ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ಕಲ್ಲಡ್ಕ ಪ್ಲೈ ಓವರ್ ಹಾಗೂ ಸರ್ವೀಸ್ ರಸ್ತೆಯ ಕಾಮಗಾರಿ ಬಹುತೇಕ ಮಾರ್ಚ್ ಅಂತ್ಯದಲ್ಲಿ ಪೂರ್ಣಗೊಳ್ಳಲಿದ್ದು, ಏಪ್ರಿಲ್ ತಿಂಗಳಲ್ಲಿ ಸಂಚಾರಕ್ಕೆ ಮುಕ್ತಗೊಳಿಸುವ ಭರವಸೆಯನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ಕಂಪನಿ ಕೆಎನ್‌ಆರ್‌ಸಿ ನೀಡಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದರು.ಅವರು ಗುರುವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಜೊತೆ ಬಿ.ಸಿ.ರೋಡಿನಿಂದ ಉಪ್ಪಿನಂಗಡಿವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೀಕ್ಷಣೆ ನಡೆಸಿದ ಬಳಿಕ ಕಾಂಚನದಲ್ಲಿರುವ ಕೆ.ಎನ್.ಆರ್.ಸಿ. ಕಂಪನಿಯ ಪ್ಲಾಂಟ್‌ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.
ಬಿ.ಸಿ. ರೋಡಿನಿಂದ ಪೆರಿಯಶಾಂತಿವರೆಗೆ ಸುಮಾರು 45 ಕಿ.ಮೀ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಮಳೆಗಾಲದ ಮೊದಲು ಮುಗಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಭರವಸೆಯನ್ನು ಕಂಪನಿ ನೀಡಿದೆ. ಬ್ಲಾಸ್ಟಿಂಗ್ ಸಮಸ್ಯೆ ಇರುವ ಕಡೆ ಮಾತ್ರ ಕಾಮಗಾರಿ ತುಸು ವಿಳಂಬವಾಗಬಹುದು ಬಿಟ್ಟರೆ ಉಳಿದ ಎಲ್ಲ ಕಡೆ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಾಗಿ ಅವರು ತಿಳಿಸಿದರು.ಮೆಲ್ಕಾರ್ ಸಮೀಪದ ನರಹರಿ ಹಾಗೂ ನೀರಕಟ್ಟೆ ಎಂಬಲ್ಲಿ ತಡೆಗೋಡೆ ಹಾಗೂ ಬ್ಲಾಸ್ಟಿಂಗ್ ಸಮಸ್ಯೆ ಇದ್ದು ರಸ್ತೆಯ ಕಾಮಗಾರಿಯನ್ನು ಪೂರ್ತಿಗೊಳಿಸುವಲ್ಲಿ ತುಸು ವಿಳಂಬವಾಗಬಹುದು. ಅದು ಬಿಟ್ಟರೆ ಉಳಿದಂತೆ ಎಲ್ಲೂ ಕೂಡ ರಸ್ತೆ ನಿರ್ಮಾಣಕ್ಕೆ ಅಡೆತಡೆಗಳಿಲ್ಲ. ಹೆದ್ದಾರಿ ನಿರ್ಮಾಣದ ವೇಳೆ ಕೆಲವುಕಡೆಗಳಲ್ಲಿ ರಸ್ತೆ ಸಮಸ್ಯೆ, ಮಳೆಗಾಲದಲ್ಲಿ ಜಮೀನಿಗೆ ನೀರು ನುಗ್ಗುವ ಸಮಸ್ಯೆ ,ಕ್ರಾಸಿಂಗ್ ಹೀಗೆ ಇನ್ನಿತರ ಸಣ್ಣಪುಟ್ಟ ವ್ಯತ್ಯಾಸಗಳು ಇವೆ. ಈ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮದ ಬಗ್ಗೆ ಚರ್ಚಿಸುವುದಾಗಿ ಅವರು ತಿಳಿಸಿದರು.
ಪಾಣೆಮಂಗಳೂರು, ಮೆಲ್ಕಾರ್, ಮಾಣಿ, ಪೆರಮೊಗ್ರು, ಉಪ್ಪಿನಂಗಡಿ, ಸುಬ್ರಹ್ಮಣ್ಯ ಕ್ರಾಸ್ ಕಡೆಗಳಲ್ಲಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್ ಹಾಗೂ ಕಲ್ಲಡ್ಕದಲ್ಲಿ ಅಂತಿಮ ಹಂತದಲ್ಲಿರುವ ಪ್ಲೈ ಓವರ್ ಕಾಮಗಾರಿಯನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ವೀಕ್ಷಿಸಿದರು.ಬಿ.ಸಿ. ರೋಡ್ ಭೇಟಿ ವೇಳೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಬೂಡಾ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಚೆನ್ನಪ್ಪ ಕೋಟ್ಯಾನ್, ಹರಿಕೃಷ್ಣ ಬಂಟ್ವಾಳ, ಸುಲೋಚನಾ ಭಟ್, ಗೋವಿಂದಪ್ರಭು, ತುಂಗಪ್ಪ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.