ಸಂಘಟನೆಗಳು ನಿರಂತರವಾಗಿ ಯಶಸ್ವಿ ಚಟುವಟಿಕೆಗಳನ್ನು ನಡೆಸಬೇಕಾದರೆ ಸದಸ್ಯರ ಶ್ರದ್ಧೆ, ಭಕ್ತಿ ಹಾಗೂ ಪರಿಶ್ರಮವೇ ಮುಖ್ಯ ಕಾರಣ ಎಂದು ಶ್ರೀ ಕ್ಷೇತ್ರ ಕಾಂತಾವರದ ಧರ್ಮದರ್ಶಿ ಜೀವಂಧರ ಬಲ್ಲಾಳ್ ಹೇಳಿದರು.
ಕಾರ್ಕಳ: ಸಂಘಟನೆಗಳು ನಿರಂತರವಾಗಿ ಯಶಸ್ವಿ ಚಟುವಟಿಕೆಗಳನ್ನು ನಡೆಸಬೇಕಾದರೆ ಸದಸ್ಯರ ಶ್ರದ್ಧೆ, ಭಕ್ತಿ ಹಾಗೂ ಪರಿಶ್ರಮವೇ ಮುಖ್ಯ ಕಾರಣ ಎಂದು ಶ್ರೀ ಕ್ಷೇತ್ರ ಕಾಂತಾವರದ ಧರ್ಮದರ್ಶಿ ಜೀವಂಧರ ಬಲ್ಲಾಳ್ ಹೇಳಿದರು.
ಶ್ರೀ ಕ್ಷೇತ್ರ ಕಾಂತಾವರದಲ್ಲಿ ಭಾನುವಾರ ನಡೆದ ಯಕ್ಷದೇಗುಲದ ವಾರ್ಷಿಕ ಯಕ್ಷೋಲ್ಲಾಸ ಸಂಭ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮೂಡುಬಿದಿರೆ ಧನಲಕ್ಷ್ಮೀ ಸಮೂಹ ಸಂಸ್ಥೆಯ ಶ್ರೀಪತಿ ಭಟ್, ಗ್ರಾಮೀಣ ಪ್ರದೇಶದಲ್ಲೇ 24ನೇ ವರ್ಷದ ಯಕ್ಷೋಲ್ಲಾಸವನ್ನು ಯಶಸ್ವಿಯಾಗಿ ನಡೆಸಿ ಬೆಳ್ಳಿ ಸಂಭ್ರಮದತ್ತ ಸಾಗುತ್ತಿರುವ ಯಕ್ಷದೇಗುಲದ ಕಲಾಸೇವೆಯನ್ನು ಶ್ಲಾಘಿಸಿದರು.
ಕಾರ್ಕಳದ ಉದ್ಯಮಿ ವಿಜಯ ಶೆಟ್ಟಿ ಮಾತನಾಡಿ, ಕಲೆಯನ್ನೇ ಆರಾಧಿಸುವ ಕಲಾವಿದರನ್ನು ಸರಸ್ವತಿ ಎಂದಿಗೂ ಕೈಬಿಡುವುದಿಲ್ಲ; ಕಾಂತಾವರದ ಯಕ್ಷದೇಗುಲ ಸಂಸ್ಥೆ ಅದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದರು.ಈ ಸಂದರ್ಭದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ ಅವರಿಗೆ ದಿ. ಶ್ರೀಧರ ಭಂಡಾರಿ ಸಂಸ್ಮರಣಾರ್ಥ ಹಾಗೂ ಬಾಯಾರು ರಮೇಶ್ ಶೆಟ್ಟಿ ಅವರಿಗೆ ಬಾಯಾರು ಪ್ರಕಾಶ್ಚಂದ್ರ ರಾವ್ ಸಂಸ್ಮರಣಾರ್ಥ ಯಕ್ಷದೇಗುಲ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲಾವಿದ ಹಾಗೂ ಸಂಘಟಕ ಎಂ. ದೇವಾನಂದ ಭಟ್ ಸಂಸ್ಮರಣಾ ಹಾಗೂ ಅಭಿನಂದನಾ ಭಾಷಣ ಮಾಡಿದರು.ಬೆಳಗ್ಗೆ ಕ್ಷೇತ್ರದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್ ಉದ್ಘಾಟಿಸಿದರು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಯಕ್ಷಗಾನದ ನಾಲ್ವರು ಬಾಲ ಕಲಾವಿದರಿಗೆ ತಲಾ ₹ 1,000 ವಿದ್ಯಾರ್ಥಿವೇತನ ಹಾಗೂ ಕಾಂತಾವರ ಪ್ರಾಥಮಿಕ ಶಾಲೆಗೆ ₹10,000 ವಿದ್ಯಾನಿಧಿ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಆಶಿಕ್ ಸಾಲ್ಯಾನ್, ಉಷಾ ಶ್ರೀಧರ ಭಂಡಾರಿ, ಬಾಲಮುರಳಿ, ಪ್ರಭಾಕರ ಕುಲಾಲ್, ವಿಜಯ ಸಾಲ್ಯಾನ್, ಚಂದ್ರಹಾಸ ಜೈನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಹಾವೀರ ಪಾಂಡಿ ಸ್ವಾಗತಿಸಿದರು. ಶಿವಪ್ರಸಾದ್ ಭಟ್ ಕಾರ್ಯಕ್ರಮ ನಿರೂಪಿಸಿ, ರಂಜಿತ್ ಜೈನ್ ವಂದಿಸಿದರು.ಬಳಿಕ ಪ್ರಸಿದ್ಧ ಕಲಾವಿದರಿಂದ ''''''''''''''''ಚಂದ್ರಾವಳಿ ವಿಲಾಸ'''''''''''''''', ''''''''''''''''ಸುಧನ್ವಾರ್ಜುನ'''''''''''''''' ತಾಳಮದ್ದಳೆ ಹಾಗೂ ಯಕ್ಷಬಾಲಕರಿಂದ ''''''''''''''''ಮತ್ಸ್ಯ'''''''''''''''', ''''''''''''''''ವರಾಹ'''''''''''''''' ಮತ್ತು ''''''''''''''''ಮಾರಣಾಧ್ವರ'''''''''''''''' ಯಕ್ಷಗಾನ ಪ್ರದರ್ಶನಗಳು ನಡೆಯುವ ಮೂಲಕ ಯಕ್ಷೋಲ್ಲಾಸ ಸಂಭ್ರಮಕ್ಕೆ ಮೆರುಗು ಮೂಡಿತು.