ರಾಮನಗರ: ಮಾನವ ಜನಾಂಗಕ್ಕೆ ಸನ್ಮಾರ್ಗ ತೋರುವತ್ತಾ ಕೈವಾರ ತಾತಯ್ಯನವರು ರಚಿಸಿದ ಕಾಲಜ್ಞಾನ ಇಂದಿಗೂ ಪ್ರಸ್ತುತವಾಗಿದೆ. ಇಂತಹ ಮಹನೀಯರ ಜಯಂತಿ ಆಚರಣೆಗಳಿಂದ ಅವರ ವಿಚಾರಧಾರೆಗಳನ್ನು ಪುನರ್‌ ಮನನ ಮಾಡಿ ಜನರಿಗೆ ತಿಳಿಸಿಕೊಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸತೀಶ್ ಹೇಳಿದರು.

ನಗರದ ಕಂದಾಯ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿ (ಕೈವಾರ ತಾತಯ್ಯ) ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀ ಯೋಗಿ ನಾರಾಯಣ ಯತೀಂದ್ರ (ಕೈವಾರ ತಾತಯ್ಯ) ಅವರು ಒಂದೇ ಸಮುದಾಯಕ್ಕೆ ಸೀಮಿತರಾಗಿಲ್ಲ. ಅವರು ಎಲ್ಲಾ ಸಮುದಾಯಕ್ಕೂ ಸೇರಿದವರಾಗಿದ್ದಾರೆ, ಶ್ರೀ ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಅವರು ಮುಂದಿನ ಕಾಲಜ್ಞಾನ ಭವಿಷ್ಯವನ್ನು ನುಡಿಯುತ್ತಿದ್ದರು ಹಾಗೂ ಇವರ ಮೂಲ ಹೆಸರು ನಾರಾಯಣಪ್ಪ ಇವರು ಕೈವಾರ ತಾತಯ್ಯ ಎಂದು ಪ್ರಸಿದ್ಧರಾಗಿದ್ದರು ಎಂದು ಹೇಳಿದರು.

ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಅವರು ಸುಮಾರು ನೂರ ಹತ್ತು ವರ್ಷಗಳ ಕಾಲ ಬದುಕಿದ್ದರು. ಇವರ ಮೂಲ ಸ್ಥಳ ಚಿಕ್ಕಬಳ್ಳಾಪುರ. ಇವರು ಭಕ್ತಿ ಗೀತೆಗಳು, ತತ್ವಪದಗಳು ಹಾಗೂ ಕಾಲಜ್ಞಾನದ ಭವಿಷ್ಯವನ್ನು ಹೆಚ್ಚಾಗಿ ನುಡಿದಿದ್ದರು ಎಂದು ಸತೀಶ್ ತಿಳಿಸಿದರು.

ಸಮುದಾಯದ ಮುಖಂಡರಾದ ಸುರೇಶ್ ಮಾತನಾಡಿ, ಸಾಧು ಸತ್ಪರುಷರು, ಶರಣರು ಮತ್ತು ದಾರ್ಶನಿಕರ ನುಡಿಗಳು ಇಂದಿಗೂ ಜನಸಾಮಾನ್ಯರ ಬದುಕನ್ನು ಹಸನಗೊಳಿಸುವ ಮತ್ತು ವಿಚಾರವಂತರನ್ನಾಗಿ ಮಾಡುವ ಮೂಲಕ ನೈತಿಕ ಪ್ರಜ್ಞೆಯನ್ನು ಅರಳಿಸುವ ನಿಟ್ಟಿನಲ್ಲಿ ಮಹನೀಯರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಅನಕ್ಷರತೆ, ಮೂಢನಂಬಿಕೆಗಳು ನಾಗರೀಕ ಸಮಾಜವನ್ನು ಹಿನ್ನಡೆಯತ್ತ ಕೊಂಡೊಯುತ್ತವೆ. ಇವುಗಳಿಂದ ಹೊರಬಂದು ಜ್ಞಾನಾರ್ಜನೆಯಲ್ಲಿ ತೊಡಗಿ ಸಮಾಜವನ್ನು ಮುನ್ನಡಿಸಬೇಕು ಎಂದು ಕೈವಾರ ತಾತಯ್ಯನವರು ತಮ್ಮ ಗೀತೆ, ವಚನಗಳಿಂದ ಸಾರಿದರು ಎಂದು ಹೇಳಿದರು.


ಬಲಿಜ ಸಮುದಾಯದ ಮುಖಂಡರುಗಳಾದ ಕಿಶೋರ್ ನಾಯ್ಡು, ಕೃಷ್ಣ, ಬಾಲರಾಜು, ಹನುಮಯ್ಯ, ರಾಮಾಂಜನೇಯ, ರಾಮಣ್ಣ, ರಾಮಚಂದ್ರ, ಅನಂತ ಪದ್ಮನಾಥ, ಗೋಪಾಲಕೃಷ್ಣ, ಮಂಜು, ಶ್ರೀನಿವಾಸ, ರಾಮಸ್ವಾಮಿ, ನರೇಂದ್ರಬಾಬು, ಸುಶ್ಮಿತ, ನರಸಿಂಹಯ್ಯ, ಪದ್ಮನಾಬ್, ನರೇಂದ್ರ ಮತ್ತಿತರರು ಉಪಸ್ಥಿತರಿದ್ದರು.

3ಕೆಆರ್ ಎಂಎನ್ 7.ಜೆಪಿಜಿ

ರಾಮನಗರದ ಕಂದಾಯ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿ ಆಚರಿಸಲಾಯಿತು.