ಬಿಗ್‌ಬಾಸ್ ಹನುಮಂತಗೆ ಸವಣೂರಲ್ಲಿ ಅದ್ಧೂರಿ ಸ್ವಾಗತ

| Published : Jan 31 2025, 12:49 AM IST

ಸಾರಾಂಶ

ಬಿಗ್ ಬಾಸ್ ರಿಯಾಲಿಟಿ ಶೋ ವಿಜೇತ, ಗಾಯಕ ಹನುಮಂತ ಲಮಾಣಿ ಅವರಿಗೆ ಸವಣೂರು ಪಟ್ಟಣ ಹಾಗೂ ಸ್ವಗ್ರಾಮ ಚಿಲ್ಲೂರು ಬಡ್ನಿಯಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಬಿಗ್‌ಬಾಸ್ ಗೆದ್ದ ಬಳಿಕ ಮೊದಲ ಸಲ ಗುರುವಾರ ಸ್ವಗ್ರಾಮಕ್ಕೆ ಹನುಮಂತ ಆಗಮಿಸಿದರು. ಅಭಿಮಾನಿಗಳು ಅವರನ್ನು ಸಂಭ್ರಮದಿಂದ ಸ್ವಾಗತಿಸಿ, ಮೆರವಣಿಗೆ ನಡೆಸಿ ಕುಣಿದು, ಕುಪ್ಪಳಿಸಿದರು.

ಸವಣೂರು: ಬಿಗ್ ಬಾಸ್ ರಿಯಾಲಿಟಿ ಶೋ ವಿಜೇತ, ಗಾಯಕ ಹನುಮಂತ ಲಮಾಣಿ ಅವರಿಗೆ ಸವಣೂರು ಪಟ್ಟಣ ಹಾಗೂ ಸ್ವಗ್ರಾಮ ಚಿಲ್ಲೂರು ಬಡ್ನಿಯಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಬಿಗ್‌ಬಾಸ್ ಗೆದ್ದ ಬಳಿಕ ಮೊದಲ ಸಲ ಗುರುವಾರ ಸ್ವಗ್ರಾಮಕ್ಕೆ ಹನುಮಂತ ಆಗಮಿಸಿದರು. ಅಭಿಮಾನಿಗಳು ಅವರನ್ನು ಸಂಭ್ರಮದಿಂದ ಸ್ವಾಗತಿಸಿ, ಮೆರವಣಿಗೆ ನಡೆಸಿ ಕುಣಿದು, ಕುಪ್ಪಳಿಸಿದರು.

ಸವಣೂರಿನ ಬ್ರಹ್ಮಲಿಂಗೇಶ್ವರ ಸರ್ಕಲ್‌ನಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರೆದ ಕಾರಿನಲ್ಲಿ ಮೆರವಣಿಗೆಯಲ್ಲಿ ಸಾಗಿದ ಹನುಮಂತ, ಅಭಿಮಾನಿಗಳತ್ತ ಕೈ ಬೀಸಿ ಅಭಿನಂದನೆ ಸಲ್ಲಿಸಿದರು. ಬಳಿಕ ಹುಟ್ಟೂರಾದ ಚಿಲ್ಲೂರುಬಡ್ನಿ ತಾಂಡದ ವರೆಗೂ ಮೆರವಣಿಗೆ ನಡೆಸಿದರು. ಡಿಜೆಯಲ್ಲಿ ಹನುಮಂತ ಹಾಡಿದ ಹಾಡುಗಳನ್ನು ಹಾಕಿ ಅಭಿಮಾನಿಗಳು ಸಂಭ್ರಮಿಸಿದರು.

ಎಲ್ಲರೂ ಹೇಗಿದ್ದೀರಿ? ನಾನಂತು ಮೂರು ತಿಂಗಳಿನಿಂದ ಸರಿಯಾಗಿ ಊಟ ಮಾಡಿಲ್ಲ. ಈಗ ಹೋಗಿ ಊಟ ಮಾಡ್ತೀನಿ ಎಂದು ಹಳ್ಳಿ ಸೊಗಡಿನಲ್ಲಿ ಹನುಮಂತು ಕೇಳಿದರು. ತಮ್ಮೂರಿನ ಪ್ರತಿಭೆ ಹನುಮಂತ ಲಮಾಣಿ ಕಣ್ತುಂಬಿಕೊಳ್ಳಲು ಸವಣೂರು, ಶಿಗ್ಗಾಂವಿ, ಹಾವೇರಿ, ಹಾನಗಲ್ಲ ಮತ್ತು ಹೊರ ಜಿಲ್ಲೆಗಳಿಂದ ಬಂದಿದ್ದ ಜನರು ಹನುಮಂತ ಕೈ ಕುಲುಕಿ ಶುಭಾಶಯ ತಿಳಿಸಿದರು.

ಮಗನ ಮದುವೆ ವಿಚಾರವಾಗಿ ಮಾತನಾಡಿದ ತಾಯಿ ಶೀಲವ್ವ ಲಮಾಣಿ, ಮೂರು ತಿಂಗಳಿನಿಂದ ಮಗನ ಜತೆ ಮಾತಾಡೋಕೆ ಆಗಿಲ್ಲ, ಇನ್ಮೆಲೆ ಮಾತಾಡಿ ಮದುವೆಗೆ ಸಿದ್ಧತೆ ಮಾಡ್ತೀವಿ ಎಂದರು. ಖುಷಿ ಆಗಿದೆ: ನೀವು ಪ್ರೀತಿ, ಅಭಿಮಾನದಿಂದ ವೋಟ್ ಹಾಕಿ ಗೆಲ್ಲಿಸಿದ್ದೀರಿ. ಹಿಂದೆ ಎರಡ್ಮೂರು ಸಾರಿ ಬಿಗ್‌ಬಾಸ್‌ಗೆ ಕರೆದರೂ ಹೋಗೋಕೆ ಮನಸ್ಸು ಇದ್ದಿರಲಿಲ್ಲ, ಈ ಸಾರಿ ಸ್ನೇಹಿತರು ಹೋಗಿ ಬಾ ಅಂತಾ ಒತ್ತಾಯ ಮಾಡಿದ್ದರಿಂದ ಬಿಗ್‌ಬಾಸ್‌ಗೆ ಹೋಗಿದ್ದೆ. ಸುಮ್ನೆ ಆಟ ಆಡಿ, ಮಜಾ ಮಾಡೋಣ ಅಂತಾ ಹೋಗಿದ್ದೆ. ಗೆಲ್ಲುವ ನಿರೀಕ್ಷೆ ಇರಲಿಲ್ಲ, ಈಗ ಬಿಗ್‌ಬಾಸ್ ಗೆದ್ದಿದ್ದಕ್ಕೆ ತುಂಬಾ ಖುಷಿ ಆಗಿದೆ ಎಂದು ಹನುಮಂತಪ್ಪ ಸಂತಸ ಹಂಚಿಕೊಂಡರು.