫಲಾನುಭವಿಗಳ ಪಟ್ಟಿಯನ್ನು ಅಂತಿಮ ಮಾಡಲಾಗುವುದು ಎಂದರು.ಗ್ರಾಪಂ ಅಧ್ಯಕ್ಷೆ ರೇಖಾ ಹಾಲೇಶ್, ಉಪಾಧ್ಯಕ್ಷೆ ಮಂಜಮ್ಮ ಮಂಜಪ್ಪ, ಸದಸ್ಯರಾದ ಲೋಕೇಶ್, ಯಶೋದಮ್ಮ, ಜಯಪ್ಪ, ಗಿರಿಗೌಡ, ಮಾತೆಂಗೆಮ್ಮ ತಿಮ್ಮಣ್ಣ, ಟಿ.ಕೆ. ಮಹೇಶ್ವರಪ್ಪ, ಗ್ರಾಮದ ಮುಖಂಡರಾದ ಸಂಜೀವ್, ಹನುಮಂತಪ್ಪ, ಬಸವರಾಜ್, ಪರಮೇಶ್, ಅಣ್ಣಪ್ಪ, ಸಾಕಮ್ಮ, ಲೋಕಪ್ಪ, ರಾಜಪ್ಪ, ಶೀಲಮ್ಮ, ಶಿವಪ್ಪ, ಮಲ್ಲಮ್ಮ, ರಂಗಪ್ಪ, ಲಕ್ಷ್ಮಣರೆಡ್ಡಿ, ರೇಣುಕಮ್ಮ, ಕೊಟ್ರೇಶಿ, ನಿಂಗಪ್ಪ ನಂದಿಗಾವಿ ಹಾಗೂ ಇತರರಿದ್ದರು.
- - - -8ಎಚ್‍ಆರ್‍ಆರ್1:ಹರಿಹರ ತಾಲೂಕಿನ ಕೆ.ಬೇವಿನಹಳ್ಳಿ ಗ್ರಾಪಂ ಕಚೇರಿಯಲ್ಲಿ ಶುಕ್ರವಾರ ಕಡ್ಲೆಗೊಂದಿ ಗ್ರಾಮಸಭೆ ನಂತರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ವತಿಯಿಂದ ನಿರ್ವಸತಿಕರಿಗೆ ವಸತಿ ಸೌಲಭ್ಯ ದೊರಕಿಸಲು ಆಗ್ರಹಿಸಲಾಯಿತು.